ಕುವೆಂಪು ಮತ್ತು ಬಿ.ಟಿ. ಲಲಿತ ನಾಯಕ್ ಅವರ ಕಾವ್ಯಗಳ ತೌಲನಿಕ ವಿಶ್ಲೇಷಣೆ
Keywords:
ನವೋದಯ, ದಲಿತ-ಬಂಡಾಯ, ತತ್ವಜ್ಞಾನ, ರಾಷ್ಟ್ರೀಯತೆ, ತೌಲನಿಕ ಕಾವ್ಯ, ಸಂಸ್ಕೃತ, ಪುನರುತ್ಥಾನAbstract
ಕುವೆಂಪು ಮತ್ತು ಬಿ.ಟಿ. ಲಲಿತನಾಯಕ್ ರವರು ಕನ್ನಡದ ಶ್ರೇಷ್ಠ ಸಾಹಿತಿಗಳಾಗಿದ್ದಾರೆ. ಕುವೆಂಪುರವರು ಕನ್ನಡ ನವೋದಯ ಕಾಲದವರಾದರೆ, ಬಿ.ಟಿ. ಲಲಿತನಾಯಕ್ ಅವರು ದಲಿತ-ಬಂಡಾಯ ಪಂಥದವರಾಗಿದ್ದಾರೆ. ಇವರೀರ್ವರ ಕಾವ್ಯದೃಷ್ಟಿ ಹಾಗೂ ಕಾವ್ಯ ಸೃಷ್ಠಿಯಲ್ಲಿ ಅಪಾರವಾದ ಭಿನ್ನತೆ ಇದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪರಿಸರದ ನಿರ್ಮಿತಿಯಾಗಿರುತ್ತಾನೆ. ಮೇಲಿನ ಈರ್ವರೂ ಸಾಹಿತಿಗಳೂ ತಮ್ಮದೇ ಪರಿಸರದ ನಿರ್ಮಿತಿಯಾಗಿರುತ್ತಾರೆ. ಅವರ ಕಾವ್ಯದ ಅಧ್ಯಯನವು ಈ ಕಾವ್ಯ ದಿಗ್ಗಜಗಳ ಮೇಲಿನ ಪರಿಸರದ ಪ್ರಭಾವವನ್ನು ವ್ಯಕ್ತಪಡಿಸುತ್ತದೆ.
ಬಿ.ಟಿ. ಲಲಿತನಾಯಕ್ ಅವರ ಕಾವ್ಯದಲ್ಲಿ ಸರಳತೆ ಎದ್ದು ಕಾಣುವುದು. ಕುವೆಂಪುರವರ ಕಾವ್ಯದಲ್ಲಿ ಕ್ಲಿಷ್ಟ ಪದಪುಂಜಗಳು ಸಾಮಾನ್ಯ. ಬಿ.ಟಿ. ಲಲಿತನಾಯಕ್ ಅವರಲ್ಲಿ ದೇಸೀಪದಗಳೇ ಜಾಸ್ತಿ; ಕುವೆಂಪು ಕಾವ್ಯದಲ್ಲಿ ಸಂಸ್ಕೃತ ಹಾಗೂ ಹಳಗನ್ನಡ ಪದಗಳೇ ಹೆಚ್ಚು. ಲಲಿತನಾಯಕ್ ಅವರ ಉಪಮೆಗಳು ನೆಲದ ಮೇಲೆ ನಿಂತಿವೆ. ಕುವೆಂಪುರವರ ಪ್ರತಿಮೆಗಳು ಆಕಾಶದಲ್ಲಿ ಮೋಹಕವಾಗಿ ಹಾರಾಡುತ್ತಿವೆ. ಲಲಿತನಾಯಕ್ ಅವರು ತಮ್ಮ ಕವನಗಳಲ್ಲಿ ತತ್ವಜ್ಞಾನವನ್ನು ಸಾರುವುದಿಲ್ಲ. ಕುವೆಂಪುರವರ ಕವನಗಳಲ್ಲಿ ತತ್ವಜ್ಞಾನ ಹಾಗೂ ಆದೇ ಶವಾಕ್ಯ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಕುವೆಂಪು ಮತ್ತು ಲಲಿತನಾಯಕರ ಕಾವ್ಯಗಳನ್ನು ತೌಲನಿಕವಾಗಿ ಸಾಮಾಜಿಕ ವಿಚಾರಗಳು, ರಾಷ್ಟ್ರೀಯತೆಯ ಚಿಂತನೆಗಳು, ನಿಸರ್ಗದ ವರ್ಣನೆ ಮೊದಲಾದವುಗಳಿಗೆ ಸಂಬಂಧಿಸಿದಂತೆ ಈ ಮುಂದೆ ವಿವರಿಸಿದೆ.