ಹೊಸ ತಲೆಮಾರಿನ ಟಿ.ಯಲ್ಲಪ್ಪನವರ ಕಾವ್ಯದ ತಾತ್ವಿಕ ನೆಲೆಗಳು
Keywords:
ಬೆತ್ತಲೆ ಪರಿಕಲ್ಪನೆ, ಸೂಲಗಿತ್ತಿ, ಹೆರಿಗೆಯ ನೋವು, ಪ್ರಜಾಪ್ರಭುತ್ವ, ಗರುಡ, ಮಾರುಕಟ್ಟೆ, ಸಂಸ್ಕೃತಿAbstract
ಪ್ರಸ್ತುತ ಸಂಶೋಧನಾ ಲೇಖನವು ಆಧುನಿಕ ಕಾವ್ಯ ಹೊಸತಿಗಾಗಿ ಹುಡುಕಾಡುವ ನೆಲೆಗಟ್ಟನ್ನು ಚರ್ಚಿಸುತ್ತದೆ. ಈ ಹಿನ್ನೆಲೆಯಲ್ಲಿ ಹೊಸ ತಲೆಮಾರಿನ ಕವಿ ಅಥವಾ ಕಾವ್ಯಪರಂಪರೆಯು ಆಧುನಿಕ ಆಗು ಹೋಗುಗಳಿಗೆ ಮುಖಾಮುಖಿಯಾಗುವ ಸಂವಾದಿ ನೆಲೆಯನ್ನು ಕಂಡುಕೊಳ್ಳುತ್ತದೆ/ತ್ತಾನೆ. ಕೆಲವೊಮ್ಮೆ ಅದು ಸೃಜನಶೀಲ ನೆಲೆಗಟ್ಟನ್ನು ಪಡೆಯುತ್ತ ಸ್ತ್ರೀಯ ಬವಣೆಗಳನ್ನು ಸದಾ ನವೀನವಾಗಿ ವಾಸ್ತವದ ನೆಲೆಯಲ್ಲಿ ನಿರೂಪಿಸುತ್ತದೆ. ಸಾಂಪ್ರದಾಯಿಕ ‘ಸೂಲಗಿತ್ತಿ’ ನೆಲೆಗಟ್ಟಿನಿಂದ ನಿರೂಪಿಸುತ್ತಲೇ ಆಧುನಿಕ ಸ್ತ್ರೀ ಬದುಕಿನ ಅವಿಭಾಜ್ಯ ಅಂಗಗಳಾದ ಹೆರಿಗೆ ನೋವು ಆಸ್ಪತ್ರೆಯ ಸತ್ತೆ ಎಂಬಂತೆ ಸಿಜೇರಿಯನ್ ಪ್ರಸವದ ಮೂಲಕ ಕೊನೆಗೊಳ್ಳುವವರೆಗೆ ನಿರಂತರತೆಯನ್ನು ಪಡೆದುಕೊಳ್ಳುತ್ತದೆ.
ಕಾವ್ಯಕ್ಕೆ ಇಂತಹುದೇ ವಸ್ತು ಅನಿವಾರ್ಯ ಎನ್ನುವುದಾಗಲಿ, ಅವಶ್ಯಕತೆ ಎನ್ನುವುದಾಗಲಿ ಇಲ್ಲ. ಕಾವ್ಯದ ವಸ್ತು ಯಾವುದೇ ಆದರೂ ತಾತ್ವಿಕ ನೆಲೆಗಟ್ಟಿನಲ್ಲಿ ಪರಿಗಣಿಸಿದಾಗ ಅದು ತಂತಾನೆ ಸೃಜನಶೀಲ ಪ್ರಕ್ರಿಯೆಗೆ ಒಳಪಡುತ್ತ ಸಮಾಜದ ಆಗು ಹೋಗುಗಳನ್ನು ಒಳಗೊಳ್ಳುತ್ತದೆ. ಪ್ರಜಾಪ್ರಭುತ್ವ ಎನ್ನುವುದು ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಎಂಬ ಧ್ಯೇಯವಾಕ್ಯ ಹೊಂದಿದ್ದರೂ ಇಂದು ಪ್ರಭು-ಪ್ರಭುತ್ವವಾಗಿ ಮಾರ್ಪಟ್ಟು ವ್ಯಂಗ್ಯ ಮತ್ತು ಅಪಹಾಸ್ಯಕ್ಕೆ ಒಳಗಾಗುವ ಸಾಧ್ಯತೆಯನ್ನು ನಿರೂಪಿಸಿದೆ. ಆದರೂ ಕವಿ ಗರುಡದ ಸಂಕೇತವನ್ನು ಶೀರ್ಷಿಕೆಯಡಿಯಲ್ಲಿ ತಂದಿರುವುದನ್ನು ಗಮನಿಸಿದಾಗ ಪ್ರಭು ಪ್ರಭುತ್ವ ಹದ್ದಿನ ರೂಪದಲ್ಲಿ ಶ್ರೀ ಸಾಮಾನ್ಯನ ಬದುಕನ್ನು ಕಿತ್ತು ತಿನ್ನುವ ಪ್ರತೀಕವಾಗಿ ಕಂಡುಬರುತ್ತದೆ.
ಬದುಕು ನಿರಂತರ ಅದು ಭಾವನಾತ್ಮಕ ಸಂಬಂಧಗಳನ್ನು ಕಳೆದುಕೊಳ್ಳುತ್ತಾ ವ್ಯಾವಹಾರಿಕ ನಿಲುವಿಗೆ ಬಂದಾಗ ಹಣ, ಸಂಪತ್ತು ಮುಖ್ಯವಾಗಿ ಮನುಷ್ಯನ ಭಾವನೆಗಳಿಗೆ ಬೆಲೆಯಿಲ್ಲದಂತಾಗುತ್ತದೆ. ಹಾಗೆಯೇ ದಾಂಪತ್ಯ ಜೀವನ ಎಂಬುದು ಸದಾ ಹಿತವನ್ನು ಬಯಸುವ ವಾಸ್ತವ ಕಲ್ಪನೆಯಾಗಿದ್ದರೂ ಇಂದು ದಾಂಪತ್ಯ ಜೀವನ ಕೇವಲ ಜೊತೆಗಿರುವತನಕ, ಇಷ್ಟವಾದರೆ ಹಿತೈಷಿ ಇಲ್ಲವಾದರೆ ಹತಾಶೆ ಎಂಬ ಲಿವಿನ್ ಟುಗೆದರ್ ಕಲ್ಪನೆಯನ್ನು ಚರ್ಚಿಸುತ್ತದೆ. ಜೊತೆಗೆ ಅಪಮೌಲ್ಯಗೊಂಡ ಪಾರಂಪರಿಕ ಮೌಲ್ಯಗಳು, ದಲಿತರ ನೋವು, ಅವಮಾನ, ಸಿಟ್ಟು, ಸಂಕಟ, ಸಂಧಿಗ್ಧತೆ, ಆಕ್ರೋಶ, ಆವೇಶ ಮುಂತಾದ ಕಾವ್ಯ ವಸ್ತುವನ್ನು ವಸ್ತು ನಿಷ್ಠವಾಗಿ ಚರ್ಚಿಸುವ ಉದ್ದೇಶವನ್ನು ಪ್ರಸ್ತುತ ಸಂಶೋಧನಾ ಲೇಖನ ಹೊಂದಿದೆ.