ಶಾಸ್ತ್ರೀಯ ಭಾಷಾ ಸ್ಥಾನಮಾನದ ಚಾರಿತ್ರಿಕ ಹಿನ್ನೋಟ
Keywords:
ಸಂಸ್ಕೃತ, ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಭಾಷೆಗಳ ಚರಿತ್ರೆAbstract
ಅತ್ಯಂತ ಪ್ರಾಚೀನವೂ ಸ್ವತಂತ್ರವೂ ಸುದೀರ್ಘ ಸಮೃದ್ಧ ಸಾಹಿತ್ಯ ಪರಂಪರೆಯನ್ನು ಉಳ್ಳದ್ದು ಮತ್ತು ಹೆಚ್ಚು ಜನಬಳಕೆಯಲ್ಲ್ಲಿದ್ದ ಭಾಷೆಯನ್ನು ಶಾಸ್ತ್ರೀಯ ಭಾಷೆ ಎಂದು ಕರೆಯುತ್ತಾರೆ. ಶಾಸ್ತ್ರೀಯ ಎನ್ನುವುದಕ್ಕೆ ಸನಾತನ, ಪ್ರಾಚೀನ, ಪಾರಂಪರಿಕ, ಶಾಸ್ತ್ರ ಸಮ್ಮತವಾದ ಎಂಬರ್ಥಗಳಿವೆ. ಪ್ರಪಂಚದ ಅತಿ ಪ್ರಾಚೀನ ಮತ್ತು ಸಮೃದ್ಧವಾದ ಭಾಷೆಗಳನ್ನು ಕ್ಲಾಸಿಕಲ್ ಭಾಷೆಗಳೆಂದು, ಶಾಸ್ತ್ರೀಯ ಭಾಷೆಗಳೆಂದು ಕರೆಯುತ್ತಾರೆ. ಪ್ರಪಂಚದಲ್ಲಿರುವ ಶಾಸ್ತ್ರೀಯ (ಕ್ಲಾಸಿಕಲ್) ಭಾಷೆಗಳನ್ನು ಯುನೆಸ್ಕೋ ಮೂರು ವರ್ಗದಲ್ಲಿ ಗುರುತಿಸಿದೆ. ಅವುಗಳೆಂದರೆ:
ಇಂಡೋ ಯುರೋಪಿಯನ್ ಭಾಷೆಗಳು – ಕ್ಲಾಸಿಕಲ್ ಗ್ರೀಕ್, ಲ್ಯಾಟಿನ್, ಸಂಸ್ಕೃತ, ಕ್ಲಾಸಿಕಲ್, ಪರ್ಷಿಯನ್.
ಆಪ್ರೊ ಏಷಿಯಾಟಿಕ್ ಭಾಷೆಗಳು – ಕ್ಲಾಸಿಕಲ್ ಅರೇಬಿಕ್, ಹೀಬ್ರೂ.
ಸಿನೋ ಟಿಬೇಟಿಯನ್ ಭಾಷೆಗಳು – ಕ್ಲಾಸಿಕಲ್ ಚೈನೀಸ್.
ಈ ರೀತಿಯಾಗಿ ಯುನೆಸ್ಕೋ ಪಟ್ಟಿ ಮಾಡಿದ ಕ್ಲಾಸಿಕಲ್ ಭಾಷೆಗಳು ಒಂದು ಕಾಲದಲ್ಲಿ ಜೀವಂತ ಭಾಷೆ ಸಾಹಿತ್ಯ ಸಮೃದ್ಧಿಗಳನ್ನು ಹೊಂದಿದ್ದು, ಅನ್ಯ ಭಾಷೆ ಸಾಹಿತ್ಯಗಳ ಮೇಲೆ ಪ್ರಭಾವ ಪ್ರೇರಣೆಗಳನ್ನು ನೀಡಬಲ್ಲ ಮೌಲ್ಯಗಳಿಂದ ಕೂಡಿದ್ದು ಕ್ರಮೇಣ ಬಳಕೆಯಿಲ್ಲದ ಕಾರಣದಿಂದಾಗಿ ಈ ಭಾಷೆಗಳು ಅವಸಾನಗೊಂಡಿವೆ. ಹೀಗೆ ಅವಸಾನಗೊಂಡಂತಹ ಭಾಷೆಗಳನ್ನು ಅವುಗಳ ಲಿಖಿತ ಸ್ವರೂಪದ ಸಾಹಿತಿಕ ದಾಖಲೆಗಳನ್ನು ಆಧರಿಸಿ ಅವುಗಳನ್ನು ಜಾಗತಿಕ ಕ್ಲಾಸಿಕಲ್ ಭಾಷೆಯೆಂದು ಕರೆಯುತ್ತಾರೆ. ಭಾಷೆಗಳನ್ನು ಶಾಸ್ತ್ರೀಯ ಭಾಷೆಯೆಂದು ಮಾನ್ಯ ಮಾಡುವ ಪರಿಪಾಠ ಹಿಂದೇ ಬ್ರಿಟಿಷರ ಕಾಲದಿಂದಲೂ ಭಾರತದಲ್ಲಿ ಬಳಕೆಯಲ್ಲಿರುವುದು ಚರಿತ್ರೆಯಲ್ಲಿ ಉಲ್ಲೇಖಗೊಂಡಿದೆ. ಮೊಘಲರ ನಂತರ ಆಡಳಿತದ ಚುಕ್ಕಾಣಿ ಹಿಡಿದ ಬ್ರಿಟಿಷರು ಪರ್ಷಿಯನ್ ಮತ್ತು ಅರೇಬಿಕ್ ಭಾಷೆಗಳನ್ನು ಶಾಸ್ತ್ರೀಯ ಭಾಷೆಗಳೆಂದು ಪರಿಗಣಿಸಿದರು. ಇದಕ್ಕೆ ಮುಖ್ಯ ಕಾರಣ ಪರ್ಶಿಯನ್, ಅರೇಬಿಕ್ ಧಾರ್ಮಿಕ ಕೆಲಸಗಳಲ್ಲಿ ಬಳಕೆಯಾಗುತ್ತಿದ್ದು, ಶ್ರೇಷ್ಠವೆಂದು ಭಾವಿಸಿದ್ದುದ್ದು ಅಲ್ಲದೆ ಇವುಗಳು ತಮ್ಮ ಶಬ್ದ ಸಂಪತ್ತಿನ ಮೂಲಕ ಇತರೆ ಭಾಷೆಗಳನ್ನು ಬೆಳೆಸುತ್ತಿದ್ದಾರೆ ಎಂಬುದು ತಿಳಿದುಬರುತ್ತದೆ. ಹಾಗಾಗಿ ಇವುಗಳನ್ನು ಯುನೆಸ್ಕೋ ಸಹ ಶಾಸ್ತ್ರೀಯ ಭಾಷೆಯೆಂದು ಪರಿಗಣಿಸಿದೆ. ಭಾರತವೂ ಬಹುಭಾಷಿಕ ದೇಶ, ಇಲ್ಲಿ ನೂರಾರು ಭಾಷೆಗಳು, ಉಪಭಾಷೆಗಳು, ಬುಡಕಟ್ಟು ಭಾಷೆಗಳು ಇವೆ. ಇವುಗಳಲ್ಲಿ ಪ್ರಮುಖವಾದವುಗಳನ್ನು ಸಂವಿಧಾನ 8ನೇ ಅನುಸೂಚಿಯಲ್ಲಿ ಅಧಿಕೃತ ಭಾರತದ ಭಾಷೆಗಳೆಂದು ಗುರುತಿಸಿದೆ.