ಪ್ರಭಾಕರ ನೀರ್ಮಾರ್ಗರ ‘ತಿಲ್ಲಾನ’ ಕಾದಂಬರಿಯಲ್ಲಿ ಭೂತಾರಾಧನೆಯ ಮುಂದಿರುವ ತಲ್ಲಣಗಳು
Keywords:
ಭೂತದ ಭಂಡಾರ, ನಲಿಕೆ ಜನಾಂಗ, ಸಿಂಗದನ, ಬಲಿಮುದ್ರೆ, ಮಡಿ-ಮೈಲಿಗೆ, ತುಳುನಾಡು, ಭೂತಾರಾಧನೆAbstract
ಪ್ರಭಾಕರ ನೀರ್ಮಾರ್ಗರ ‘ತಿಲ್ಲಾನ’ ಕಾದಂಬರಿಯು ಕರಾವಳಿಯ ಭೂತಾರಾಧನೆಯ ಸ್ವರೂಪದ ಹಿನ್ನೆಲೆಯನ್ನು ಕುರಿತ ಕಥನವಾಗಿದೆ. ಭೂತಾರಾಧನೆಯಲ್ಲಿ ಹಿಂದಿನಿಂದಲೂ ನರ್ತಕರಾಗಿ ವೇಷಧಾರಿಗಳಾಗಿ ಭಾಗವಹಿಸಿ, ಭೂತ ಮಾಧ್ಯಮಗಳಾಗಿ ಭಾಗವಹಿಸಿ ದುಡಿಯುತ್ತಿರುವ ನಲಿಕೆ ಜನಾಂಗದ ಸಾಮಾಜಿಕ, ಸಾಂಸ್ಕೃತಿಕ ಬದುಕನ್ನು ಅನಾವರಣಗೊಳಿಸುವ ಕಾದಂಬರಿ ಇದಾಗಿದೆ. ಭೂತಾರಾಧನೆಗೆ ಸಂಬಂಧಿಸಿದ ತಮ್ಮ ಕುಲಕಸುಬನ್ನು ಆಧುನಿಕ ಕಾಲಘಟ್ಟದಲ್ಲಿ ಮುಂದುವರಿಸಿಕೊಂಡು ಹೋಗುವ ಸಂದರ್ಭದಲ್ಲಿ ಆ ಸಮುದಾಯದವರು ಎದುರಿಸುವ ಸವಾಲುಗಳ ಕುರಿತಂತೆ ಈ ಕಾದಂಬರಿ ಕೆಲವು ಮಹತ್ವದ ಒಳನೋಟಗಳನ್ನು ಪರಿಚಯಿಸುತ್ತದೆ. ಭೂತಾರಾಧನೆಯ ಪಠ್ಯ ಮತ್ತು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಈವರೆಗೆ ಶೈಕ್ಷಣಿಕ ನೆಲೆಯಲ್ಲಿ ನಡೆದ ಕ್ಷೇತ್ರಕಾರ್ಯ, ಅಧ್ಯಯನ ಮತ್ತು ಸಂಶೋಧನೆಯ ಕುರಿತಂತೆ ಕೆಲಸಗಳು ಈ ಆರಾಧನಾ ಪ್ರಕಾರದ ಉಳಿವಿಗೆ ಯಾವ ನೆಲೆಯಲ್ಲಿ ನೆರವಾಗಿದೆ ಎಂಬುದು ಈ ಕಾದಂಬರಿ ಎತ್ತುವ ಒಂದು ಮಹತ್ವದ ಪ್ರಶ್ನೆಯಾಗಿದೆ. ಅಂತೆಯೆ ಈ ಮಾದರಿಯ ಅಧ್ಯಯನಗಳ ಪರಿಣಾಮವಾಗಿ ಭೂತಾರಾಧನೆಯಲ್ಲಿ ತಮ್ಮ ಬದುಕನ್ನೇ ಅರ್ಪಿಸಿಕೊಂಡ ಕಲಾವಿದರಿಗೆ ಸಿಗಬಹುದಾದ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಮನ್ನಣೆ ಎಂತಹದ್ದು ಎಂಬುದು ಕಾದಂಬರಿ ಎದುರುಗೊಳ್ಳುವ ಇನ್ನೊಂದು ಮಹತ್ವದ ಸವಾಲು ಸಹ ಹೌದು. ಈ ಬಗೆಯ ಮಹತ್ವದ ಸವಾಲುಗಳ ಜತೆಯಲ್ಲಿಯೇ ಕಾದಂಬರಿ ತನ್ನನ್ನು ತಾನು ಮತ್ತೆ ಪರಿಚಯಿಸಿಕೊಳ್ಳುತ್ತದೆ.