ಮಹಿಳೆ ಮತ್ತು ಸಮಾಜ
Keywords:
ಸ್ತ್ರೀವಾದ, ಹೆಚ್.ಎಸ್.ಶ್ರೀಮತಿ, ಲಿಂಗ ಸಮಾನತೆ, ಮಹಿಳೆ, ಶಿಕ್ಷಣ, ಮಲ್ಲಿಕಾಘಂಟಿ, ಪ್ರಾಚೀನ ಸಮಾಜದಲ್ಲಿ ಸ್ತ್ರೀAbstract
ಸ್ತ್ರೀಯರು ಪುರುಷರಿಗೆ ಸಮಾನರೆಂದು ಸಂವಿಧಾನದಲ್ಲಿ ಘೋಷಿತವಾದರೂ ವಾಸ್ತವದಲ್ಲಿ ಅದು ಸಾಧ್ಯವೇ ಆಗದಂಥಹ ಸ್ಥಿತಿ, ದೇಶ ಸ್ವತಂತ್ರವಾಗಿ ಅರ್ಧ ಶತಮಾನ ಕಳೆದರೂ ಉಳಿದುಕೊಂಡೇ ಬಂದಿದೆ: ಅದು ಮುಂದುವರಿಯುತ್ತಲೇ ಇದೆ. ಸ್ವಾತಂತ್ರ್ಯ ಹಾಗೂ ಸಮಾನತೆಗಳಿಗೆ ಸಂಬಂಧಿಸಿದಂತೆ ಸ್ತ್ರೀಯರ ಮಟ್ಟಿಗೆ ಬದಲಾವಣೆಯ ವೇಗ ಆಮೆಯ ನಡಿಗೆಯಂತೆ ನಿಧಾನವಾಗಿದೆ. ಲಿಂಗಭೇದದ ನೆಲೆಯಲ್ಲಿ ಮಾನವ ಜನಾಂಗವನ್ನು ಸ್ತ್ರೀ ಮತ್ತು ಪುರುಷರು ಎಂದು ಎರಡು ವರ್ಗಗಳಾಗಿ ಭಾಗ ಮಾಡಿರುವುದು ಸಹಜವೇ. ಇದೇ ಕಾರಣಕ್ಕಾಗಿ ಈ ಎರಡೂ ಗುಂಪುಗಳ ನಡುವೆ ಹೆಚ್ಚಿನ ವ್ಯತ್ಯಾಸಗಳು ಹುಟ್ಟಿಕೊಂಡಿವೆ. ಸ್ತ್ರೀ-ಪುರುಷರ ಪಾತ್ರಗಳು, ಕರ್ತವ್ಯಗಳು, ಹೊಣೆಗಾರಿಕೆಗಳು, ಅಂತಸ್ತುಗಳು ಮತ್ತು ನಿಯಮಗಳು ಯಾವುದೇ ಸಮಾಜದಲ್ಲಾದರೂ ಒಂದೇ ರೀತಿಯಾಗಿರಲು ಆಥವಾ ಸಮಾನವಾಗಿರಲು ಸಾಧ್ಯವಾಗಿಲ್ಲ. ಕೆಲವರು ಮಹಿಳೆಯರ ಸ್ಥಿತಿಗತಿಯ ಬಗ್ಗೆ ತಮ್ಮ ಸಂಕುಚಿತ ಮನೋಭಾವವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಭಾರತೀಯ ಸ್ತ್ರೀಯರ ಸ್ಥಿತಿಯನ್ನು ಕೀಳಾಗಿ ಚಿತ್ರಿಸಿದ್ದಾರೆ. ನಮ್ಮ ಪ್ರಾಚೀನ ಕಾಲದ ಧಾರ್ಮಿಕ ಪುರಾಣ ಗ್ರಂಥಗಳನ್ನು ಅವಲೋಕಿಸಿದಾಗ ಈ ಅಭಿಪ್ರಾಯಗಳು ಆಧಾರ ರಹಿತವಾದವು ಎಂಬುದು ಗೊತ್ತಾಗುತ್ತದೆ. ಪುರುಷ ಮತ್ತು ಮಹಿಳೆ ಒಂದು ನಾಣ್ಯದ ಎರಡು ಮುಖಗಳು. ಪುರುಷರನ್ನು ಹೊರತು ಪಡಿಸಿದ ಮಹಿಳೆಯ ಜೀವನ ಆಥವಾ ಮಹಿಳೆಯನ್ನು ಹೊರತುಪಡಿಸಿದ ಪುರುಷನ ಜೀವನವನ್ನು ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಮಹಿಳೆಯ ಸ್ಥಿತಿಯನ್ನು ಕುರಿತು ಚರ್ಚಿಸುವಾಗ ಸಾಮಾಜಿಕ ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯ ಪಾತ್ರವು ಪ್ರಮುಖವಾಗಿ ಕಂಡು ಬರುತ್ತದೆ.
ಪುರುಷ ಸಮಾಜವು ಬಹುಶಃ ಮಹಿಳೆಯನ್ನು ಕೇವಲ ಒಂದು ಭೋಗದ ವಸ್ತುವಾಗಿ, ಮಕ್ಕಳನ್ನು ಹೆರುವ ಯಂತ್ರವಾಗಿ ಪರಿಗಣಿಸಿರುವುದು ಚರಿತ್ರೆಯಿಂದ ಸ್ಪಷ್ಟವಾಗುತ್ತದೆ. ಮಹಿಳೆಯ ಸ್ಥಾನವನ್ನು ಕುರಿತು ಅಧ್ಯಯನ ಮಾಡುವಾಗ ಪುರುಷನ ಸ್ಥಾನದೊಂದಿಗೆ ಹೋಲಿಕೆ ಮಾಡಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ಮಹಿಳೆಯ ಸ್ಥಾನ ಯಾವುದು? ಎನ್ನುವ ಪ್ರಶ್ನೆ ನಮಗೆ ಎದುರಾಗುತ್ತದೆ. ಆದರೆ ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವುದು ಬಹಳ ಕಷ್ಟ. ಏಕೆಂದರೆ ಮಹಿಳೆಯ ಸ್ಥಿತಿ ಎಲ್ಲಾ ಕಾಲಕ್ಕೆ ತಕ್ಕಂತೆ ಅದು ಏರಿಳಿತಗಳನ್ನು ಅಥವಾ ಬದಲಾವಣೆಗಳನ್ನು ಹೊಂದುತ್ತಲೇ ಇದೆ.