ಮೈಸೂರು ಅರಸರ ಕಾಲದ ಸಮ-ತತ್ತ್ವದ ಶಿಕ್ಷಣದ ವ್ಯವಸ್ಥೆ
Keywords:
ಮದ್ರಾಸ್ ಎಲಿಮೆಂಟರಿ ಎಜುಕೇಶನ್ ಆಕ್ಟ್, ಕರ್ನಾಟಕ ಭಾಷೋಜ್ಜೀವಿನಿ ಸಭಾ, ರಾಬರ್ಟ್ ಸಿವೆಲ್, ದಿ ಫರ್ಗಾಟನ್ ಎಂಪೈರ್, ಆರ್ಯ ಬಾಲಿಕಾ ಪಾಠಶಾಲೆAbstract
ನಮ್ಮ ನಾಡಿನ ಪ್ರಾಚಿನ ಪರಂಪರೆ ಹಾಗೂ ಸನಾತನವೆನಿಸಿದ ಭಾರತೀಯ ಜ್ಞಾನ ಸಂಪತ್ತು ಮತ್ತು ಚಿಂತನಶೀಲತೆ ರಾಷ್ಟ್ರೀಯ ಶಿಕ್ಷಣ ನೀತಿಯ ದಾರಿದೀಪವಾಗಿದೆ. ಜ್ಞಾನ, ವಿವೇಕ ಹಾಗೂ ಸತ್ಯ ಭಾರತೀಯ ದಾರ್ಶನಿಕ ಚಿಂತನೆಯ ಅತ್ಯುನ್ನತ ಸಾಧನೆಯ ಗುರಿಗಳಾಗಿದ್ದವು. ಆತ್ಮಸಾಕ್ಷಾತ್ಕಾರ ಮತ್ತು ಆತ್ಮವಿಮೋಚನೆ ಶಿಕ್ಷಣದ ಗುರಿಯಾಗಿತ್ತು. ಅತ್ಯುತ್ತಮ ಮಟ್ಟದ ಬಹುಶಿಸ್ತೀಯ ಅಧ್ಯಯನಗಳು ಜ್ಞಾನದ ಗಡಿಗಳನ್ನು ವಿಸ್ತರಿಸಿ ಎಲ್ಲೆಡೆಯಿಂದಲೂ ಜ್ಞಾನ ಸ್ವೀಕಾರ ಕಾರ್ಯ ನಡೆಯುತ್ತಲೇ ಇತ್ತು. ಇದು ಕನ್ನಡ ನಾಡಿಗೂ ಮಾದರಿಯಾಗಿ ಕನ್ನಡ ನಾಡು ಕೂಡ ಯಾವುದಕ್ಕೂ ಹಿಂದೆ ಬೀಳದೆ ತನ್ನದೇ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳುತ್ತಲೇ ಮಾದರಿ ರಾಜ್ಯವಾಗಿ ಚರಿತ್ರೆಯಲ್ಲಿ ಗುರುತಾಗತೊಡಗಿತು. ಭಾರತೀಯ ಭವ್ಯ ಪರಂಪರೆಯಲ್ಲಿ ಕನ್ನಡ ನಾಡಿನ ಹಿರಿಮೆ ದೇಸೀ ತನದಿಂದಲೇ ಹೆಸರಾದುದು. ಅದು ಬಹುಮುಖಿಯಾಗಿ ತನ್ನ ಆಳ ಮತ್ತು ಎಲ್ಲೆಯನ್ನು ವಿಸ್ತರಿಸಿರುವುದು ಪ್ರಾಚೀನತಮ ಸಾಹಿತ್ಯದಿಂದ ಹಿಡಿದು ಗ್ರಾಂಥಿಕ ಸಾಹಿತ್ಯದ ವರೆಗೂ ಕಂಡು ಬರುವಂತದ್ದು. ಕನ್ನಡ ನಾಡಿನ ಜನತೆಯ ಜ್ಞಾನ ಮತ್ತು ವಿವೇಕದ ಹರವು ಮತ್ತು ಶಿಕ್ಷಣ ಕ್ರಮ ವೈಶಿಷ್ಟ್ಯಪೂರ್ಣವಾಗಿ ದಾಖಲಾಗಿದೆ. ಅದಕ್ಕೆ ಹಲವು ನಿದರ್ಶನಗಳು ನಮ್ಮಲ್ಲಿ ಆಧಾರಪೂರ್ವಕವಾಗಿ ಸಾಕ್ಷಿಯಾಗಿ ದೊರಕುತ್ತವೆ. ಅದು ಶಿಕ್ಷಣಕ್ಕೆ ಕನ್ನಡಿಗರು ನೀಡಿದ ಮಹತ್ವ ಎಂಥದ್ದು ಎಂಬುದನ್ನು ಸಾರಿ ಸಾರಿ ಹೇಳುತ್ತಲೇ ಬಂದಿದೆ. ಅನೌಪಚಾರಿಕ ಶಿಕ್ಷಣ ಕ್ರಮದಿಂದ ಔಪಚಾರಿಕ ಶಿಕ್ಷಣದವರೆಗೆ ಅದರ ನಡೆ ಬಹುತೆರನಾಗಿದ್ದರೂ ಅಂತಿಮವಾಗಿ ವ್ಯಕ್ತಿ ಉತ್ತಮ ಸಾಮಾಜಿಕ ಜೀವನ ನಡೆಸಲು ಶಿಕ್ಷಣವೇ ಮೂಲಾಧಾರ ಎಂಬ ಚಿಂತನೆ ಕರುನಾಡನ್ನಾಳಿದ ಪ್ರತಿಯೊಬ್ಬ ಆಳರಸರ ಧಮನಿಯಲ್ಲಿ ಮಿಡಿದಿದೆ. ಕನ್ನಡ ನಾಡಿನ ದೊರೆಗಳು ಒಂದಿಲ್ಲೊಂದು ರೀತಿಯಲ್ಲಿ ತನ್ನ ಪ್ರಜೆಗಳಿಗೆ ಜ್ಞಾನದ ಹಸಿವನ್ನು ನೀಗಿಸುತ್ತಲೇ ಬಂದಿದ್ದಾರೆ. ಅಂತಹ ಆಳರಸರ ಸಾಲಿನಲ್ಲಿ ಮೈಸೂರು ದೊರೆಗಳೂ ಕೂಡ ನಿಲ್ಲುತ್ತಾರೆ. ಹಾಗಾಗಿಯೇ ಅವರು ಶಿಕ್ಷಣಕ್ಕೆ ನೀಡಿದ ಒತ್ತು ಆದರ್ಶವಾದುದು. ಈ ನೆಲೆಯಲ್ಲಿ ಪ್ರಸ್ತುತ ಲೇಖನವು ಸಂಶೋಧನಾತ್ಮಕವಾಗಿ ಇಲ್ಲಿ ವಿಶ್ಲೇಷಣೆಗೆ ಒಳಗಾಗಿದೆ.
ಉದ್ದೇಶಗಳು:
ಸುಸ್ಥಿರ ಬೆಳವಣಿಗೆಯ ಕಾರ್ಯಸೂಚಿ-2030 (Agenda for Sustainable Development) ರ ಗುರಿಯಲ್ಲಿ ಪ್ರಸ್ತಾಪಿಸಲಾದ ಜಾಗತಿಕ ಶಿಕ್ಷಣದ ಕಾರ್ಯಸೂಚಿನ್ನು ಭಾರತ 2015 ರಲ್ಲಿ ಅಳವಡಿಸಿಕೊಂಡು 2030ರ ವೇಳೆಗೆ “ಪ್ರತಿಯೊಬ್ಬರಿಗೂ ಸಮಾನಿಷ್ಟವಾದ ಮತ್ತು ಸಮಾನವಾದ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಹಾಗೂ ಜೀವನಪರ್ಯಂತ ಕಲಿಕೆಯ ಸದವಕಾಶಗಳನ್ನು ಖಾತರಿಯಾಗಿ ಒದಗಿಸುವ ಉದ್ದೇಶ ಹೊಂದಿದೆ.” (ರಾ.ಶಿ.ನೀ-2020. ಪುಟ-03) ಎಂಬುದಾಗಿದ್ದರೂ ನಮ್ಮ ಆಳರಸರ ದೂರದೃಷ್ಟಿ ಕೂಡ ಅದೇ ಆಗಿತ್ತು ಎಂಬುದನ್ನು ಗುರುತಿಸುವುದು ಇಲ್ಲಿಯ ಮುಖ್ಯ ಉದ್ದೇಶವಾಗಿದೆ. ಸಮಕಾಲೀನ ಸಂದರ್ಭಕ್ಕೆ ತಕ್ಕ ಹಾಗೆ ಶಿಕ್ಷಣ ಕ್ರಮವನ್ನು ರೂಪಿಸುವುದೂ ಕೂಡ ಆಳುವ ವರ್ಗದವರ ಜವಾಬ್ದಾರಿ ಎಂಬುದನ್ನು ಆಧಾರಪೂರ್ವಕವಾಗಿ ತೋರುವುದರೊಂದಿಗೆ. ಕನ್ನಡ ನಾಡಿನ ಪ್ರಾದೇಶಿಕತೆಗೆ ಒಗ್ಗುವ ಮತ್ತು ಜೊತೆ ಜೊತೆಯಲ್ಲಿಯೇ ಜಾಗತಿಕವಾಗಿ ತನ್ನನ್ನು ತಾನು ಹೊಂದಿಸಿಕೊಳ್ಳುವ ನೆಲೆಯಲ್ಲಿ ಕನ್ನಡ ನಾಡಿನ ಶಿಕ್ಷಣ ವ್ಯವಸ್ಥೆ ಎಂದೂ ಹಿಂದೆ ಬಿದ್ದಿಲ್ಲ. ಅದು ಸರ್ವಕಾಲಕ್ಕೂ ಅನ್ವಯ. ಹಾಗಾಗಿಯೇ ಮೈಸೂರು ದೊರೆಗಳು ಶಿಕ್ಷಣ ವ್ಯವಸ್ಥೆ ರೂಪಿಸಲು ತಮ್ಮ ತನುಮನವನ್ನು ಅರ್ಪಿಸಿದ ರೀತಿ ಅಸಮಾನ್ಯವಾಗಿಯೇ ಇದೆ ಎಂಬುದನ್ನು ಗುರುತಿಸುತ್ತಾ ಪ್ರಾಥಮಿಕ ಶಾಲೆಯ ಪ್ರಾರಂಭದೊಂದಿಗೆ ಅತ್ಯುನ್ನತವಾದ ವಿಶ್ವವಿದ್ಯಾನಿಲಯದ ವರೆಗೆ ಅವರು ಸ್ತಾಪಿಸಿದ ಹಾಗೂ ಪೋಷಣೆ ಮಾಡಿದ ಸಾಂಸ್ಥಿಕ ಸ್ವರೂಪದ ಶಿಕ್ಷಣ ವ್ಯವಸ್ಥೆಯನ್ನು ಗುರುತಿಸುವ ಉದ್ದಿಷ್ಟ್ಯ ಇಲ್ಲಿಯದು.
ಸಂಶೋಧನಾ ವಿಧಾನ:
ಪ್ರಸ್ತುತ ಲೇಖನದ ವಿಷಯ ವಸ್ತು ಸಂಶೋಧನಾ ಮಾನದಂಡಗಳನ್ನು ಅನುಸರಿಸಿ ವಿಶ್ಲೇಷಣಾತ್ಮಕ, ವಿವರಣಾತ್ಮಕ ಮತ್ತು ತೌಲನಿಕ ವಿಧಾನಗಳ ನೆರಳಿನಲ್ಲಿ ಚರ್ಚೆಗೆ ಒಳಗಾಗಿದೆ.