ಸಾಂಸ್ಕೃತಿಕ ನಗರ: ಮೈಸೂರು
Keywords:
ಮೈಸೂರಿನ ರಾಜರು, ಟಿಪ್ಪುಸುಲ್ತಾನ್, ಅರಮನೆಗಳು, ಚಾಮುಂಡಿ ಬೆಟ್ಟ, ಮೈಸೂರಿನ ದಿವಾನರುAbstract
ಪ್ರಸ್ತುತ ಲೇಖನವು ಮೈಸೂರಿನ ರಾಜಮಹಾರಾಜರು ಹಾಗು ಟಿಪ್ಪುಸುಲ್ತಾನರ ಕಾಲದಲ್ಲಾದ ಮಹತ್ವದ ಕಾರ್ಯ ಮತ್ತು ಬೆಳವಣಿಗೆಯ ಇತಿಹಾಸವನ್ನು ಸೂಚಿಸುತ್ತದೆ. ಮುಖ್ಯವಾಗಿ ರಣಧೀರ ಕಂಠೀರವ ನರಸರಾಜ ಒಡೆಯರು ಅರಮನೆಯನ್ನು ಕಟ್ಟಿಸಿದರೆಂದು ತಿಳಿಯುತ್ತದೆ. ಇನ್ನು ಅರಮನೆ ಆವರಣದಲ್ಲಿದ್ದ ದೇವಾಲಗಳೆಲ್ಲವನ್ನೂ ಟಿಪ್ಪುಸುಲ್ತಾನ್ ಸುರಕ್ಷಿತವಾಗಿ ಉಳಿಸಿರುವುದರಿಂದ ಬೇರೆ ಧರ್ಮದ ಬಗ್ಗೆ ಕಾಳಜಿ, ಅಭಿಮಾನವಿರುವುದನ್ನು ತಿಳಿಸುತ್ತದೆ. ಹೊಸ ಅರಮನೆಯ ಸಭಾಭವನ ಕಲಾ ಕೌಶಲ್ಯಕ್ಕೆ ಪ್ರಸಿದ್ಧಿಯಾಗಿದೆ. ಆ ಕಾರಣದಿಂದ ಭಾರತದ ಭವ್ಯವಾದ ಮತ್ತು ದೊಡ್ಡ ಅರಮನೆಗಳಲ್ಲಿ ಒಂದಾಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ.
ಹೈದರಾಲಿ ಮತ್ತು ಟಿಪ್ಪುಸುಲ್ತಾನರ ಕಾಲದಲ್ಲಿ ವೀರನಗೆರೆ ಕೋಟೆ ಹಾಗು ನಜರಬಾದಿನಲ್ಲಿ ಮತ್ತೊಂದು ಕೋಟೆಯನ್ನು ಕಟ್ಟಿಸಿರುವುದು ಗಮನಾರ್ಹ. ಅಂದರೆ ಅಂದಿನ ಪ್ರದೇಶವನ್ನು ರಕ್ಷಿಸಿರುವುದು ಇದರಿಂದ ತಿಳಿಯುತ್ತದೆ.
‘ಜಗನ್ಮೋಹನ ಅರಮನೆ’ಯನ್ನು ಮುಮ್ಮಡಿ ಕೃಷ್ಣರಾಜ ಒಡೆಯರು ಕಟ್ಟಿಸಿದರು. ಮೈಸೂರಿನ ವಿಧಾನ ಪರಿಷತ್ತಿನ ಪ್ರಥಮ ಅಧಿವೇಶನ, ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭಗಳು, ದಸರಾ ದರ್ಬಾರು ಹಾಗು ಪ್ರಸ್ತುತ ಈ ಸ್ಥಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಅಂದರೆ ಅಂದಿನ ಮಹತ್ವ ಕಾರ್ಯದಿಂದ ಇಂದು ಹಲವು ಕಾರ್ಯಕ್ರಮಗಳಿಗೆ ಉಪಯುಕ್ತವಾಗಿದೆ. ಇನ್ನು ‘ಲಲಿತಮಹಲ್ ಅರಮನೆ’ಯನ್ನು ನಾಲ್ವಡಿ ಕೃಷ್ಣರಾಜ ಒಡೆಯರು ಕಟ್ಟಿಸಿದರು. ಪ್ರಸ್ತುತ ಲಲಿತಮಹಲ್ ಅರಮನೆಯು ‘ಪಂಚತಾರಾ ಹೋಟಲ್’ ಆಗಿ ಬದಲಾವಣೆಗೊಂಡಿದೆ.
ಸ್ಕಂದ ಪುರಾಣ ಮುಂತಾದ ಪ್ರಾಚೀನ ಗ್ರಂಥಗಳು ಉಲ್ಲೇಖಿಸಿರುವ ಎಂಟು ಬೆಟ್ಟಗಳ ಪೈಕಿ ಚಾಮುಂಡಿ ಬೆಟ್ಟವು ಒಂದು. ಮಹಿಷಾಸುರನೆಂಬ ರಾಕ್ಷಸನನ್ನು ಕೊಂದು ಶ್ರೀ ಚಾಮುಂಡೇಶ್ವರಿ ಈ ಬೆಟ್ಟದಲ್ಲಿ ನೆಲೆಸಿರುವಳೆಂದು ತಿಳಿದುಬರುತ್ತದೆ. ಪ್ರಸ್ತುತದಲ್ಲೂ ದೇವಿ ವಿಗ್ರಹವನ್ನೇ ದಸರಾ ಮಹೋತ್ಸವದ ಜಂಬೂಸವಾ ರಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ.
ಮೈಸೂರು ಮೃಗಾಲಯವನ್ನು ಚಾಮರಾಜ ಒಡೆಯರು ಸ್ಥಾಪಿಸಿದರು. ಪ್ರವಾಸಿಗರಿಗೆ ಮನ ತಣಿಯುವಂತ ಸ್ಥಳವಾಗಿದೆ. ಮೈಸೂರಿನ ಕನ್ನಂಬಾಡಿ ಎಂಬ ಸ್ಥಳದಲ್ಲಿರುವ ಜಲಾಶಯವನ್ನು ‘ಕೃಷ್ಣರಾಜ ಸಾಗರ ಜಲಾಶಯ’ ಎಂದು ಕರೆಯುತ್ತಾರೆ. ಇದನ್ನು ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಮೈಸೂರಿ ನಲ್ಲಿ ಮುಖ್ಯ ಎಂಜಿನಿಯರ್ ಹಾಗು ದಿವಾನರಾಗಿದ್ದ ಎಂ. ವಿಶ್ವೇಶ್ವರಯ್ಯನವರು ನಿರ್ಮಾಣದ ಉಸ್ತುವಾರಿ ವಹಿಸಿಕೊಂಡು ಪೂರ್ಣಗೊಳಿಸಿದರು. ಇನ್ನು ಬೃಂದಾವನವನ್ನು ಮೈಸೂರಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಕಾಲದಲ್ಲಿ ಸ್ಥಾಪನೆಯಾಯಿತು.
ಒಟ್ಟಾರೆ ಪ್ರಸ್ತುತ ಲೇಖನವು ರಾಜಮಹಾರಾಜರ ಆಡಳಿತ ವೈಖರಿಯನ್ನು, ಪ್ರವಾಸಿಗರಿಗೆ ಯಾತ್ರಾಸ್ಥಳ ಮತ್ತು ತಂಗುದಾಣವಾಗಿ, ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಮತ್ತು ಚರ್ಚೆಯ ಉದ್ದೇಶಗಳನ್ನು ಹೊಂದಿರುವುದರಿಂದ ಮೈಸೂರನ್ನು ಸಾಂಸ್ಕೃತಿಕ ನಗರ ಎನ್ನಬಹುದು.