ಔತ್ತರೇಯ ಭಾರತೀಯ ಭಾಷೆ-ಕೃತಿಗಳಲ್ಲಿ ಕರ್ನಾಟಕ ಸಂಸ್ಕೃತಿಯ ಕೆಲವು ಉಲ್ಲೇಖಗಳು
Keywords:
ಕರ್ನಾಟಕ ಸಂಸ್ಕೃತಿ, ಕಣ್ಣರ್ ಜನಾಂಗ, ದ್ರಾವಿಡ, ಆರ್ಯ, ದಕ್ಷಿಣಾಪಥ, ಋಗ್ವೇದ, ಮನುಸ್ಮೃತಿ, ರಾಮಾಯಣ, ಮಹಾಭಾರತAbstract
ಆಶಯ:
ಕನ್ನಡ ಸಾರಸ್ವತ ಲೋಕದಲ್ಲಿ ಎಲೆಮರೆಯ ಕಾಯಿಯಂತಿದ್ದು ಕನ್ನಡ ಸಂಶೋಧನ ಕ್ಷೇತ್ರವನ್ನು ಮತ್ತಷ್ಟು ಗಟ್ಟಿಯಾಗಿ ವಿಸ್ತರಿಸಿದ ಹಾಗೂ ಶ್ರೀಮಂತಗೊಳಿಸಿದ ವಿದ್ವಾಂಸರಲ್ಲಿ ಡಾ.ವಿ.ಶಿವಾನಂದ ಅವರು ಪ್ರಮುಖರು. ಅತ್ಯುತ್ತಮ ಕನ್ನಡ ಪ್ರಾಧ್ಯಾಪಕರಾಗಿ, ನಿರಂತರ ಅಧ್ಯಯನಶೀಲ ವಿದ್ವಾಂಸರಾಗಿ, ಪ್ರಥಮಶ್ರೇಣಿಯ ಸಂಶೋಧಕರಾಗಿ, ಶ್ರೇಷ್ಠ ಭಾಷಾವಿಜ್ಞಾನಿಯಾಗಿ ಅವರು ತಮ್ಮ ವಿದ್ವತ್ ಪ್ರತಿಭೆಯನ್ನು ಬೋಧನೆ ಮತ್ತು ಬರಹಗಳಲ್ಲಿ ಧಾರೆಯೆರೆದು ಕನ್ನಡ ಸಾರಸ್ವತ ಪ್ರಪಂಚವನ್ನು ಶ್ರೀಮಂತಗೊಳಿಸಿದವರು. ಶ್ರೀಯುತರು ಮೂಲತಃ ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಕನಮಡಿ ಗ್ರಾಮದವರು. ತಂದೆ ಗುರುಪಾದಯ್ಯ, ತಾಯಿ ರಾಚಮ್ಮ. ಹುಟ್ಟಿದ್ದು 1-5-1941. ಪ್ರಾಥಮಿಕ ಶಿಕ್ಷಣವನ್ನು ಕನಮಡಿಯಲ್ಲಿ, ನಂತರ ಶ್ರೀ ಶರಣಬಸವೇಶ್ವರ ಹೈಸ್ಕೂಲ್‌ನಲ್ಲಿ ಹಾಗೂ ಶ್ರೀಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪಿಯುಸಿ, ತದನಂತರ, 1963ರಲ್ಲಿ ಬಿ.ಎ. ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವೀಧರರು. 1971ರಲ್ಲಿ ಪಿಎಚ್.ಡಿ. ಪದವಿ ಪಡೆದರು. ‘ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ’ ಎಂಬುದು ಅವರ ಪಿಎಚ್.ಡಿ. ಪ್ರಬಂಧ. ಮಾರ್ಗದರ್ಶಕರು: ಡಾ.ಆರ್.ಸಿ. ಹಿರೇಮಠ. 1981-82ರ ಅವಧಿಯಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಪೋಸ್ಟ್ ಡಾಕ್ಟರಲ್ ಪದವಿ. ವಿಷಯ: ಗುಲಬರ್ಗಾ ಜಿಲ್ಲೆಯ ಒಕ್ಕಲುತನದ ವೃತ್ತಿಪದಗಳು. ಮಾರ್ಗದರ್ಶಕರು: ಡಾ.ಕೆ.ಕುಶಾಲಪ್ಪಗೌಡ. 1965ರಲ್ಲಿ ಕರ್ನಾಟಕ ವಿ.ವಿ.ಯ ಕನ್ನಡ ಅಧ್ಯಯನ ಪೀಠದಲ್ಲಿ ಸಹಾಯಕ ಸಂಶೋಧಕರಾದರು. ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ನಂತರ ಗದಗದ ಜೆ.ಟಿ.ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, 1983ರಲ್ಲಿ ಬನಾರಸ ಹಿಂದೂ ವಿಶ್ವವಿದ್ಯಾಲಯದ ಕನ್ನಡ ಪೀಠದ ಪ್ರಾಧ್ಯಾಪಕರಾದರು. ಹೀಗೆ ಕರ್ನಾಟಕದ ಒಳಗೂ ಹಾಗೂ ಹೊರಗೂ ಕನ್ನಡ ಕಟ್ಟುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಹತ್ತರವಾದ ಕೊಡುಗೆ ನೀಡಿದ ಘನವಿದ್ವಾಂಸರು ವಿ.ಶಿವಾನಂದರು.
ಶಿವಾನಂದರ ಸಾಹಿತ್ಯ ಸೃಷ್ಟಿ ವಿಪುಲವಾದದ್ದು, ಆಳವಾದದ್ದು. ಹಳಗನ್ನಡ, ಜಾನಪದ, ಶಾಸನಶಾಸ್ತ್ರ, ಭಾಷಾಶಾಸ್ತ್ರ, ದ್ರಾವಿಡ ಭಾಷಾವಿಜ್ಞಾನ, ವ್ಯಾಕರಣ, ವೀರಶೈವ ಸಾಹಿತ್ಯ, ಸಂಸ್ಕೃತಿ ಅಧ್ಯಯನ, ಜೀವನ ಚರಿತ್ರೆ, ಹಸ್ತಪ್ರತಿಶಾಸ್ತ್ರ, ಸಂಶೋಧನೆ, ಗ್ರಂಥಸಂಪಾದನೆ ಮುಂತಾದ ಬಹು ವಿಷಯಗಳ ಬಗ್ಗೆ ಅಪಾರ ಪಾಂಡಿತ್ಯ ಹೊಂದಿದ್ದ ಶ್ರೀಯುತರು 35ಕ್ಕೂ ಹೆಚ್ಚು ಗ್ರಂಥ ಗಳನ್ನು ರಚಿಸಿರುವುದಲ್ಲದೆ, ನೂರಾರು ಬಿಡಿಲೇಖನಗಳನ್ನು ಬರೆದಿದ್ದಾರೆ. ‘ಸೀಮಾಪುರುಷ ಷಡಕ್ಷರದೇವ’(1966), ಸಗರನಾಡಿನ ಶಿವಶರಣರು(1967), ಅಮಾತ್ಯ ಶಿರೋಮಣಿ ಲಕ್ಕಣ್ಣ ದಂಡೇಶ(1970), ಶತಮಾನದ ಕನ್ನಡ ಸಾಹಿತ್ಯ ಚರಿತ್ರೆ(1977), ಕನ್ನಡ ಸಾಹಿತ್ಯಕ್ಕೆ ಗದುಗಿನ ಕಾಣಿಕೆ, ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ(1978), ಕಲಬುರ್ಗಿ ಜಿಲ್ಲೆಯ ಶಿಲಾಶಾಸನಗಳು(1978), ಹೈದರಾಬಾದ ಕರ್ನಾಟಕ ಭಾಗದ ಕನ್ನಡ ಶಿಲಾಶಾಸನಗಳು(1992) ಎಂಬ ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ಶ್ರೀ ಮಲ್ಲಿಕಾರ್ಜುನ ಕವಿ ವಿರಚಿತ ಶ್ರೀ ಕಿರೀಟೇಶ್ವರ ಪುರಾಣ, ಸಂಗನಬಸವ ದೇಸಿಕ ವಿರಚಿತ ಶ್ರೀ ಗುರುನಂಜೇಶ್ವರ ಪುರಾಣ, ಕವಿ ಚೆನ್ನ ವಿರಚಿತ ಗುಂಡಬ್ರಹ್ಮಯ್ಯಗಳ ಚರಿತ್ರೆ, ಜೇವರ್ಗಿ ಜ್ಯೋತಿ, ವಿರಕ್ತ ತೋಂಟದಾರ್ಯ ವಿರಚಿತ ಕರ್ನಾಟಕ ಶಬ್ದಮಂಜರಿ, ಶ್ರೀ ಅಣಿವೀರಭದ್ರೇಶ್ವರ ಪುರಾಣ ಮೊದಲಾದ ಕೃತಿಗಳನ್ನು ಸಂಪಾದಿಸಿದ್ದಾರೆ. ‘ಉತ್ತರ ಭಾರತದ ಕನ್ನಡ ಹಸ್ತಪ್ರತಿ ಇತರ ದಾಖಲೆಗಳ ಸೂಚಿ’ ಎಂಬ ಗ್ರಂಥಸೂಚಿ ಕೃತಿಯು ಔತ್ತರೇಯ ಭಾರತದಲ್ಲಿನ ಕನ್ನಡ ಪಾರಂಪರಿಕ, ಸಾಂಸ್ಕೃತಿಕ, ಭಾಷಿಕ ಹಾಗೂ ಸಾಹಿತ್ಯಕ ಸಂಗತಿಗಳನ್ನು ಕುರಿತು ಅಮೂಲ್ಯವಾದ ಮಾರ್ಗದರ್ಶಿಯಾಗಿದೆ.
ಶಬ್ದಮಣಿದರ್ಪಣ ವಿಳಾಸ(1972), ಭಾಷಾವೈಜ್ಞಾನಿಕ ನೆಲೆಯಲ್ಲಿ ಪದಗಳ ಚರಿತ್ರೆ(1987), ಕನ್ನಡ ಆಕೃತಿಮಾ(1987), ಶಬ್ದಮಣಿದರ್ಪಣದಲ್ಲಿ ಗ್ರಾಂಥಿಕ-ವ್ಯಾವಹಾರಿಕ ಶೈಲಿಗಳು(1992), ತೌಲನಿಕ ದ್ರಾವಿಡ ಭಾಷಾ ವಿಜ್ಞಾನ(1999), ಕಲಬುರ್ಗಿ ಕನ್ನಡ, ಜಾನಪದ ಭಾಷೆ-ಅವಲೋಕನ, ಹರಿಹರನ ಭಾಷೆ-ಒಳನೋಟ, ಶಬ್ದಮಣಿ ದರ್ಪಣ: ಅಂದು ಇಂದು, ಶಾಸನಗಳ ಭಾಷಿಕ ವಿಚಾರ, ವಚನ ಸಾಹಿತ್ಯದಲ್ಲಿ ಸಮಾಜೋಭಾಷಿಕ ಚಿಂತನೆಗಳು (2003), Studies in Kannada Socio-Linguistics (1994) ಮೊದಲಾದುವು ಭಾಷಾವಿಜ್ಞಾನ ಮತ್ತು ವ್ಯಾಕರಣ ಕ್ಷೇತ್ರಕ್ಕೆ ವಿ.ಶಿವಾನಂದರು ನೀಡಿರುವ ಅನುಪಮವಾದ ಕಾಣ್ಕೆಗಳಾಗಿವೆ. ವ್ಯಾಕರಣ ಮತ್ತು ಭಾಷಾವಿಜ್ಞಾನ ಡಾ.ವಿ.ಶಿವಾನಂದ ಅವರ ವಿಶೇಷ ಪ್ರೀತಿಯ ಕ್ಷೇತ್ರ, ಪಾರಂಪರಿಕ ವ್ಯಾಕರಣ ಮತ್ತು ಆಧುನಿಕ ಭಾಷಾವಿಜ್ಞಾನಗಳನ್ನು ತುಂಬ ಗಂಭೀರ ಅಧ್ಯಯನಕ್ಕೆ ಒಳಪಡಿಸಿ ತೌಲನಿಕ ವಿವೇಚನೆ ಕೈಕೊಂಡ ಕೆಲವೇ ವಿದ್ವಾಂಸರಲ್ಲಿ ಡಾ.ವಿ.ಶಿವಾನಂದ ಅವರ ಹೆಸರು ಎದ್ದು ಕಾಣುವಂತಹದಾಗಿದೆ. ಎಂ.ಎ. ಪದವಿ ಪಡೆದು ಅಧ್ಯಾಪಕವೃತ್ತಿ ಆರಂಭಿಸಿದ ತರುಣದಲ್ಲಿಯೇ ಶಬ್ದಮಣಿದರ್ಪಣವನ್ನು ಕುರಿತು ಆಳವಾದ ಅಧ್ಯಯನ ನಡೆಸಿ ರಚಿಸಿದ ‘ಶಬ್ದಮಣಿದರ್ಪಣ ವಿಳಾಸ’ ಎಂಬ ಕೃತಿ ವಿದ್ವಾಂಸರ ಗಮನವನ್ನು ವಿಶೇಷವಾಗಿ ಸೆಳೆಯಿತು. ವಿದ್ಯಾರ್ಥಿಗಳಿಗೆ ನಿರಂತರ ಅಧ್ಯಯನ ಯೋಗ್ಯ ಕೃತಿಯಾಗಿ ಬಳಕೆಯಲ್ಲಿ ಬಂದಿತು. ಶಬ್ದಮಣಿದರ್ಪಣ ಕಬ್ಬಿಣದ ಕಡಲೆ ಎಂಬ ಹೇಳಿಕೆಯನ್ನು ಸುಳ್ಳಾಗಿಸಿತು. ಹಾಗೆಯೆ ಭಾಷೆ-ವ್ಯಾಕರಣಗಳಿಗೆ ಸಂಬಂಧಿಸಿ ಬರೆದ ಇಪ್ಪತ್ತಕ್ಕೂ ಹೆಚ್ಚು ಇತರ ಲೇಖನಗಳು ಈ ಕ್ಷೇತ್ರದ ಮೇಲೆ ಹೊಸಬೆಳಕು ಚೆಲ್ಲುವಲ್ಲಿ ಸಹಕಾರಿಯಾಗಿವೆ.
ಡಾ.ವಿ.ಶಿವಾನಂದ ಅವರು ನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಈಗಾಗಲೇ ವಿದ್ವಾಂಸರು ಗುರುತಿಸಿರುವಂತೆ, “ನೂತನ ಕ್ಷೇತ್ರಗಳ ಶೋಧ, ವ್ಯಾಪಕ ಅಧ್ಯಯನ, ವಿಪುಲ ಆಕರ ಸಾಮಗ್ರಿ ಸಂಗ್ರಹ, ಗಂಭೀರ ಚಿಂತನೆ, ವ್ಯವಸ್ಥಿತ ನಿರೂಪಣೆಯಿಂದ ಕೂಡಿದ ಅವು ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಲ್ಲುವ ಶಕ್ತಿ ಮತ್ತು ಸತ್ವಗಳನ್ನು ಪಡೆದುಕೊಂಡಿವೆ.” ಇಂತಹ ವಿದ್ವತ್ಪೂರ್ಣ ಸಂಶೋಧನ ಲೇಖನಗಳು ಯುವ ಪೀಳಿಗೆಯ ಸಂಶೋಧಕರಿಗೆ ಮಾರ್ಗದರ್ಶಕ-ಮಾದರಿಯ ಬರಹಗಳಾಗಿ ಬಹುಮುಖ್ಯ ಸಂಪನ್ಮೂಲಗಳನ್ನು ಒದಗಿಸುತ್ತಿವೆ. ಕೊಂಡಗುಳಿ ಕೇಶಿರಾಜ, ಶಂಕರದಾಸಿಮಯ್ಯ, ಹರಿಹರ, ಜಕ್ಕಣಾರ್ಯ, ಷಣ್ಮುಖ ಶಿವಯೋಗಿ, ಷಡಕ್ಷರದೇವ, ನಿರ್ವಾಣಿ ಬೋಳೇಶ-ಮೊದಲಾದವು ವ್ಯಕ್ತಿಕೇಂದ್ರಿತ ಬರಹಗಳಾದರೆ, ಹರಳಯ್ಯಗಳ ವಾದ ಖಂಡನ ಚೌಪದನ, ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ ಒಂದು ವಿವೇಚನೆ, ಪುಲಿಗೆರೆ ಮಹಾಲಿಂಗದೇವನ ಅಭವಕಂದ, ಪಾಲ್ಕುರಿಕೆ ಸೋಮನಾಥ ನ ಶೀಲಸಂಪಾದನೆ, ತಾತ್ವಿಕ ಚಿಂತನೆಯ ಉದ್ಘಕೃತಿ ಲಿಂಗಚಿದಮೃತಬೋಧೆ ಮೊದಲಾದವು ಕೃತಿಕೇಂದ್ರಿತ ರಚನೆಗಳೆನಿಸಿವೆ. ಬಸವಣ್ಣನವರ ಬಹುಲಿಪಿಜ್ಞತೆ-ದೇವಲಿಪಿ ಒಂದು ಟಿಪ್ಪಣಿ, ಪ್ರಭುದೇವರು ಹುಟ್ಟಿನಿಂದ ಶೂದ್ರನೆ?-ಒಂದು ಪ್ರತಿಕ್ರಿಯೆ, ಸರ್ವಜ್ಞ ವಿರತಮಹಾಲಿಂಗದೇವ ಗುರು-ಶಿಷ್ಯರಲ್ಲ, ಗುಂಡಬ್ರಹ್ಮಯ್ಯರ ಐತಿಹ್ಯ, ಶೂನ್ಯಸಿಂಹಾಸನ ಒಂದು ಸಂಪ್ರದಾಯವೆ?-ಒಂದು ವಿವೇಚನೆ, ಸಿಂಧೂಕೊಳ್ಳದ ಶಿವ, ಶಿವಧರ್ಮ ಮತ್ತು ಸಂಸ್ಕೃತಿ, 12ನೆಯ ಶತಮಾನ ಪೂರ್ವದ ಶೈವ ಕುರುಹುಗಳು, ಕಾಶಿ ಜಂಗಮವಾಡಿ ಮಠದ ಸಾಂಸ್ಕೃತಿಕ ಕೊಡುಗೆ, ಮಧುಕೇಶ್ವರ ದೇವಾಲಯದ ಶರಣರ ವಿಗ್ರಹಗಳು-ಮೊದಲಾದವು ಸಾಂಸ್ಕೃತಿಕ ಶೋಧದ ಮಾದರಿಗಳೆನಿಸಿವೆ. ವೀರಶೈವ ಶೀಲಗಳು, ಅಷ್ಟಾವರಣಗಳಲ್ಲಿ ದಾಸೋಹ, ಶಿವಯೋಗ ಆಧುನಿಕ ಪರಿಭಾವನೆ, ಷಣ್ಮುಖ ಶಿವಯೋಗಿಯ ದೃಷ್ಟಿಯಲ್ಲಿ ಜಂಗಮ ಮೊದಲಾದವು ತಾತ್ವಿಕ ಬರಹಗಳಾಗಿವೆ. ಕಾಲಜ್ಞಾನ ಸಾಹಿತ್ಯ, ವೀರಶೈವ ಸಾಹಿತ್ಯ, ವೀರಶೈವ-ಹದಿನೈದನೆಯ ಶತಮಾನ, ವಚನ ಸಾಹಿತ್ಯದ ಪುನರುತ್ಥಾನ, ಹರಿಹರ ಕವಿಯು ಚಿತ್ರಿಸಿದ ಶರಣರು, ಕನ್ನಡ ಸಾಹಿತ್ಯದ ಮೇಲೆ ಷಡಕ್ಷರದೇವನ ಪ್ರಭಾವ, ಕರ್ನಾಟಕದ ಅನುಭಾವಿ ಕವಿಗಳು, -ಇತ್ಯಾದಿ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ಲೇಖನಗಳಾಗಿವೆ.
ಹೈದರಾಬಾದ ಕರ್ನಾಟಕ ಭಾಗದ ಕನ್ನಡ ಶಿಲಾಶಾಸನಗಳು, ತಿಂಥಿಣಿ ಮೋನೇಶ್ವರನ ತಾಮ್ರಶಾಸನ, ಕರ್ನಾಟಕ ರಾಜಕೀಯ ಚರಿತ್ರೆ, ಪ್ರೌಢದೇವರಾಯ, ಉತ್ತರ ಭಾರತದಲ್ಲಿ ಕನ್ನಡ ಅಧ್ಯಯನ ಹಾಗೂ ಹೆಚ್ಚಿನ ಸಂಶೋಧನೆಗೆ ಅವಕಾಶಗಳು, ಕನ್ನಡ ಸಾಹಿತ್ಯಕ್ಕೆ ಪುಲಿಗೆರೆಯ ಕಾಣಿಕೆ, ಕಾರ್ನಾಡರ ತಲೆದಂಡ ನಾಟಕದಲ್ಲಿ ಅಸ್ತಿತ್ವವಾದ, ಶಾಂತರಸರ ಕಥೆಗಳಲ್ಲಿ ಸಾಮಾಜಿಕ ಭಾಷಾಶೈಲಿ ಪ್ರಭೇದಗಳು-ಮೊದಲಾದ ಲೇಖನಗಳು ಶಾಸನ-ಚರಿತ್ರೆ-ಸಂಶೋಧನೆ-ವಿಮರ್ಶೆಗಳಿಗೆ ಸಂಬಂಧಿಸಿದ ಮಹತ್ವದ ಲೇಖನಗಳಾಗಿವೆ. ಜಾನಪದ ಕುರಿತಂತೆ ಶಿಷ್ಟಪದ-ಶಿಷ್ಟ ಜನಪದ ಹಾಗೂ ಜನಪದ ಕಾವ್ಯಗಳ ಪುನರ್ ವಿರಚನೆ-ಒಂದು ತೌಲನಿಕ ದೃಷ್ಟಿ, ಒಕ್ಕಲಿಗ, ಕಾಲಜ್ಞಾನ ಸಾಹಿತ್ಯ ಮತ್ತು ಅದರ ಜಾನಪದ ಧೋರಣೆಗಳು, ಮೇಳಾಪ-ಒಂದು ಜನಪದ ಬಯಲು ಕುಣಿತ, ಒಕ್ಕಲುತನ ವೃತ್ತಿಪದಕೋಶ, ಎಲೆಬಳ್ಳಿ ತೋಟದ ವೃತ್ತಿಪದಗಳು ಎಂಬ ಲೇಖನಗಳು ಈ ಕ್ಷೇತ್ರಕ್ಕೆ ಕೊಟ್ಟ ಮೌಲಿಕ ಕೊಡುಗೆಗಳೆನಿಸಿವೆ. ಹೀಗೆ, ಡಾ.ವಿ.ಶಿವಾನಂದ ಅವರು ನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ವಿಷಯ ವೈವಿಧ್ಯದಿಂದ ಕೂಡಿರುವ ಈ ಲೇಖನಗಳನ್ನು ಗಮನಿಸಿದಾಗ ಲೇಖಕರ ತಲಸ್ಪರ್ಶಿಜ್ಞಾನ ಎಂಥವರಿಗೂ ಗೋಚರಿಸುತ್ತದೆ. ನೂತನ ಕ್ಷೇತ್ರಗಳ ಶೋಧ, ವ್ಯಾಪಕ ಅಧ್ಯಯನ, ವಿಪುಲ ಆಕರ ಸಾಮಗ್ರಿ ಸಂಗ್ರಹ, ಗಂಭೀರ ಚಿಂತನೆ, ವ್ಯವಸ್ಥಿತ ನಿರೂಪಣೆಯಿಂದ ಕೂಡಿದ ಅವು ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಲ್ಲುವ ಶಕ್ತಿ ಮತ್ತು ಸತ್ವಗಳನ್ನು ಪಡೆದುಕೊಂಡಿವೆ. ಯುವ ಪೀಳಿಗೆಯ ಸಂಶೋಧಕರಿಗೆ ಮಾರ್ಗದರ್ಶಕ-ಮಾದರಿಯ ಬರಹಗಳಾಗಿ ಬಹುಮುಖ್ಯ ಸಂಪನ್ಮೂಲಗಳನ್ನು ಒದಗಿಸುತ್ತಿವೆ.
ಪ್ರಸ್ತುತ ‘ಔತ್ತರೇಯ ಭಾರತೀಯ ಭಾಷೆಗಳಲ್ಲಿ ಕರ್ನಾಟಕ ಸಂಸ್ಕೃತಿಯ ಕೆಲವು ಉಲ್ಲೇಖಗಳು’ ಎಂಬ ಲೇಖನವು ಉತ್ತರ ಮತ್ತು ದಕ್ಷಿಣ ಭಾರತಗಳ ನಡುವಿನ ಕನ್ನಡ ನಾಡುನುಡಿಯ ಸಾಂಸ್ಕೃತಿಕ ಮೈತ್ರಿಯಾನವನ್ನು ಸಾಕ್ಷೀಕರಿಸುವಂಥದ್ದಾಗಿದೆ. ಸಂಸ್ಕೃತ, ಪಾಲಿ, ಪ್ರಾಕೃತ, ಅಪಭ್ರಂಶ, ಓರಿಯಾ, ಮರಾಠಿ ಮತ್ತು ಹಿಂದಿ ಭಾಷೆಯ ಗ್ರಂಥಗಳಲ್ಲಿ ಉಲ್ಲೇಖವಾದ ಕರ್ನಾಟಕ ಸಂಸ್ಕೃತಿಗೆ ಸಂಬಂಧಿಸಿದ ಅಂಶಗಳನ್ನು ಸಂಗ್ರಹಿಸಿ, ಅದರ ಪ್ರಾಚೀನತೆ ಪ್ರಬುದ್ಧತೆ ಮತ್ತು ಪ್ರಸಿದ್ದಿಗಳನ್ನು ಎತ್ತಿಹೇಳಲಾಗಿದೆ. ವೇದಪೂರ್ವಕಾಲೀನ ಕರ್ನಾಟಕ ಸಂಸ್ಕೃತಿಯ ಸುಳುಹುಗಳಿಂದ ಆರಂಭಿಸಿ, ಮುಂದೆ ವೇದ ಪುರಾಣ ಕಾಲಗಳಲ್ಲಿ ಅದು ಹೇಗೆ ಸ್ಪಷ್ಟರೂಪವನ್ನು ತೋರುತ್ತ ಬಂದಿತು ಎಂಬುದನ್ನು ಕರ್ನಾಟಕದ ಆಳರಸರ ಚರಿತ್ರೆ, ಕರ್ನಾಟಕದ ಕಲೆಗಳು, ಧರ್ಮಪರಂಪರೆ, ಭಕ್ತಿಪಂಥಗಳ ಪ್ರಸಾರ-ಪ್ರಭಾವಗಳ ಹಿನ್ನೆಲೆಯಲ್ಲಿ ಗುರುತಿಸಲು ಪ್ರಯತ್ನಿಸಿರುವುದು ಕನ್ನಡ ಸಂಸ್ಕೃತಿಯಾನಕ್ಕೆ ಸಂಬಂಧಿಸಿದ ನವನವೀನ ಸಂಗತಿಗಳ ದಾಖಲೀಕರಣವೂ ಹೌದು, ದಾರಿದೀಪವೂ ಹೌದು.