ಜೈನ ಕಾವ್ಯಗಳಲ್ಲಿ ಸ್ತ್ರೀಪರ ಧೋರಣೆಗಳು

Authors

  • K.G.CHAVAN

Keywords:

ಜೀವದಯೆ, ಜೈನಧರ್ಮಂ, ಕರ್ಮ ಸಿದ್ಧಾಂತ, ಭವಾವಳಿ, ಅಮೃತಮತಿ, ಅಷ್ಟಾವಂಕ, ಪ್ರಣಯ

Abstract

ಪ್ರಾಚೀನ ಕನ್ನಡ ಜೈನ ಸಾಹಿತ್ಯದ ಪರಂಪರೆಯಲ್ಲಿ ಪಂಪ, ಪೊನ್ನ, ರನ್ನ ಇವರ ಬಳಿಕ ಬಂದ ಕವಿ ಜನ್ನ ಇವರೆಲ್ಲರೂ ಪ್ರಾರಂಭಿಸಿದ ಧಾರ್ಮಿಕ, ತಾರ್ಕಿಕ ಕಾವ್ಯಗಳ ಪರಿಕಲ್ಪನೆಗಳಿಂದ ಜೈನ ಕಾವ್ಯಗಳಲ್ಲಿ ಸ್ತ್ರೀಪರ ಧೋರಣೆಗೆ ಚಂದ್ರಮತಿ, ಅಮೃತಮತಿ, ಅಭಯಮತಿ, ಕುಸುಮಾವಳಿ ಉದಾಹರಣೆಯಾಗಿದ್ದಾರೆ. ಇವರಲ್ಲಿ ಅಮೃತಮತಿಗೆ ಸಂಬಂಧಿಸಿದ ಕಥಾಭಾಗ ಜಾನಪದ ಕಥೆಗಳಲ್ಲಿ ದೊರೆಯುತ್ತದೆ. ಕಥಾ ಸರಿತ್ಸಾಗರದಲ್ಲಿ ಅಮೃತಮತಿಯನ್ನು ಹೊಲುವ ಜಾರಸ್ತ್ರೀಯರ ಕಥೆಗಳು ಬರುತ್ತವೆ. ದಂಡಿಯ ದಶಕುಮಾರ ಚರಿತೆ ಗುಜರಾತಿ ತಮಿಳು ಕಾವ್ಯಗಳಲ್ಲಿ ಈ ವಸ್ತುವನ್ನು ಆಧರಿಸಿದ ಕಥೆಗಳೂ ಇವೆ. ಯಶೋಧರ ಚರಿತೆ ಕಾಲದ ದೃಷ್ಠಿಯಿಂದ ಮೊದಲನೆಯದಾಗಿದ್ದು ಕ್ರಿ.ಶ.೬೫೦ರಲ್ಲಿ ಇದ್ದ ಪ್ರಭಂಜನನು ಪ್ರಾಕೃತದಲ್ಲಿ ರಚಿಸಿದ್ದು ಈತನ ಕಾವ್ಯ ಉಪಲಬ್ದವಿಲ್ಲ. ಈ ದಿಶೆಯಲ್ಲಿ ಜನ್ನನ ಯಶೋಧರ ಚರಿತೆ ಆತನ ಸೃಜನಶೀಲತೆ ಕಾವ್ಯರೂಪದಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟಿದೆ. ‘ಮಾಡಿದುದಂ ನಾವುಣ್ಣದೆ ಪೋಕುಮೆ’ ಎಂಬ ಕರ್ಮಸಿದ್ದಾಂತದ ನೀತಿಯನ್ನು ಯಾರಿಗೂ ಮೀರಲು ಸಾಧ್ಯವಿಲ್ಲ. ಕೊನೆಯಲ್ಲಿ ‘ಧರ್ಮದಿಂದ ಆಗದುದೆಂ’ ಅಂದರೆ ಧರ್ಮದ ಆಚರಣೆಯಿಂದ ಎಲ್ಲವೂ ಸಾಧ್ಯವೆಂಬುದನ್ನು ಇಲ್ಲಿನ ಪಾತ್ರಗಳು ಚಿತ್ರಿಸುತ್ತವೆ. ದಾಂಪತ್ಯದ ನೆಮ್ಮದಿಗೆ ಅಗತ್ಯವಾದ ನಿಷ್ಠೆಯ ಚೌಕಟ್ಟು ಅಸಂಯಮದ ಕಾರಣದಿಂದಾಗಿ ಒಡೆದ ಚಿತ್ರ ಧೂಳಿಪಟವಾದದ್ದು ಯಶೋಧರ ಚರಿತ್ರೆಯ ಒಂದು ಮುಖವಾದರೆ ಸೃಷ್ಠಿಯ ನೆಮ್ಮದಿಗೆ ಅಗತ್ಯವಾದ ಜೀವ ಕಾರುಣ್ಯಕ್ಕೆ ಅವಶ್ಯಕವಾದ ಮಹತ್ವ ಇದರ ಮತ್ತೊಂದು ಮುಖ. ‘ಕೈಹಿಡಿದ ಪ್ರೇಮ ದ್ರೋಹದಿಂದ ಬೇಸತ್ತು ಸಂಸಾರವನ್ನು ತೊರೆದು ಹೋಗುವುದರಲ್ಲಿದ್ದ ದೊರೆಯೊಬ್ಬನು ತಾಯಿಯ ಮೇಲಿನ ಮೋಹದಿಂದ ಆಕೆ ಒಡ್ಡಿದ ಬಲಿಯ ಬಲೆಗೆ ಸಿಕ್ಕಿಬಿದ್ದು ವಿಷಗಳಿಗೆಯಲ್ಲಿ ಮಾನಸಿಕ ಹಿಂಸೆಗೆ ಎಡೆಗೊಟ್ಟು ಆ ಪಾಪದ ಫಲವಾಗಿ ತಾನು ಮತ್ತು ತನ್ನ ತಾಯಿ ಚಂದ್ರಮತಿ ಇಬ್ಬರೂ ಜನ್ಮ-ಜನ್ಮಾಂತರಗಳನ್ನು ಹೊಂದಿ ಕಷ್ಟಗಳನ್ನು ಅನುಭವಿಸಿ ಕೊನೆಗೆ ಪಾಪಮುಕ್ತವಾದ ಕಥೆ ಯಶೋಧರ ಚರಿತೆಯ ವಿಷಯವಾಗಿದೆ.

ಜೈನ ಧರ್ಮದಲ್ಲಿ ಅಹಿಂಸೆಗೆ ಪರಮ ಪ್ರಾಶಸ್ತ್ಯ. ‘ಜೀವದಯೆ ಜೈನಧರ್ಮಂ’ ಇದನ್ನೇ ಉದ್ಘೋಷಿಸಲು ಹೊರಟ ಕೃತಿ ಯಶೋಧರ ಚರಿತೆ. ಜನ್ನನ ಮೂಲೋದ್ದೇಶ ಧಾರ್ಮಿಕವಾದುದು ಆದರೆ ಅದೊಂದನ್ನೆ ದೃಷ್ಠಿಯಲ್ಲಿಟ್ಟುಕೊಂಡು ಅಮೃತಮತಿ ಅಷ್ಟಾವಂಕರ ಪ್ರಣಯ ಪ್ರಸಂಗವನ್ನು ನಿರ್ಲಕ್ಷಿಸಿ ಈ ಕಾವ್ಯದಲ್ಲಿ ಪ್ರಣಯ ಸಮಸ್ಯೆ ಎನ್ನುವಂಥದೇ ಇಲ್ಲ ಎಂಬಂತೆ ವಿವೇಚಿಸಿ ಹೊರಡುವುದೂ ಅತಿರೇಕವಾಗುತ್ತದೆ, ಪ್ರಣಯ ಚಿತ್ರಣವೊಂದೇ ಜನ್ನನ ಗುರಿ ಎಂದು ವಾದಿಸುವುದು ಹೇಗೆ ಒಂದು ತುದಿಯಾಗುತ್ತದೋ, ಹಾಗೆ ಪ್ರಣಯ ಆವಿಷ್ಕಾರ ನಿಮಿತ್ತ ಮಾತ್ರ. ಅದಕ್ಕೆ ಪ್ರತ್ಯೇಕ ಅಸ್ತಿತ್ವವಾಗಲಿ ಸತ್ವವಾಗಲಿ ಇಲ್ಲವೆಂಬುದನ್ನು ಪ್ರತಿನಿಧಿಸುತ್ತದೆ.

Downloads

Published

05.02.2024

How to Cite

K.G.CHAVAN. (2024). ಜೈನ ಕಾವ್ಯಗಳಲ್ಲಿ ಸ್ತ್ರೀಪರ ಧೋರಣೆಗಳು. AKSHARASURYA, 3(02), 27 to 40. Retrieved from http://aksharasurya.com/index.php/latest/article/view/309

Issue

Section

ಸಂಶೋಧನಾ ಲೇಖನಗಳು. | RESEARCH ARTICLE.