ಕರ್ನಾಟಕ ಏಕೀಕರಣ ಮತ್ತು ಕುವೆಂಪು
Keywords:
ಭರತ ಖಂಡದ ಸ್ವಾತಂತ್ರ್ಯ, ಕರ್ಣಾಟಕ ಏಕೀಕರಣ, ಕನ್ನಡ, ಕರ್ಣಾಟಕ, ಕುವೆಂಪುAbstract
ಕನ್ನಡ, ಕರ್ಣಾಟಕ ಮತ್ತು ಕುವೆಂಪು ಈ ಮೂರೂ ಈಗ ಅವಿಭಾಜ್ಯವಾದ ಮತ್ತು ಅಭಿನ್ನವಾದ ವಸ್ತುಗಳಾಗಿವೆ, ತತ್ತ್ವಗಳಾಗಿವೆ, ಶಕ್ತಿಗಳಾಗಿವೆ. ಕನ್ನಡ ಮತ್ತು ಕರ್ಣಾಟಕ ಕುವೆಂಪು ಅವರನ್ನು ಕಡೆದಂತೆ, ಕುವೆಂಪು ಕನ್ನಡ ಮತ್ತು ಕರ್ಣಾಟಕಗಳ ಕೀರ್ತಿ ಮಹಿಮೆಗಳನ್ನು ಮುಗಿಲೆತ್ತರಕ್ಕೇರಿಸಿದ್ದಾರೆ, ಜಗದಗಲಕ್ಕೂ ಹರಡಿದ್ದಾರೆ. ಕುವೆಂಪು ಅವರು ರಾಜಕೀಯದೊಳಗಿರಲಿ, ಆಚೆಯಿರಲಿ ಕುಳಿತಲ್ಲಿಂದಲೇ ವಿದ್ಯಮಾನಗಳನ್ನು ಗ್ರಹಿಸುವ ಶಕ್ತಿ ಅವರ ಕಲ್ಪನಾ ಪ್ರತಿಭೆಗಿದೆ. ಕನ್ನಡದ ಪಾರಮ್ಯಕ್ಕಾಗಿ, ನಾಡಿನ ಏಕೀಕರಣಕ್ಕಾಗಿ ಬರಹ, ಭಾಷಣಗಳ ಮೂಲಕ ನಿರಂತರವಾಗಿ ಹೋರಾಟ ನಡೆಸಿದ್ದಾರೆ. ಸಂಕುಚಿತ ದೃಷ್ಟಿಯ ಜಡವಾದಿ ಪ್ರಗತಿ ವಿರೋಧಿ ರಾಜಕೀಯ ವಿರುದ್ಧವಾಗಿ ಸಮರವನ್ನೇ ಘೋಷಿಸಿದ್ದುಂಟು. ಕನ್ನಡ ನಾಡು ಒಂದಾಗಬೇಕು, ಕನ್ನಡ ಜನ ಒಂದಾಗಬೇಕು ಎಂದು ಹಂಬಲಿಸಿ ಲೇಖನ ಭಾಷಣಗಳ ಮೂಲಕ ಹಂಬಲವನ್ನು ತೋಡಿಕೊಳ್ಳುತ್ತ, ರಾಜಕಾರಣಿಗಳಿಗೂ ಯುವಕರಿಗೂ ಪ್ರಚೋದಕ ಶಕ್ತಿಯಾಗಿ, ಪ್ರವಾದಿಯಾಗಿ ಕಾಣಿಸಿಕೊಳ್ಳುತ್ತಾರೆ. ಮೈಮನಗಳಲ್ಲಿ, ಕನ್ನಡತನ ಹರಿದಾಡುವುದಾದರೆ ಮೆಟ್ಟುವ ನೆಲ ಕರ್ಣಾಟಕವಾಗುತ್ತದೆ. ಕರ್ಣಾಟಕ ಏಕೀಕರಣ ಆಗಬೇಕೆಂಬುದೇ ಕುವೆಂಪು ಅವರ ಆಶಯವಾಗಿತ್ತು ಎಂಬುದೇ ಲೇಖನದ ಉದ್ದೇಶವಾಗಿದೆ.