ಅಗ್ನಿ ಶ್ರೀಧರ್ ರವರ ಎದೆಗಾರಿಕೆ: ವಿಮರ್ಶಾತ್ಮಕ ವಿಶ್ಲೇಷಣೆ
Keywords:
ಭೂಗತ ಜಗತ್ತು, ಬಡತನ, ಪ್ರೀತಿ, ಕೊಲೆ, ಪರಿಸ್ಥಿತಿ, ಸುಪಾರಿ, ಆತಂಕ, ಸ್ನೇಹ, ವಿಶ್ವಾಸAbstract
ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಕನ್ನಡ ಸಾಹಿತ್ಯದಲ್ಲಿ ಪ್ರಕಟವಾದ ಅಸಲೀ ಕಥನಗಳ ಪೈಕಿ ಅಗ್ನಿ ಶ್ರೀಧರ್ ರವರ ‘ಎದೆಗಾರಿಕೆ’ ಕಾದಂಬರಿಗೆ ಮಹತ್ವದ ಸ್ಥಾನವಿದೆ. ಕಥೆಯೊಳಗಿರುವ ಪ್ರೇಮ ಕಥೆಯೂ ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಅಗ್ನಿ ಶ್ರೀಧರ್ ರವರು ಭೂಗತ ಜಗತ್ತಿನ ತಲ್ಲಣಗಳನ್ನು ವಿಭಿನ್ನ ಶೈಲಿಯಲ್ಲಿ ಈ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ಎದೆಗಾರಿಕೆ ಸೋನ ಎಂಬ ಮುಂಬೈನ ಸುಫಾರಿ ಕಿಲ್ಲರ್ ನ ಬದುಕಿನ ತಲ್ಲಣಗಳನ್ನು ಕುರಿತು ಮಾತನಾಡುತ್ತದೆ. ಭಾರತದಂತಹ ದೇಶದಲ್ಲಿ ಉದ್ಯೋಗ ದೊರೆಯದ ಕೆಲ ನಿರುದ್ಯೋಗಿ ಯುವಕರು ಕಾರಣಾಂತರಗಳಿಂದ ಭೂಗತ ಜಗತ್ತನ್ನು ಪ್ರವೇಶಿಸುತ್ತಾರೆ.
ಪ್ರಸ್ತುತ ಕೃತಿಯು ಕೆಳ ಮಧ್ಯಮ ವರ್ಗದ ಜನತೆಯ ಬದುಕಿನ ತಲ್ಲಣಗಳನ್ನು ಕುರಿತು ಮಾತನಾಡುತ್ತದೆ. ಏಕೆಂದರೆ ಪ್ರಸ್ತುತ ಕಾದಂಬರಿಯ ಕಥಾನಾಯಕ, ಕಥಾನಾಯಕಿ ಇಬ್ಬರೂ ಸಹ ಕೆಳ ಮಧ್ಯಮ ವರ್ಗದವರೇ. ಅವರ ಜೀವನದಲ್ಲಿ ದಡ ಸೇರದಿರಲು ಅವರ ಬಡತನವೇ ಕಾರಣವಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಕಾದಂಬರಿಯ ಶೀರ್ಷಿಕೆಯ ಬಗ್ಗೆ ಒಂದೆರಡು ಮಾತುಗಳನ್ನಾಡಲೇಬೇಕು. ಕಥಾನಾಯಕ ಸೋನುವಿಗೆ ಸಾವು ಎದುರಾಗಿದ್ದರೂ ಆತ ಸಾವಿಗೆ ಅಂಜುವುದಿಲ್ಲ. ಸೋನು ತಪ್ಪಿಸಿಕೊಳ್ಳಲು ಶ್ರೀಧರ್ ರವರು ಹಲವಾರು ಬಾರಿ ಅವಕಾಶಗಳನ್ನು ಸೃಜನೆ ಮಾಡಿಕೊಟ್ಟರೂ ಸಹ ಸೋನು ತಪ್ಪಿಸಿಕೊಳ್ಳುವುದಿಲ್ಲ. ಆ ಕಾರಣದಿಂದ ಕೃತಿಗೆ ನೀಡಿರುವ ಎದೆಗಾರಿಕೆ ಎಂಬ ಶೀರ್ಷಿಕೆ ಅರ್ಥಪೂರ್ಣವಾಗಿದೆ.