ಔತ್ತರೇಯ ಸಂತರ ಮೇಲೆ ವೀರಶೈವ ಪ್ರಭಾವ

Authors

  • ಮ.ಸು. ಕೃಷ್ಣಮೂರ್ತಿ
  • ಎಂ. ಭೈರಪ್ಪ ಕನ್ನಡ ಸಹಾಯಕ ಪ್ರಾಧ್ಯಾಪಕರು, ಸಮಾಜ ವಿಜ್ಞಾನ ಮತ್ತು ಭಾಷೆಗಳ ವಿಭಾಗ, ಕ್ರಿಸ್ತು ಜಯಂತಿ ಕಾಲೇಜು (ಸ್ವಾಯತ್ತ), ಕೆ.ನಾರಾಯಣಪುರ, ಕೊತ್ತನೂರು ಅಂಚೆ, ಬೆಂಗಳೂರು.

Keywords:

ಬಸವ, ತುಕಾರಾಮ್, ಏಕನಾಥ, ವೀರಶೈವ, ವಚನ ಚಳುವಳಿ, ಜ್ಞಾನದೇವ, ನಾಮದೇವ

Abstract

ಬಹುಸಾಂಸ್ಕೃತಿಕ ಸಂಬಂಧಗಳ ಸಂಶೋಧಕ-ಸಾಧಕರು ಮ.ಸು.ಕೃಷ್ಣಮೂರ್ತಿ


ಮನುಕುಲವನ್ನು ಇಡಿಯಾಗಿ ಕಾಣುವ ಮನಸ್ಸು, ಕನ್ನಡ-ಹಿಂದಿ ಭಾಷೆ-ಸಾಹಿತ್ಯಗಳ ಸೇತುವೆ, ಎರಡು ಭಾಷೆಗಳಲ್ಲೂ ಬರೆದ ಸವ್ಯಸಾಚಿ, ಬಹುಪ್ರಕಾರಗಳ ಸಾಹಿತ್ಯಕೃಷಿಕ, ಭಾರತೀಯ ಅಧ್ಯಾತ್ಮ ಪರಂಪರೆಯ ಮಹಾಶೋಧಕ ಮೊದಲಾದ ಪ್ರಸಿದ್ಧಿಗೆ ಭಾಜನರಾದ ಸಾಹಿತಿ ಮ.ಸು.ಕೃಷ್ಣಮೂರ್ತಿ ಅವರು. ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಶ್ರೀಯುತರ ಒಂದೊಂದು ಪುಸ್ತಕವೂ ಇವರ ಆಳವಾದ ವಿದ್ವತ್ತಿಗೆ ಸಾಕ್ಷಿಯಾಗಿವೆ. ಕಾದಂಬರಿ, ಕವಿತೆ, ಜೀವನ ಚರಿತ್ರೆ, ಸಣ್ಣಕಥೆ, ನಾಟಕ, ಲಲಿತ ಪ್ರಬಂಧ, ವಚನಗಳು, ಮಕ್ಕಳ ಸಾಹಿತ್ಯ, ಸಂಪಾದನೆ, ಸಂಶೋಧನೆ - ಈ ಎಲ್ಲ ಕ್ಷೇತ್ರಗಳನ್ನು ಸಮೃದ್ಧಗೊಳಿಸುವುದರ ಜೊತೆಗೆ ಎಂ.ಎಸ್.ಕೆ.. ಅವರು ಹಿಂದಿಯಿಂದ ಹಾಗೂ ಇಂಗ್ಲಿಷ್‌ನಿಂದ ಕನ್ನಡಕ್ಕೆ ವಿಪುಲವಾಗಿ ಅನುವಾದಿಸಿದ್ದಾರೆ; ಕನ್ನಡದಿಂದ ಹಿಂದಿಗೂ ಪರಿವರ್ತಿಸಿದ್ದಾರೆ. ಸೃಜನಶೀಲ ಮತ್ತು ವೈಚಾರಿಕ ಲೇಖನಗಳಲ್ಲಿ ಕ್ರಿಯಾಶೀಲರಾಗಿ ಇವರು ಕನ್ನಡದಿಂದ ಹಿಂದಿಗೂ, ಹಿಂದಿಯಿಂದ ಕನ್ನಡಕ್ಕೂ ಯಶಸ್ವಿಯಾದ ಅನುವಾದ ಕಾರ್ಯವನ್ನೂ ಮಾಡಿದ್ದಲ್ಲದೇ, ಹಿಂದಿಯಲ್ಲಿ ಸ್ವತಂತ್ರ ಕೃತಿಗಳನ್ನೂ ಪ್ರಕಟಿಸಿದ್ದಾರೆ. ತಮ್ಮ ಅನುವಾದಗಳ ಮೂಲಕ ಕನ್ನಡ ಮತ್ತು ಹಿಂದಿ ಭಾಷಾ-ಸಂಸ್ಕೃತಿಗಳ ನಡುವೆ ಸೌಹಾರ್ದ ಸೇತುವಾಗಿ ಹಲವು ದಶಕಗಳ ಕಾಲ ಅವರು ಅವಿರತವಾಗಿ ದುಡಿದವರು. ಎಂ.ಎಸ್.ಕೆ.. ತರಹದ ವಿದ್ವಾಂಸರು ಇಲ್ಲದೇ ಹೋದರೆ ನಮ್ಮ ಸಾಹಿತ್ಯಗಳಲ್ಲಿ ಬಹುಭಾಷಾ ಕೊಳುಕೊಡುವಿಕೆಯ ಕೊರತೆಯಿಂದಾಗಿ ಅವು ಸೊರಗಬೇಕಾದಂಥ ಪರಿಸ್ಥಿತಿ ಉದ್ಭವವಾಗುತ್ತಿತ್ತು ಎಂದಿದ್ದಾರೆ ವಿಮರ್ಶಕರು. ಒಂದು ಸಾಹಿತ್ಯ ಎಷ್ಟೇ ದೊಡ್ಡದಿರಲಿ, ಪ್ರಾಚೀನವಾಗಿರಲಿ ಇತರ ಸಾಹಿತ್ಯಗಳೊಡನೆ ಸಂಪರ್ಕ ಹೊಂದದಿದ್ದರೆ ಅದು ಪಲ್ಲವಿಸಲಾರದು ಮತ್ತು ಅದರ ಎತ್ತರ ಬಿತ್ತರಗಳೂ ತಿಳಿಯಲಾರವು. ಈ ದೃಷ್ಟಿಯಿಂದ ಗಮನಿಸಿದರೆ ಎಂ.ಎಸ್.ಕೆ.. ಅವರ ಕೊಡುಗೆ ಅಪಾರವಾಗಿದೆ.


ಮ.ಸು.ಕೃಷ್ಣಮೂರ್ತಿ ಅವರು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಗ್ರಾಮದವರು. 1931ರ ಜೂನ್ 16 ರಂದು ಜನಿಸಿದರು. ತಂದೆ ಎಂ.ಸುಬ್ಬರಾವ್, ತಾಯಿ ನಂಜಮ್ಮ. ಬನಾರಸ ವಿ.ವಿ.ಯಿಂದ ಹಿಂದಿ ಎಂ.ಎ. ಹಾಗೂ ಮೈಸೂರು ವಿ.ವಿ.ಯಿಂದ ಪಿಎಚ್.ಡಿ. ಪದವಿಯನ್ನು ಪಡೆದವರು. 1967ರಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕರಾಗಿ ತಮ್ಮ ಶೈಕ್ಷಣಿಕ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಮೈಸೂರು ವಿ.ವಿ. ಹಿಂದಿ ವಿಭಾಗದ ಪ್ರಾಧ್ಯಾಪಕರಾಗಿ ಹಾಗೂ ಮುಖ್ಯಸ್ಥರಾಗಿ ಸೇವೆಸಲ್ಲಿಸಿದವರು. ಕನ್ನಡ, ಸಂಸ್ಕೃತ ಹಾಗೂ ಹಿಂದಿ ಭಾಷೆಗಳಲ್ಲಿ ಬೋಧನೆ ಮಾಡಿದ ಕೀರ್ತಿ ಇವರದು. 1988ರಿಂದ 1991ರವರೆಗೆ ಭಾರತ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಲ್ಲಿ ಹಿಂದಿ ಸಲಹಾ ಮಂಡಳಿಯ ಸದಸ್ಯರಾಗಿ ಶ್ರೀಯುತರು ಸಲ್ಲಿಸಿದ ಸೇವೆಯು ಗಣನೀಯವಾದುದು.


ಶ್ರೀಯುತರು ಫಲ್ಗುಣಿ, ರಥಚಕ್ರ, ಕಸ್ತೂರಿ ಮೃಗ, ನಾದ ಸೇತು, ಹಡಗಿನ ಹಕ್ಕಿ, ಕುರಿ ಸಾಕಿದ ತೋಳ, ಪರಶುರಾಮನ ತಂಗಿಯರು, ಚತುರ್ಮುಖ, ರಥಚಕ್ರ, ಒಂಟಿಸಲಗ ಸೇರಿದಂತೆ 60ಕ್ಕೂ ಅಧಿಕ ಕಾದಂಬರಿಗಳನ್ನು ಮತ್ತು ಯುಗಾಂತ, ರತ್ನಕಂಕಣ, ರಂಗಸಪ್ತಕ, ನಾಟ್ಯಪಂಚಕ ಹೀಗೆ ಒಟ್ಟು 27 ನಾಟಕಗಳನ್ನು ರಚಿಸಿದ್ದಾರೆ. ವ್ಯೋಮಕೇಶನ ವಚನಗಳು (ಆಧುನಿಕ ವಚನಗಳು), ಸಮುದ್ರ ಸಂಗಮ (ಕಾಲ್ಪನಿಕ ಸಂದರ್ಶನ), ಬಿತ್ತಭಿತ್ತಿಯ ಚಿತ್ರಗಳು, ಗೋಪುರದ ದೀಪ, ಚಿತ್ರಕೂಟ (ರೇಖಾಚಿತ್ರ ಸಂಗ್ರಹ), ಗಂಧಮಾಧವ, ಏಕಾಂತ ಸಂಗೀತ, ಹಾದಿಪುರಾಣ, ಚಂಕ್ರಮಣ (ಪ್ರಬಂಧ), ಸಿದ್ಧಸಾಹಿತ್ಯ, ಪರಿಶೋಧನ, ಮುಕ್ತಚಿಂತನ, ಹಿಂದಿ ಸಾಹಿತ್ಯ, ಉತ್ತರದ ಸಂತ ಪರಂಪರೆ, ಸೂಫಿ ಪ್ರೇಮಕಾವ್ಯ, ಮುಸಲ್ಮಾನ ಭಾಗವತರು, ಬಸವರಾಜಮಾರ್ಗ (ಸಂಶೋಧನೆಗಳು), ಕೋಗಿಲೆಯ ಚಿಕ್ಕವ್ವ, ಚಂದಮಾಮನ ಅಳಿಯ, ಚೈತ್ರಪಲ್ಲವಿ, ಮೀರಾಬಾಯಿ, ಮೆಣಸಿನಕಾಯಿ ಸಾಹಸ, ಸಂತ ರೈದಾಸ, ಮಹರ್ಷಿ ಕರ್ವೆ, ಕಿತ್ತೂರ ರಾಣಿ ಚೆನ್ನಮ್ಮ, ಕಾಲುಗಳ ಜಗಳ, ಗೋರಾ ಬಾದಲ್, ಚೈತ್ರ ಪಲ್ಲವ, ವೈಶಾಖ ಪ್ರಭ, ಆಷಾಢ ಸೋನೆ, ಮಕ್ಕಳ ಅಕ್ಕ-ಇವು ಮಕ್ಕಳ ಸಾಹಿತ್ಯ. ಬಾಣಭಟ್ಟನ ಆತ್ಮಕಥೆ, ಅನಾಮದಾಸನ ಕಡತ, ಮೇಘದೂತ, ಒಂದು ಕಳೆಯ ಕಥೆ, ಮೃಗನಯನಿ, ಜೈಸೋಮನಾಥ, ಕಬೀರ ಪದಾವಲೀ, ಮೀರಾ ಪದಾವಲೀ, ರಾಮಚರಿತ ಮಾನಸ, ವಿನಯ ಪತ್ರಿಕಾ, ಮೇಘದೂತ, ಕೋಮಲ ಗಾಂಧಾರ, ಬಿಹಾರೀ ಸಪ್ತಶತೀ, ಸೂರ್ಯನ ಏಳನೇ ಕುದುರೆ, ಚಿದಂಬರಾ ಸಂಚಯನ (ಹಿಂದಿಯಿಂದ ಕನ್ನಡಕ್ಕೆ ಅನುವಾದಿತ) ರಾಗಕಾನಡಾ, ಅಪರಾಜಿತ, ಜ್ಯೋತಿ, ಕಲಶ್ (ಹಿಂದಿ ಕಾದಂಬರಿಗಳು), ಅರಣ್ಯಕ, ಬೆಟ್ಟಕ್ಕೆ ಚಳಿಯಾದಡೆ, ಪುನರಾಗಮನ (ಕಥಾ ಸಂಕಲನ), ಸಂಪಾದನೆ: ನಳ ಚಂಪೂ ಸಂಗ್ರಹ ಮೊದಲಾದವು ಎಂ.ಎಸ್.ಕೆ.. ಅವರ ಕೃತಿಗಳಾಗಿವೆ.


ಮ.ಸು.ಕೃಷ್ಣಮೂರ್ತಿ ಅವರ ಸಾಹಿತ್ಯ ಕೃಷಿಯನ್ನು ಗುರುತಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ನೀಡಲಾಗಿದೆ. ತಾಮ್ರಪತ್ರ-ಹಿಂದಿಯಲ್ಲಿನ ಸಾಹಿತ್ಯದ ಕೆಲಸಕ್ಕಾಗಿ ಭಾರತ ಸರ್ಕಾರದಿಂದ ಪ್ರಶಸ್ತಿ, ಕನ್ನಡದಲ್ಲಿ ಅವರ ಸಾಹಿತ್ಯಿಕ ಕೆಲಸಕ್ಕಾಗಿ ದಕ್ಷಿಣ ಕೇಸರಿ ಸಾಹಿತ್ಯ ಪ್ರಶಸ್ತಿ–2010, ಬಸವರಾಜು ಪ್ರಶಸ್ತಿ-2008ರ ಕನ್ನಡ ಸಾಹಿತ್ಯ ಸೇವೆಗಾಗಿ, ಕುವೆಂಪು ಪ್ರಶಸ್ತಿ, ಕರ್ನಾಟಕ ಸಂಘ, ಶಿವಮೊಗ್ಗ–2010, ಕೇಂದ್ರೀಯ ಹಿಂದಿ ನಿರ್ದೇಶನಾಲಯದಿಂದ ಸತತ 3 ವರ್ಷಗಳ ಗೌರವ, ಬಾಬು ಗಂಗಾಶರಣ ಪ್ರಶಸ್ತಿ, ಕೇಂದ್ರೀಯ ಹಿಂದಿ ಸಂಸ್ಥಾನ, ಆಗ್ರಾ–1996, ಆನಂದ ಋಷಿ ಪ್ರಶಸ್ತಿ, ಹೈದರಾಬಾದ್–1992, ಹಿಂದಿ ಪ್ರತಿಷ್ಠಾನ್ ಪ್ರಶಸ್ತಿ, ಹೈದರಾಬಾದ್–1990, ಮಹಾತ್ಮ ಗಾಂಧಿ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು–1990, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಶಸ್ತಿ–2000, ಕರ್ನಾಟಕ ರಾಜ್ಯ ಸರ್ಕಾರ ಪ್ರಶಸ್ತಿ, ಉತ್ತರಪ್ರದೇಶ ಸರ್ಕಾರದಿಂದ ಸೌಹಾರ್ದ ಸನ್ಮಾನ–1999, ರಾಷ್ಟ್ರ ಧರ್ಮ ಸೇವಾ ಸನ್ಮಾನ, ಲಕ್ನೋ–2008, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸತತ ಎರಡು ವರ್ಷ, ನೃಪತುಂಗ ಪ್ರಶಸ್ತಿ–2001, ಸ್ವರ್ಣ ಜಯಂತಿ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾನಿಲಯ–1998, ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಶಸ್ತಿ, ಧಾರವಾಡ–1998, ಟಿಎನ್‌ಶ್ರೀ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾನಿಲಯ–1980, ಅವರ ಹಿಂದಿ ಕಾದಂಬರಿ ‘ಅಪರಾಜಿತಾ’ ಕೇಂದ್ರ ಹಿಂದಿ ನಿರ್ದೇಶನಾಲಯದಲ್ಲಿ ಪ್ರಥಮ ಸ್ಥಾನ ಗಳಿಸಿತು–1973, ಮತ್ತೊಂದು ಹಿಂದಿ ಕಾದಂಬರಿ ‘ರಾಗ ಕಾನಡ’ ಬೆಂಗಳೂರು ವಿಶ್ವವಿದ್ಯಾನಿಲಯದ ಮಹಾತ್ಮಾ ಗಾಂಧಿ ಪ್ರಶಸ್ತಿಗೆ ಭಾಜನವಾಗಿದೆ. ಹಿಂದಿ ಕಾದಂಬರಿ ‘ಪರಶುರಾಮ್ ಕಿ ಬೆಹೆನೆ’ಗೆ ಕೇಂದ್ರ ಹಿಂದಿ ನಿರ್ದೇಶನಾಲಯ ಪ್ರಶಸ್ತಿ – 1983 ಹಾಗೂ ಹಿಂದಿ ಕಾದಂಬರಿ ‘ಜ್ಯೋತಿ ಕಲಶ’ ಕೇಂದ್ರ ಹಿಂದಿ ನಿರ್ದೇಶನಾಲಯ ಪ್ರಶಸ್ತಿ–1988 ದೊರೆತಿದೆ. ಶ್ರೀಯುತರ ಸಾಹಿತ್ಯ ಸೇವೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2011ನೇ ಸಾಲಿನ ಗೌರವ ಪ್ರಶಸಿಯನ್ನು ನೀಡಿ ಪುರಸ್ಕರಿಸಿದೆ.


ಭಾರತೀಯ ಹಿಂದಿ ಮತ್ತಿತರ ಭಾಷೆಯ ತಿಳಿವು ಮತ್ತು ಅನುಸಂಧಾನದ ಮೂಲಕ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿ ಪರಂಪರೆಗೆ ಮತ್ತಷ್ಟು ಮೆರುಗು ನೀಡಿದ ಎಂ.ಎಸ್.ಕೆ.. ಅವರು ಕನ್ನಡ ಸಂಶೋಧನ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಸಿದ್ಧಸಾಹಿತ್ಯ, ಪರಿಶೋಧನ, ಮುಕ್ತಚಿಂತನ, ಹಿಂದಿ ಸಾಹಿತ್ಯ, ಉತ್ತರದ ಸಂತ ಪರಂಪರೆ, ಸೂಫಿ ಪ್ರೇಮಕಾವ್ಯ, ಮುಸಲ್ಮಾನ ಭಾಗವತರು, ಬಸವರಾಜಮಾರ್ಗ ಎಂಬ ಸಂಶೋಧನ ಕೃತಿಗಳು ಇದುವರೆಗಿನ ಕನ್ನಡ ಬಗೆಗಿನ ತಿಳಿವನ್ನು ವೈಶಾಲ್ಯಗೊಳಿಸುವ ಮಹತ್ವಪೂರ್ಣ ರಚನೆಗಳಾಗಿವೆ. ‘ಸೂಫೀ ಪ್ರೇಮಕಾವ್ಯ’ ಕೃತಿಯು ಎಂ.ಎಸ್.ಕೆ. ಅವರ ಸುಮಾರು 25 ವರ್ಷಗಳಿಗೂ ಮೀರಿದ ಸಾರಸ್ವತ ತಪಸ್ಸಿನ ಫಲ. ಭಾರತೀಯ ಸಾಹಿತ್ಯದಲ್ಲಿ ಒಂದು ಹೊಸ ದನಿಯನ್ನು ಮಿಡಿದ ಸೂಫೀಧರ್ಮ ದರ್ಶನದ ಬಗೆಗೆ ಪ್ರಪ್ರಥಮವಾಗಿ ಕನ್ನಡಕ್ಕೆ ಈ ಸಂಶೋಧನಾತ್ಮಕ ಮಹಾಗ್ರಂಥ ಹೊರ ಬಂದಿತು. ಉತ್ತರ ಭಾರತದಲ್ಲಿ ಸಂತ ಪರಂಪರೆಯ ಸ್ವರೂಪ ಹೇಗಿತ್ತು, ಪ್ರಮುಖರಾದ ಸಂತರ ಸಾಮಾಜಿಕ ದೃಷ್ಟಿಕೋನ ಯಾವ ಬಗೆಯದಾಗಿತ್ತು. ಸಾಮಾಜಿಕ ಬದುಕಿನ ಮುನ್ನಡೆಗೆ ಅವರ ವಿಚಾರಧಾರೆಯ ಕೊಡುಗೆ ಏನು? ಇಂದು ಹೊಸ ಬಗೆಯ ಸಮಾಜವನ್ನು ಕಟ್ಟುವ ಆಕಾಂಕ್ಷೆಯನ್ನು ಹೊಂದಿರುವ ಮನಸ್ಸುಗಳು ಈ ಸಂತ ಪರಂಪರೆಯ ಮೂಲದಿಂದ ತಮ್ಮ ವಿಚಾರಧಾರೆಗಳಿಗೆ ಏನು ಪುಷ್ಟಿಗಳನ್ನು ಪಡೆಯಬಹುದು? ಈ ನಿಟ್ಟಿನಲ್ಲಿ ನಡೆಸಿದ, ಉತ್ತರ ಭಾರತದ ಸಂತಪರಂಪರೆಯನ್ನ ಕುರಿತ ಒಂದು ವಿಸ್ತಾರವಾದ ಅಧ್ಯಯನ ಇಲ್ಲಿರುವುದನ್ನು ಗಮನಿಸಬಹುದಾಗಿದೆ. ಸೂಫೀ ಸಂತರನ್ನು ಕುರಿತು ಎಂ.ಎಸ್.ಕೆ. ಅವರು ಬಹಳ ಗಾಢವಾಗಿ ಚಿಂತಿಸಿ ಬರೆದಿದ್ದಾರೆ. ಎಲ್ಲ ಉಪಾಧಿಗಳನ್ನು ಮೀರಿ ವಿಕಸಿಸಬೇಕೆಂದು ಸೂಫಿಗಳು ನೀಡಿದ ಸಂದೇಶದ ಮಹತ್ವವನ್ನು ಅರಿತವರಾಗಿದ್ದಾರೆ. ಪ್ರಾಯಶಃ ಈ ಹೃದಯ ವೈಶಾಲ್ಯದ, ದೃಷ್ಟಿ ವೈಶಾಲ್ಯದ ಸಂಕೇತವಾಗಿಯೇ ಕಟ್ಟುಕಟ್ಟಳೆಗಳನ್ನು ಮೀರಿ ಮಾನವಹಿತವೊಂದನ್ನೇ ಲಕ್ಷದಲ್ಲಿರಿಸಿಕೊಂಡು ಬಾಳಬೇಕೆಂಬ ಆಶಯವನ್ನು ಎಂ.ಎಸ್.ಕೆ. ಅವರ ಹಲವಾರು ಪ್ರಚುರಪಡಿಸುತ್ತವೆ.


ವಿಮರ್ಶಕರಾದ ಸಿ.ನಾಗಣ್ಣ ಅವರು ಹೇಳುವಂತೆ, “ಸಂತ ಸಾಹಿತ್ಯವನ್ನು, ಉಪನಿಷತ್ತುಗಳನ್ನು ಕುರಿತು ಆಳವಾಗಿ ಅಧ್ಯಯನ ಮಾಡಿರುವ ಎಂ.ಎಸ್.ಕೆ. ಅವರು ಈ ರೀತಿ ಒಬ್ಬ ವಿಶ್ವಾತ್ಮಕವಾದಿಯಾಗಿ ಎಲ್ಲ ಕಾಲದ ದೇಶದ ವ್ಯಕ್ತಿಗಳನ್ನು ಏಕತ್ರಗೊಳಿಸಿ ಮೆಚ್ಚುವುದು ಆಶ್ಚರ್ಯವಲ್ಲದಿದ್ದರೂ ಸೂಕ್ಷ್ಮ ಪರಿಶೀಲನೆಯ ಆಧುನಿಕ ಮಾದರಿಯಲ್ಲಿ ಅಖಂಡ ಪರಿಪ್ರೇಕ್ಷಕ್ಕಿಂತ ಸಮುದಾಯಗಳ ಸಮೀಪ ದರ್ಶನ ಮತ್ತು ಅವಲೋಕನದ ವಿಧಾನ ಹೆಚ್ಚು ಲಾಭದಾಯಕವೆಂಬ ತಿಳುವಿಕೆಯಿದೆ.” ಎಂ.ಎಸ್.ಕೆ. ಅವರು ಅಖಂಡ ಭಾರತದ ಸಿದ್ಧ ಪರಂಪರೆಯನ್ನು ಈ ಬಗೆಯಲ್ಲಿ ಸಂಶೋಧನೆಗೆ ಒಳಗು ಮಾಡಿ “ಸಿದ್ಧಸಾಹಿತ್ಯ” ಎಂಬ ಅಮೂಲ್ಯಗ್ರಂಥವನ್ನು ಲೋಕಾರ್ಪಣೆ ಮಾಡಿದ್ದಾರೆ. ಭಾರತದ ದಾರ್ಶನಿಕ ಪರಂಪರೆಯಲ್ಲಿ ತಮ್ಮದೇ ಆದ ಅಸ್ಮಿತೆ ಹಾಗೂ ಅಸ್ತಿತ್ವದ ಮೂಲಕ ನವಧಾರೆಯಾಗಿ ಮೂಡಿಬಂದ ಸಿದ್ಧಪರಂಪರೆಯು ಬೌದ್ಧ-ಜೈನ-ಶೈವಾದಿಗಳ ಆಂತರ್ಯವನ್ನು ನಿಕಷಕ್ಕೆ ಒಡ್ಡಿದ ಬಗೆ, ಶಿಷ್ಪ ಸಂಸ್ಕೃತಿ-ಪರಿಶಿಷ್ಟ ಸಂಸ್ಕೃತಿಗಳಲ್ಲಿ ಏಕವಾಗಿರುವ ಸಿದ್ಧಸಾಹಿತ್ಯ, ಭಾರತದ ಶ್ರಮಣಧಾರೆಯ ತಲಕಾವೇರಿಯಂತೆ ಹರಿದು ವೈವಿಧ್ಯಮಯವಾಗಿ ಹರಿದ ಸಿದ್ಧಧಾರೆಯನ್ನು ಅಮೂಲಾಗ್ರವಾಗಿ ಶೋಧಿಸಿ ಮಂಡಿಸಿರುವ ಮಹತ್ವದ ಗ್ರಂಥವಿದು.


“ಮುಕ್ತ ಚಿಂತನ” ಎಂಬುದು ಭಾರತದ ಬಹುಸಂಸ್ಕೃತಿಗಳ ಸಮಾಗಮ ಹಾಗೂ ಸಂಘರ್ಷ ಸಂಗತಿಗಳನ್ನು ಕುರಿತು ಸಾಂಸ್ಕೃತಿಕ ಸಂಶೋಧನೆಯ ವೈಧಾನಿಕತೆಯಲ್ಲಿ ರಚಿಸಿರುವ ಶೋಧನಗ್ರಂಥವಾಗಿದೆ. ಎಂ.ಎಸ್.ಕೆ. ಅವರಾದಿಯಾಗಿ ವಿಶ್ವದಾದ್ಯಂತ ಸಂಸ್ಕೃತಿಶೋಧಕರಿಗೆ ಅರಿವಾದಂತೆ, ಸಂಸ್ಕೃತಿ ಎನ್ನವುದು ಒಂದು ಮಧುವಿದ್ಯೆ, ಮಧುಕರೀವೃತ್ತಿ. ಅದು ಇರುವೆ ಗೂಡಲ್ಲ, ಇಟ್ಟಿಗೆಗೂಡಲ್ಲ, ಜೇನುಗೂಡು, ಇರುವೆ ಗೂಡಿನಲ್ಲಿ ಅಕ್ಕಿಯ ನುಚ್ಚು, ಸಕ್ಕರೆಯ ಕಣ, ಬೇಳೆಯ ತುಣುಕು, ಹೀಗೆ ಹಲವಾರು ವಸ್ತುಗಳ ಕಲಬೆರಕೆಯ, ಮಿಶ್ರಣವನ್ನು ಕಾಣಬಹುದು. ಇಟ್ಟಿಗೆಗೂಡಿಗೆ ಅಗ್ನಿಸಂಸ್ಕಾರವಾದರೂ ಇಟ್ಟಿಗೆಗಳು ತಮ್ಮ ವ್ಯಕ್ತಿತ್ವವನ್ನು ವಿಲೀನಗೊಳಿಸುವುದಿಲ್ಲ, ತಮ್ಮ ದ್ವೈತ ಭಾವವನ್ನು ಬಿಟ್ಟುಕೊಡುವುದಿಲ್ಲ, ಬದಲಾಗಿ ಇನ್ನೂ ದೃಢವಾಗುತ್ತದೆ. ಆದರೆ ಸಂಸ್ಕೃತಿ ಒಂದು ಮಿಶ್ರಣವಲ್ಲ, ರಾಸಾಯನಿಕ ಸಂಯುಕ್ತ. ದುಂಬಿಗಳು ಹಲವಾರು ಹೂಗಳಿಂದ ರಸವನ್ನು ಹೀರಿ ತಮ್ಮದೇ ಆದ ಮಧುವನ್ನು ನಿರ್ಮಿಸುತ್ತವೆ. ಈ ಮಧುವನ್ನು ವಿಶ್ಲೇಷಿಸಿ ಇದು ಗುಲಾಬಿಯ ರಸ, ಇದು ಮಲ್ಲಿಗೆಯದು, ಇದು ಇರುವಂತಿಗೆಯದು, ಇದು ತುಂಬೆಯದು ಎಂದು ಹೇಳಲು ಸಾಧ್ಯವೆ? ಈ ರೀತಿ ಹಲವು ಕುಸುಮರಸಗಳು ಸೇರಿ ತಮ್ಮ ಸ್ವಂತ ಅಸ್ತಿತ್ವವನ್ನು ಕಳೆದುಕೊಂಡು ಮಧುವಾಗಿ ಪರಿಣಮಿಸುತ್ತವೆ. ಎಂ.ಎಸ್.ಕೆ. ಅವರಿಗೆ ಭಾರತೀಯ ಸಂಸ್ಕೃತಿಯನ್ನು ನೆನೆದಾಗಲೆಲ್ಲ ಈ ಮಧುವಿದ್ಯೆ ನೆನಪಾದ್ದರಿಂದ ಹಾಗೂ ಜೇನುಗೂಡು ಅವರ ಚಿತ್ತಭಿತ್ತಿಯ ಮೇಲೆ ಮತ್ತೆ ಮತ್ತೆ ಸುಳಿದಾಡಿದ್ದರಿಂದ ಅವರು ಇಲ್ಲಿ ಮುಕ್ತವಾಗಿ ಭಾರತೀಯ ಸಂಸ್ಕೃತಿಯ “ವೈವಿಧ್ಯತೆಯೊಳಗಣ ಏಕತೆ”ಯನ್ನು ಕುರಿತು ಸಂಶೋಧನೆ ನಡೆಸಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಕುರಿತು ಯಾವುದೇ ವಿಕಾರಗಳಿಲ್ಲದೆ ಅರಿಯಬೇಕಾದ ಅಮೂಲ್ಯವಾದ ವಿಚಾರಗಳು ಇಲ್ಲಿವೆ.


‘ಪರಿಶೋಧನ’ ಎಂಬುದು ಎಂ.ಎಸ್.ಕೆ. ಅವರು ಕಾಲುಶತಮಾನ ಕಾಲದಲ್ಲಿ ಬರೆದು, ಪ್ರಕಟಿಸಿದ ಸಂಶೋಧನ ಲೇಖನಗಳ ಕೃತಿಯಾಗಿದೆ. ಕನ್ನಡ ಸಾಹಿತ್ಯ ಸಂಸ್ಕೃತಿಗಳ ಮೂಲಾನ್ವೇಷಣೆಗೆ ತೊಡಗಿದಾಗ ನಾವು ಪರಭಾಷೆಗಳ ಪರಪ್ರಾಂತ್ಯಗಳಷ್ಟೇ ಅಲ್ಲ ಪರಕಾಯ ಪ್ರವೇಶವನ್ನೂ ಮಾಡಬೇಕಾಗುತ್ತದೆ. ಕನ್ನಡ ಸಂಸ್ಕೃತಿಯ ಬೇರುಗಳನ್ನು ಸಂಸ್ಕೃತ, ಪ್ರಾಕೃತ, ತಮಿಳು, ತೆಲುಗು, ಮರಾಠಿ ಮೂಲದಲ್ಲಿ ಹುಡುಕಿದ್ದುಂಟು. ಆದರೆ ಮಧ್ಯಕಾಲೀನ ಆರ್ಯಭಾಷೆಯ ಅಂತಿಮ ಹಂತವಾದ ಅಪಭ್ರಂಶ ಮತ್ತು ಇತ್ತೀಚಿನ ಹಿಂದಿ ಮೊದಲಾದ ಮೂಲಗಳು ನಮ್ಮ ವಿದ್ವಾಂಸರ ಕಣ್ಣು ಅಷ್ಟಾಗಿ ಹರಿದಿಲ್ಲ. ಅಂಥ ಪ್ರಯತ್ನವೊಂದನ್ನು ವಿದ್ವಾಂಸರಾದ ಎಂ.ಎಸ್.ಕೆ. ಅವರು ಇಲ್ಲಿ ಮಾಡಿರುವುದು ಮಹತ್ವಪೂರ್ಣವಾದುದಾಗಿದೆ. ಸಿದ್ಧರು ಮತ್ತು ನಾಥರ ಸಾಹಿತ್ಯದ ಶೋಧನೆಗೆ ಇಳಿದಂತೆ ಅವರಿಗೆ ಅರಿವಾದ ವಸ್ತು-ವಿಚಾರಗಳು ಅಮೂಲ್ಯ. ಹೀಗೆ ಹುಡುಕುತ್ತ ಹೋದಾಗ ಬೌದ್ಧ ಸಿದ್ಧರ ಮೂಲಪುರುಷ ನಾಗಾರ್ಜುನ ಕನ್ನಡಿಗ ಎಂಬ ಅಂಶ ಅರಿವಾದುದೇ ಅಲ್ಲದೆ, ಆತನದೆಂದು ಹೇಳಲಾಗುವ ಎರಡು ಕನ್ನಡ ಪದ್ಯಗಳು ದೊರೆತವು. ಹೀಗೆ, ಇದೇ ರೀತಿ ಭಾಷಿಕ ಕೊಳ್ಕೊಡೆಯ ಬಗೆಗೂ ಚಿಂತನ, ಮಂಥನ ನಡೆದಾಗ ನಮ್ಮಲ್ಲಿ ಹಿಂದೆ ಇದ್ದು ಈಗ ಕಣ್ಮರೆಯಾಗಿರುವ ಹಲವು ಶಬ್ದಗಳು ವೇಷಾಂತರದಿಂದ ಬೇರೆ ಭಾಷೆಗಳಲ್ಲಿ ಸೇರಿಕೊಂಡಿರುವ ಅಂಶ ಕಂಡುಬಂದಿತು. ಅಂಥವುಗಳನ್ನು ಪತ್ತೆಹಚ್ಚಿ ಮತ್ತೆ ಅವುಗಳನ್ನು ಪಡೆದುಕೊಳ್ಳುವ ಪ್ರಯತ್ನ ನಡೆಯಬೇಕೆಂದು ಹೊರಟ ಎಂ.ಎಸ್.ಕೆ. ಅವರು, ‘ಹಿಂದಿಯಲ್ಲಿ ಕನ್ನಡ ಶಬ್ದಗಳು’, ‘ಕಬೀರನಲ್ಲಿ ಕನ್ನಡ ಶಬ್ದಗಳು’, ‘ಅಪಭ್ರಂಶ ಸಾಹಿತ್ಯಕ್ಕೆ ಕನ್ನಡದ ಕೊಡುಗೆ’, ‘ಹಿಂದಿಯ ಪ್ರೇಮಾಖ್ಯಾನವೊಂದರಲ್ಲಿ ಹೊಯ್ಸಳ ರಾಜಕುಮಾರ’ ಮೊದಲಾದ ಲೇಖನಗಳ ಮೂಲಕ ಕನ್ನಡಿಗರಲ್ಲಿ ಕುತೂಹಲವನ್ನು ಕೆರಳಿಸಬಲ್ಲಂಥ ಸಂಗತಿಗಳನ್ನು ಇಲ್ಲಿ ಶೋಧಿಸಿಕೊಟ್ಟಿದ್ದಾರೆ.

ಮ.ಸು.ಕೃಷ್ಣಮೂರ್ತಿ ಅವರ ಸಂಶೋಧನಾ ವೈಶಾಲ್ಯತೆ, ಬಹುಅಭಿಜ್ಞತೆ ಹಾಗೂ ಕನ್ನಡಪ್ರಾಜ್ಞತೆಗೆ “ಔತ್ತರೇಯ ಸಂತರ ಮೇಲೆ ವೀರಶೈವ ಪ್ರಭಾವ” ಎಂಬ ಲೇಖನವೂ ಸಾಕ್ಷಿಯಾಗಿದೆ. ಈ ಲೇಖನವು ಅವರ ‘ಬಸವರಾಜಮಾರ್ಗ’ ಎಂಬ ಸಂಶೋಧನ ಗ್ರಂಥದಲ್ಲಿದೆ. ಕನ್ನಡನಾಡಿನ 12ನೇ ಶತಮಾನದ ಶರಣಮಹಾನದಿಯು ಬಹುಮುಖವಾಗಿ ಪ್ರವಹಿಸಿದ ಹಾಗೂ ಪ್ರಭಾವಿಸಿದ ಬಹುಸಾಂಸ್ಕೃತಿಕ ಸಂಬಂಧಗಳ ಅನುಸಂಧಾನವನ್ನು ಇಲ್ಲಿ ಆಧಾರಸಮೇತ ಪ್ರಸ್ತುತಪಡಿಸಲಾಗಿದೆ. ಈಗಾಗಲೇ, ಕನ್ನಡ ಮರಾಠಿಗಳು ಭಿನ್ನ ಭಾಷೆಗಳಾಗಿದ್ದರೂ ಮರಾಠಿಯ ಮೇಲೆ ಕನ್ನಡದ ಪ್ರಭಾವ ಎಷ್ಟು ವಿಫುಲವಾಗಿದೆ ಎಂಬುದನ್ನು ವಿದ್ವಾಂಸರು ಸಪ್ರಮಾಣವಾಗಿ ತೋರಿಸಿಕೊಟ್ಟಿದ್ದಾರೆ. ಇಂದಿನ ಮಹಾರಾಷ್ಟ್ರದ ಬಹುಭಾಗ ಕರ್ನಾಟಕದ ಗಂಡುಮೆಟ್ಟಾಗಿತ್ತು ಎಂಬುದು ಸಂಶೋಧನೆಯಿಂದ ವ್ಯಕ್ತವಾಗಿದೆ. ಮಹಾರಾಷ್ಟ್ರ ಸಂತರ ಅಧಿದೈವನಾದ ವಿಟ್ಠಲ ಕನ್ನಡದೇವತೆ, ‘ಪಂಢರಪುರ ಕನ್ನಡಿಗರ ಪಂಢರಿಗೆ’ ಎಂಬುದಕ್ಕೆ ಮಹಾರಾಷ್ಟ್ರ ಸಂತರ ವಾಣಿಯೇ ಸಾಕ್ಷಿ ನುಡಿಯುತ್ತದೆ. ಈ ಸಂಬಂಧವಾಗಿ ಕನ್ನಡದ ಮೇರು ಸಂಶೋಧಕರಾದ ಶಂ.ಬಾ.ಜೋಷಿ, ಎಂ.ಚಿದಾನಂದಮೂರ್ತಿ ಮೊದಲಾದವರು ನಡೆಸಿದ್ದ ಶೋಧನಸಂಗತಿಗಳಿಗೆ ಮತ್ತಷ್ಟು ಬಲಬರುವಂತೆ ಎಂ.ಎಸ್.ಕೆ. ಅವರು ತಮ್ಮ ವಿಚಾರಗಳನ್ನು ನಿರೂಪಿಸಿರುವುದು ವಿಶೇಷ. ಔತ್ತರೇಯ ಸಂತರ ಮೇಲೆ ಕನ್ನಡ ಶಿವಶರಣರ ಪ್ರಭಾವ ಕುರಿತು ಬುದ್ಧಯ್ಯ ಪುರಾಣಿಕರು, ಶ್ರೀ ಜಿ.ವಿ.ಸರ್ದಾರ್, ಪ್ರಭಾಕರ ಮಾಚ್ವೆ, ಫಾರ್ಕುಹರ್ ಅವರ ಚಿಂತನೆಗಳನ್ನು ಪರಾಮರ್ಶಿಸುತ್ತಾ, ಎಂ.ಎಸ್.ಕೆ. ಅವರು ಮಹಾರಾಷ್ಟ್ರದ ತುಕಾರಾಂ, ಏಕನಾಥ, ನಿವೃತ್ತಿನಾಥ, ಜ್ಞಾನದೇವ, ನಾಮದೇವ, ಕಬೀರ ಮೊದಲಾದ ಸಂತರ ಮೇಲೆ ಬಸವಾದಿ ಶರಣರ ಚಳವಳಿ-ಸಾಹಿತ್ಯ ಬೀರಿರುವ ಪ್ರಭಾವವನ್ನು ಭಾಷಿಕ-ಸಾಹಿತ್ಯಕ-ಅಧ್ಯಾತ್ಮಿಕ-ಚಾರಿತ್ರಿಕ ತುಲನೆಯಲ್ಲಿ ಅಮೂಲ್ಯವಾದ ವಿಚಾರಗಳನ್ನು ಮಂಡಿಸಿದ್ದಾರೆ.


ಎಂ.ಎಸ್.ಕೆ. ಅವರ ಅಭಿಮತದಂತೆ, ಒಂದು ಭಾಷೆಯಲ್ಲಿ ನಡೆದ ವಿಚಾರಕ್ರಾಂತಿ ಅನ್ಯಭಾಷಾ ಪ್ರದೇಶವನ್ನು ಮುಟ್ಟುತ್ತಿತ್ತು. ಇಂಥ ಪರಿಸ್ಥಿತಿಯಲ್ಲಿ ವಿವಿಧ ಪ್ರಾಂತಗಳ, ಭಾಷೆಗಳ ಸಂತರೂ ಮಹಂತರೂ ಅನ್ಯಪ್ರಾಂತ್ಯಗಳ ಸಂತರ ಸಂಪರ್ಕ ಪಡೆಯುತ್ತಿರಲಿಲ್ಲ ಎಂದು ಹೇಳಲು ಹೇಗೆ ಸಾಧ್ಯ? ಒಂದು ಭಾಷಾ ಸಮುದಾಯದ ಮೇಲೆ ಮತ್ತೊಂದು ಭಾಷಾ ಸಮುದಾಯದ ಪ್ರಭಾವ ಉಂಟಾಯಿತು ಎಂದ ಮಾತ್ರಕ್ಕೆ ಕೊಟ್ಟವನು ಹಿರಿಯ, ಕೊಂಡವನು ಕಿರಿಯ ಎಂಬ ತಾರತಮ್ಯವೇನೂ ಇಲ್ಲ. ಸಂಗಮೋತ್ಸವಕತೆ ಜೀವಂತ ನದಿಯ ಲಕ್ಷಣ. ರವೀಂದ್ರನಾಥ ಠಾಕೂರರು ಹೇಳುವಂತೆ ಭಾರತ ಮಾನವತೆಯ ಒಂದು ಮಹಾಸಾಗರ. ಅದರಲ್ಲಿ ಅದೆಷ್ಟು ಕಿರಿದೊರೆಗಳು, ಮಹಾನದಿಗಳು ಸಂಗಮಗೊಂಡಿವೆಯೋ ಯಾರು ಬಲ್ಲರು? ಈ ಸಂಸ್ಕೃತಿ ಸಂಗಮಕ್ಕೆ ಕನ್ನಡ ನಾಡಿನ ಕೊಡುಗೆ ಗಣನೀಯವಾದುದು. ಭಾರತ ದೇಶದಲ್ಲಿ ಕಾಲಾನುಕಾಲದಿಂದಲೂ ಸಂತರ ಸಂಗಮ, ಸಮಾಗಮ ನಡೆಯುತ್ತಿತ್ತು, ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಈ ಮಹಾತ್ಮರ ಸತ್ಸಂಗದಿಂದ ಜನಸಾಮಾನ್ಯರಿಗೆ ಆಗುವ ಉಪಕಾರ ಅಷ್ಟಿಷ್ಟಲ್ಲ. ಸತ್ಸಂಗದ ಉತ್ಸಂಗದಲ್ಲಿ ಸಾಹಿತ್ಯವೂ ಪಾರಸ್ಪರಿಕ ಕೊಳ್ಕೊಡೆಯಿಂದ ಬೆಳೆದಿರಬೇಕು, ಸಮೃದ್ಧವಾಗಿರಬೇಕು. ಈ ಸತ್ಸಂಗಕ್ಕೆ, ವಿಚಾರವಿನಿಮಯಕ್ಕೆ ಭಾಷೆಯಾಗಲಿ, ದೇಶವಾಗಲಿ, ಪರ್ವತಾರಣ್ಯಗಳಾಗಲಿ ಅಡ್ಡಿಯಾಗಿರಲಿಲ್ಲ ಎಂಬ ಅಂಶ ಭರತಖಂಡದ ಎಲ್ಲ ಭಾಷೆಗಳ ಸಂತ ಸಾಹಿತ್ಯದ ತುಲನಾತ್ಮಕ ವ್ಯಾಸಂಗದಿಂದ ಸ್ಪಷ್ಟವಾಗುತ್ತವೆ ಎಂದು ಎಂ.ಎಸ್.ಕೆ. ಅವರು ನಡೆಸಿರುವ ಸಂಶೋಧನೆಯು ಭಾರತದ ಬಹುಸಾಂಸ್ಕೃತಿಕ ಸಂರಚನೆಗಳೊಂದಿಗೆ ಕನ್ನಡಕ್ಕಿರುವ ಸಾಹಚರ್ಯವನ್ನು ತೌಲನಿಕ ಸಂಶೋಧನೆಯ ಮೂಲಕ ಕಂಡುಕೊಳ್ಳುವುದಕ್ಕೆ ಮಹತ್ತರ ಮಾದರಿಯಾಗಿದೆ.

Downloads

Published

09.07.2024

How to Cite

ಮ.ಸು. ಕೃಷ್ಣಮೂರ್ತಿ, & ಎಂ. ಭೈರಪ್ಪ. (2024). ಔತ್ತರೇಯ ಸಂತರ ಮೇಲೆ ವೀರಶೈವ ಪ್ರಭಾವ. AKSHARASURYA, 4(03), 01 to 36. Retrieved from http://aksharasurya.com/index.php/latest/article/view/3

Issue

Section

ಹಿಂದಣ ಹೆಜ್ಜೆ. | TRODDEN PATH