ಸೀತೆ ಮತ್ತು ಅಹಲ್ಯೆ ಪಾತ್ರಗಳ ಒಂದು ಮುಖಾಮುಖಿ
Keywords:
ಸಮಾಜವಾದ, ಲಿಂಗ ತಾರತಮ್ಯ, ಸ್ತ್ರೀ ಶೋಷಣೆ, ಪತಿ ಭಕ್ತಿಯ ಅತಿರೇಕ, ಕುಟುಂಬ, ಸ್ತ್ರೀ, ವೈಚಾರಿಕತೆ, ದೃಷ್ಟಿಕೋನAbstract
ಸೀತೆ ಮತ್ತು ಅಹಲ್ಯೆ ಎಂಬ ಎರಡು ಪುರಾಣ ಪಾತ್ರಗಳ ಮುಖಾಮುಖಿಯೊಂದಿಗೆ ಅಂದಿನ ಪುರುಷ ಪ್ರಧಾನ ವ್ಯವಸ್ಥೆಯಿಂದ ತಾವು ಮಾಡದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುವ ಸಂದರ್ಭವನ್ನು ಕಾಣಬಹುದು. ತನ್ನ ದಿವ್ಯಶಕ್ತಿಯ ಮೂಲಕ ಘೋರ ಶಾಪ ಮತ್ತು ಚಾಡಿ ಮಾತಿನಿಂದ ಘೋರ ಶಿಕ್ಷೆಯು ಇಲ್ಲಿ ದುರಂತ. ಈ ಪಾತ್ರಗಳು ಕೌಟುಂಬಿಕ ಪಾತ್ರಗಳಂತೆ ಕಂಡರೂ ಸಾಮಾಜಿಕ ಸಂದರ್ಭದಲ್ಲಿ ಒಟ್ಟು ಸ್ತ್ರೀ ಸಮುದಾಯವನ್ನು ಪ್ರತಿನಿಧಿಸುವ ಪಾತ್ರಗಳಾಗಿ ನನಗೆ ಕಾಣಿಸುತ್ತದೆ. ಪತಿಯ ಹೃದಯವನ್ನು ಪಡೆಯುವುದಲ್ಲದೆ ಸತಿಗೆ ಬೇರಾವ ಕೊರತೆ ಇರುತ್ತದೆ ಎಂದು ಸಮಾಜದ ಎಲ್ಲಾ ಪತ್ನಿಯರ ಮುಖವಾಣಿಯಂತಿದ್ದ ಸೀತೆ “ಸತಿಯ ಧ್ಯಾನ, ವ್ರತ, ತಪಸ್ಸುಗಳೇ ಪತಿಯ ರಕ್ಷೆ” ಎಂದು ನಂಬಿ ರಾಮನಿಗಾಗಿ ದಾರಿ ಕಾಯುವ ಇವಳು ಪುರಾಣದಲ್ಲಿ ಭಗ್ನ ಚಿತ್ರವಾಗಿ ಕಾಣುತ್ತಾಳೆ. ಪಾತಿವ್ರತೆಯನ್ನು ಸಾಬೀತುಪಡಿಸಿಕೊಳ್ಳಲು ಹಲವು ಆಚರಣೆಗಳು ಜಾರಿಯಲ್ಲಿದ್ದರೂ ಕಾಡಿಗೆ ಅಟ್ಟುವ ಅತೀ ಘೋರ ಶಿಕ್ಷೆ ಒಂದು ಮಾರ್ಗವೇ? ಎಂಬ ಆಲೋಚನೆಗಳು ನಮಗೆ ಮೂಡುತ್ತವೆ. ಕೆ. ಶರೀಫರು ಹೇಳುವ ಹಾಗೆ “ಹೆಣ್ಣು ಪ್ರಾರಂಭವನ್ನು ಸಹಿಸಿಕೊಳ್ಳುವ ಸಂದರ್ಭವೇ ಮುಂದಿನ ಅವಾಂತರಗಳಿಗೆ ದಾರಿ ಮಾಡಿಕೊಡುತ್ತದೆ” ಎಂಬ ಮಾತು ನಿಜಕ್ಕೂ ಸತ್ಯವಾಗಿ ಕಾಣಿಸುತ್ತದೆ. ಎರಡನೆಯದಾಗಿ ಇಂದ್ರನ ಕಾಮಕ್ಕೆ ಬಲಿಯಾಗಿ ತನ್ನ ಗಂಡನ ದಿವ್ಯ ಶಕ್ತಿಗೆ ಆಹುತಿಯಾಗಿ ಶತಮಾನಗಳ ಕಾಲ ಶಿಲೆಯಾಗಿ ನಿಂತಿದ್ದ ಅಹಲ್ಯೆಯ ಪಾತ್ರವೂ ಕೂಡ ಶೋಚನೀಯವಾಗಿ ಕಾಣಿಸುತ್ತದೆ. ಹೆಣ್ಣಿನಲ್ಲಿ ಲೈಂಗಿಕತೆ ಎನ್ನುವುದು ಒಂದು ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸದಾ ಸಂಶಯಕ್ಕೆ ಬಲಿಯಾಗುವ ವಸ್ತುವೇ ಎಂಬುದಕ್ಕೆ ಜ್ವಲಂತ ನಿದರ್ಶನ ಅಹಲ್ಯೆಯ ಸಂದರ್ಭದಲ್ಲಿ ಕಾಣಬಹುದು. ದಿವ್ಯದೃಷ್ಟಿ ದಿವ್ಯಶಕ್ತಿ ಎಂಬ ವರವು ಕೇವಲ ಪುರುಷರಿಗೆ ಇದ್ದಂತಹುದು ಸಂಶಯಾಸ್ಪದವಾಗಿ ಕಾಣುತ್ತದೆ. ಬ್ರಾಹ್ಮಣಶಾಹಿಗಳು ಸ್ತ್ರೀಗೆ ಇದ್ದಂತಹ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸಲುವಾಗಿ ಇದನ್ನು ಬಳಸುತ್ತಿದ್ದರೆ, ಹೆಣ್ಣಿಗೆ ಮಾತ್ರ ದಿವ್ಯಶಕ್ತಿ ಯಾಕೆ ಇರಲಿಲ್ಲ? ಒಂದು ವೇಳೆ ಇದ್ದಿದ್ದರೆ ಕಾಮರೂಪಿಯಾದ ಇಂದ್ರನನ್ನು ತಡೆದು ಶತಮಾನಗಳ ಕಾಲ ಕಲ್ಲಾಗುವ ಬದಲು ಸುಂದರ ಹೂವಾಗಿ ಜೀವನ ನಡೆಸಬಹುದಿತ್ತಲ್ಲವೇ? ಎಂಬಂತಹ ಪ್ರಶ್ನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಮಲ್ಲಿಕಾ ಘಂಟಿ ಅವರ ‘ಸ್ವರ್ಗದಲ್ಲೊಂದು ಸಂದರ್ಶನ’ ಎಂಬ ಕವಿತೆಯಲ್ಲಿ ಅಹಲ್ಯೆಯನ್ನು ಸಂದರ್ಶಿಸುವ, ಆಧುನಿಕ ಕಾಲಘಟ್ಟದಲ್ಲಿ ಅಹಲ್ಯೆಯನ್ನು ನೋಡುವ ರೀತಿ-ನೀತಿಗಳನ್ನು ತಿಳಿದುಕೊಳ್ಳಬಹುದು.