ಕೆರೆಯ ನೀರು ಕೆಂಪಗೆ
Abstract
ಜಗತ್ತು ರಸವತ್ತಾದುದು. ಪ್ರೇಮ ಅನುಪಮವಾದುದು. ಇದನ್ನೆಲ್ಲ ಹೇಳಿಕೊಳ್ಳಲು ನುಡಿಯು ಬಹುಮುಖ್ಯವಾದದ್ದು. ದ್ರಾವಿಡ ನುಡಿಗಳ ಚರಿತ್ರೆಯಲ್ಲಿ ತಮಿಳಿಗೆ ಮೊದಲ ಸ್ಥಾನವೆಂದು ಹೇಳುವುದು ವಾಡಿಕೆ. ಕಾರಣ ಸುಮಾರು ಎರಡು ಸಾವಿರ ವರ್ಷಗಳ ಹಿಂದಿನ ಸಾಹಿತ್ಯವೂ ಲಿಖಿತವಾಗಿ ಲಭ್ಯವಿದೆ. ಅದನ್ನು ಸಂಗಂ ಸಾಹಿತ್ಯವೆಂದು ಕರೆಯುತ್ತಾರೆ. ಹಾಗಾದರೆ ಈ ಹೊತ್ತಿಗೆ ದ್ರಾವಿಡದ ಇತರ ನುಡಿಗಳಲ್ಲಿ ಸಾಹಿತ್ಯವಿರಲಿಲ್ಲವೆ? ಎಂಬುದು ಪ್ರಶ್ನೆಯಾಗಿ ಅದಕ್ಕೆ ಅನೇಕ ಪರ-ವಿರೋಧ ಉತ್ತರಗಳು ಲಭಿಸುತ್ತವೆ. ಹಾಗೆಯೇ ಪ್ರಸ್ತುತಕ್ಕೆ ಲಿಖಿತ ಆಧಾರಗಳಿಂದ ತಮಿಳು ಮುಂಚೂಣಿಯಲ್ಲಿದೆ. ಸಂಗಂ ಸಾಹಿತ್ಯದಲ್ಲಿ ನಮಗೆ ಲಭಿಸುವ ಸಾಹಿತ್ಯದ ವಿಷಯಗಳನ್ನು ಅನೇಕ ಭಾಗಗಳಾಗಿ ವಿಭಾಗಿಸುತ್ತಾರೆ. ಅಲ್ಲಿ ಪ್ರಕೃತಿಯ ವರ್ಣನೆಯಿಂದ ಹಿಡಿದು, ಗಂಡುಹೆಣ್ಣಿನ ಖಾಸಗಿ ವಿಷಯಗಳವರೆಗೂ ಸಾಹಿತ್ಯ ಮಾತನಾಡುತ್ತದೆ. ಈ ಹಲವಾರು ವಿಷಯಗಳಲ್ಲಿ ‘ಅಗಂ’ ಎಂದರೆ ಆಂತರಿಕ ವಿಷಯ ಎಂಬುದೂ ಒಂದು ವಿಭಾಗ. ಈ ವಿಭಾಗದಲ್ಲಿ ಕಂಡುಬರುವ ಸಾಹಿತ್ಯವನ್ನು ಗಮನಿಸಿದರೆ ತಮಿಳಿನಂತೆಯೇ ಕನ್ನಡದಲ್ಲಿಯೂ ಸಹ ಇಂತಹ ಸಾಹಿತ್ಯ ಸೃಷ್ಠಿಯಿದೆ. ಆದರೆ ಅದು ಲಿಖಿತ ರೂಪಕ್ಕೆ ಬದಲಾಗಿ ಜನರ ನಾಲಗೆಯ ಮೇಲೆ ಲಾಸ್ಯವಾಡುತ್ತ ಜಾನಪದವಾಗಿ ಬೆಳೆದು ಬಂದಿದೆ. ಇಂದಿಗೂ ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಬಳಸಲ್ಪಡುವ ಈ ಜಾನಪದದ ವಿವಿಧ ಬಗೆಯ ಸಾಹಿತ್ಯ ಪ್ರಕಾರಗಳು ತಮಿಳಿನ ಸಂಗಂ ಕಾಲದ ಸಾಹಿತ್ಯದೊಂದಿಗೆ ಸಾಮ್ಯತೆಯನ್ನು ಹೊಂದುವುದನ್ನು ಕಾಣುತ್ತೇವೆ. ಅದಾವ ಕಾರಣಕ್ಕೆ ಕನ್ನಡದಲ್ಲಿ ಇಂತಹ ಸಾಹಿತ್ಯ ಲಿಖಿತ ರೂಪ ಪಡೆಯಲಿಲ್ಲವೊ ಅಥವಾ ಪಡೆದಿದ್ದರೂ ಅದು ದೊರೆಯಲಿಲ್ಲವೊ ತಿಳಿಯದು ಅಥವಾ ಇಂತಹ ಸಾಹಿತ್ಯ ಗ್ರಂಥಕರ್ತರ ಮನಸೆಳೆಯಲಿಲ್ಲವೋ ಅದೂ ತಿಳಿಯದು. ಒಟ್ಟಿನಲ್ಲಿ ಅದು ಗ್ರಾಂಥಿಕ ನುಡಿಯ ಬದಲಾಗಿ ಆಡುನುಡಿಯಲ್ಲಿ ಲಭಿಸುವುದನ್ನು ಕಾಣುತ್ತೇವೆ. ಆದರೆ ಹಲವು ದಶಕಗಳಿಂದೀಚೆಗೆ ಈ ಸಾಹಿತ್ಯವನ್ನು ಜಾನಪದ ಸಾಹಿತ್ಯ ಎನ್ನುವ ತಲೆಬರಹದ ಅಡಿಯಲ್ಲಿ ಸಂಗ್ರಹಿಸುವ ಕರ್ಯ ಭರದಿಂದ ಸಾಗಿರುವುದು ಕಂಡುಬರುತ್ತದೆ.