ಸ್ವಾತಂತ್ರ್ಯ ಪೂರ್ವದಲ್ಲಿ ಮಂಡ್ಯ ಜಿಲ್ಲೆಯಲ್ಲಾದ ಸಮಾಜೋ-ರಾಜಕೀಯದ ಸ್ಥಿತ್ಯಂತರ

Authors

  • SHASHANKA K. S.

Keywords:

ಮಂಡ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ. ವಿಶ್ವೇಶ್ವರಯ್ಯ

Abstract

‘ಸಕ್ಕರೆಯ ಸೀಮೆ’ ಎಂದು ಪ್ರಖ್ಯಾತಿ ಪಡೆದುಕೊಂಡಿರುವ ಮಂಡ್ಯ ಜಿಲ್ಲೆ ಇಂದು ರಾಜಕೀಯ, ಸಾಮಾಜಿಕ ಹಾಗೂ ಕೃಷಿ ಕ್ಷೇತ್ರದಲ್ಲಿ ತನ್ನದೆಯಾದ ಮಹತ್ವವನ್ನು ಪಡೆದುಕೊಂಡಿದೆ. ಇದಕ್ಕೆಲ್ಲಾ ಕಾರಣ ಮಂಡ್ಯ ಜಿಲ್ಲೆಯ ಜೀವನಾಡಿ ಕನ್ನಂಬಾಡಿ ಕಟ್ಟೆಯಾಗಿದೆ. ಮೈಸೂರಿನ ಅರಸ ನಾಲ್ವಡಿಯವರನ್ನು ರಾಷ್ಟ್ರಪಿತ ಮಹಾತ್ಮಗಾಂಧಿಯವರು ರಾಜರ್ಷಿಯೆಂದು ಕರೆದರು. ಇದಕ್ಕೆ ನಾಲ್ವಡಿಯವರ ಪ್ರಜಾಹಿತಾತ್ಮಕ ಧೋರಣೆಗಳು. ಸರ್ವಾಧಿಕಾರಿಯೊಬ್ಬ ಪ್ರಜಾಸತ್ತಾತ್ಮಕ ಮನೋಭಾವ ತಳೆಯುವುದು ಜಗತ್ತಿನ ರಾಜಕೀಯ ಇತಿಹಾಸದಲ್ಲಿಯೇ ಅಪರೂಪದ ಸಂಗತಿಯಾಗಿದೆ. ಭಾರತದಲ್ಲಿ ಮಾತ್ರವಲ್ಲದೇ ಏಷ್ಯಾ ಖಂಡದಲ್ಲಿಯೇ ಮೊದಲ ಜಲವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ನಾಲ್ವಡಿಯವರಿಗೆ ಸಲ್ಲುತ್ತದೆ. ಹಾಗೆಯೇ ಮಂಡ್ಯ ಜಿಲ್ಲೆಯಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟನ್ನು ನಿರ್ಮಿಸಿದರು. ಹೀಗೆ ಒಬ್ಬ ಜವಾಬ್ದಾರಿಯುತ ಮತ್ತು ಸಾಮಾಜಿಕ ಪ್ರಜ್ಞೆಯುಳ್ಳ ಮಹಾರಾಜ ತನ್ನ ನಾಡಿನ ಪ್ರಗತಿಪರ ಕಾರ್ಯಗಳಿಗೆ ಮತ್ತು ಜನತೆಯ ಶ್ರೇಯೋಭಿವೃದ್ಧಿಗೆ ಒತ್ತು ನೀಡಿದ್ದರು. ಈ ಮೂಲಕ ಅವರ ಸಮಾಜೋ-ರಾಜಕೀಯ ನಾಯಕತ್ವವನ್ನು ಗುರುತಿಸಬಹುದಾಗಿದೆ. ಒಟ್ಟಾರೆ ಈ ಜಲಾಶಯದಿಂದ ರೈತರ ಆರ್ಥಿಕ ಸ್ಥಿತಿ ಉತ್ತಮವಾಯಿತು. ಗಾಣಗಳು, ಸಕ್ಕರೆ ಕಾರ್ಖಾನೆಗಳು ತಲೆಯೆತ್ತಿದವು. ಬೆಲ್ಲ, ಸಕ್ಕರೆಯ ಉದ್ಯಮ ಬಿರುಸಾಗಿ ಸಾಗಿತು. ಇಂದು ಮಂಡ್ಯ ಸಕ್ಕರೆನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಹೀಗೆ ಕೃಷಿಯ ಮೂಲಕ ಮಂಡ್ಯ ಜಿಲ್ಲೆಯ ಸ್ಥಿತ್ಯಂತರಕ್ಕೆ/ಪರಿವರ್ತನೆಗೆ ಕಾರಣವಾದವರು ನಾಲ್ವಡಿಯವರಾಗಿದ್ದಾರೆ.

ಸರ್.ಎಂ. ವಿಶ್ವೇಶ್ವರಯ್ಯನವರು ಕನ್ನಂಬಾಡಿ ಅಣೆಕಟ್ಟೆಯ ಬೃಹತ್ ಯೋಜನೆಗೆ ಮರುಚಾಲನೆ ಕೊಟ್ಟರು. ಇವರು 1913 ರಲ್ಲಿ ಮೈಸೂರು ಬ್ಯಾಂಕನ್ನು ಸ್ಥಾಪಿಸಿದ್ದು ಭಾರತದ ಇತಿಹಾಸದಲ್ಲಿ ದೊಡ್ಡ ಮೈಲಿಗಲ್ಲಾಯಿತು. ವಿಶ್ವೇಶ್ವರಯ್ಯನವರ ಪ್ರೇರಣೆಯಿಂದಾಗಿ ರೇಷ್ಮೆ ಇಲಾಖೆ, ಮೈಸೂರು ಶ್ರೀಗಂಧದ ಸಾಬೂನು ಕಾರ್ಖಾನೆ, ಶ್ರೀಗಂಧದೆಣ್ಣೆಯ ಕಾರ್ಖಾನೆ, ಸರಕಾರಿ ಮುದ್ರಣಾಲಯ ಹೀಗೆ ಮುಂತಾದ ಕಾರ್ಖಾನೆಗಳು ಸ್ಥಾಪಿತಗೊಂಡವು.

ಸರ್ ಮಿರ್ಜಾ ಇಸ್ಮಾಯಿಲ್ ಅವರು ಮೈಸೂರು-ಬೆಂಗಳೂರು ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಉದ್ಯಾನವನಗಳು ಹಾಗು ರಸ್ತೆಗಳಿಗೆ ಸಿಮೆಂಟ್ ಹಾಕಿಸಿ ಸುಸಜ್ಜಿತಗೊಳಿಸಿದರು, ಕನ್ನಂಬಾಡಿ ಕಟ್ಟೆಯ ಬೃಂದಾವನ ಉದ್ಯಾನವನ, ಮಂಡ್ಯ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ಮಂಡ್ಯ ಜಿಲ್ಲಾಧಿಕಾರಿ ಭವನವನ್ನು ಸ್ಥಾಪಿಸಿದರು. ಇಂದು ಮೈಸೂರು ಮತ್ತು ಮಂಡ್ಯ ಸುಂದರ ನಗರಗಳೆನಿಸಿಕೊಳ್ಳಲು ಕಾರಣ ಮಿರ್ಜಾ ಇಸ್ಮಾಯಿಲ್.

ಡಾ|| ಲೆಸ್ಲಿ ಸಿ. ಕೋಲ್ಮನ್ ಅವರು 1931 ರಲ್ಲಿ ವಿಶ್ವೇಶ್ವರಯ್ಯ ನಾಲಾ ಫಾರಂ (ವಿ.ಸಿ.ಫಾರಂ) ಅನ್ನು ಸ್ಥಾಪಿಸಿದರು. ಹಾಗೆಯೇ ಮೈಸೂರು ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಕೋಲ್ಮನ್ ಕಾರಣರಾದರು.

ಮಂಡ್ಯ ಜಿಲ್ಲೆಯ ಜನರ ಉಸಿರೊಡನೆ ಬೆರೆತು ಹೋದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಅವರ ಆಶಯಗಳಿಗೆ ರೆಕ್ಕೆ ರೂಪಿಸಿದ ವಿಶ್ವೇಶ್ವರಯ್ಯ ಜೊತೆಗೆ ಮಿರ್ಜಾ ಇಸ್ಮಾಯಿಲ್ ಸ್ಟೈಲ್ ಮಂಡ್ಯಕ್ಕೆ ಆಡಳಿತಾತ್ಮಕವಾದ ಹೆಬ್ಬಾಗಿಲು ತೆರೆಯಿತು. ನೀರು ಹರಿದ ನಾಡಿನಲ್ಲಿ ಅದನ್ನು ಸಿಹಿಯಾದ ಸಕ್ಕರೆಯಾಗಿಸಲು ಅಕ್ಕರೆಯಿಂದ ಕೈಜೋಡಿಸಿದ್ದು ಕೋಲ್ಮನ್. ಹೀಗೆ ಇವರ ಸಾಧನೆಗಳ ಕಾರಣದಿಂದಾಗಿ ಮಂಡ್ಯ ಜಿಲ್ಲೆಯು ಹಲವು ಸ್ಥಿತ್ಯಂತರ/ಪರಿವರ್ತನೆಗೆ ಒಳಗಾಯಿತು. ಹೀಗೆ ಸ್ವಾತಂತ್ರ್ಯಪೂರ್ವದ ರಾಜಪ್ರಭುತ್ವದ ವ್ಯವಸ್ಥೆಯಡಿಯಲ್ಲಿ ಅನೇಕ ಜನಪರ ಕಾರ್ಯಯೋಜನೆಗಳು ಸಾಕಾರಗೊಂಡಿದ್ದವು. ಪ್ರಸ್ತುತ ಲೇಖನದಲ್ಲಿ ಮೈಸೂರು ಸಂಸ್ಥಾನ ಹಾಗೂ ಅದರ ಭಾಗವಾಗಿದ್ದ ಮಂಡ್ಯ ಜಿಲ್ಲಾ ಪ್ರಗತಿಗಾಗಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನರ ಪಾತ್ರದ ಬಗ್ಗೆ ಚರ್ಚಿಸಲಾಗಿದೆ.

Downloads

Published

01.04.2024

How to Cite

SHASHANKA K. S. (2024). ಸ್ವಾತಂತ್ರ್ಯ ಪೂರ್ವದಲ್ಲಿ ಮಂಡ್ಯ ಜಿಲ್ಲೆಯಲ್ಲಾದ ಸಮಾಜೋ-ರಾಜಕೀಯದ ಸ್ಥಿತ್ಯಂತರ. AKSHARASURYA, 3(04), 09 to 23. Retrieved from http://aksharasurya.com/index.php/latest/article/view/339