ತೇಜಸ್ವಿ ಕಥನ ಸಾಹಿತ್ಯದಲ್ಲಿ ಪ್ರಕೃತಿ ಮತ್ತು ಮನುಷ್ಯ ಲೋಕ
Keywords:
ತೇಜಸ್ವಿ, ಪ್ರಕೃತಿ, ಮನುಷ್ಯ, ಸಂಬಂಧ, ಬದುಕು, ಕಥೆ, ಕಾದಂಬರಿAbstract
ಪ್ರಕೃತಿ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ನೆನಪಾಗುವುದು ಕಾಡು, ಬೆಟ್ಟ, ಗುಡ್ಡ, ನದಿ, ಹಳ್ಳ, ಹಚ್ಚ ಹಸುರಿನ ಬೆಟ್ಟಗಳ ಸಾಲು, ಹರಿಯುವ ನೀರು ಹಾಗೂ ಅಲ್ಲಿನ ಜೀವಸಂಕುಲವೆಂದು ಹೇಳಬಹುದು. ಇಂತಹ ಸುಂದರವಾದ ಪ್ರಕೃತಿಯು ಹಲವಾರು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದೆ. ಕವಿಯ ಪ್ರತಿಭೆ ಹಾಗೂ ಭಾವನೆಗಳು ಅಕ್ಷರಗಳಾಗಿ ಸಾಹಿತ್ಯವನ್ನು ಸೆಳೆಯುವಂತೆ ಮಾಡಿದೆ. ಪ್ರಕೃತಿಯನ್ನು ವಿಭಿನ್ನವಾದ ದೃಷ್ಟಿಕೋನಗಳಿಂದ ನೋಡಲು ಸೂಕ್ಷ್ಮ ಮನಸ್ಸಿನ ಕವಿಯಿಂದ ಮಾತ್ರ ಸಾಧ್ಯವಾಗುತ್ತದೆ. ಮಲೆನಾಡು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವಂತೆ, ಹಲವು ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರ ಜನ್ಮಭೂಮಿಯೂ ಹೌದು. ಸಾಹಿತ್ಯ ಲೋಕಕ್ಕೂ ಸಹ ಮಲೆನಾಡಿನ ಕೊಡುಗೆ ಅಪಾರವಾದುದು. ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ, ರಾಷ್ಟ್ರಕವಿ ಕುವೆಂಪು, ಡಾ. ಯು. ಆರ್. ಅನಂತಮೂರ್ತಿ, ಪಿ. ಲಂಕೇಶ್, ತೇಜಸ್ವಿ ಹೀಗೆ ಸಾಹಿತ್ಯ ಲೋಕಕ್ಕೆ ಶ್ರೇಷ್ಠ ಕವಿಗಳನ್ನು ಕೊಡುಗೆಯಾಗಿ ಕೊಟ್ಟಿರುವ ನಾಡು ಮಲೆನಾಡು. ನವೋದಯ ಕಾಲಘಟ್ಟದ ಹರಿಕಾರರೆಂದು ಹೆಸರುವಾಸಿಯಾಗಿರುವ ಕನ್ನಡ ನಾಡಿನ ಹೆಮ್ಮೆಯ ಕವಿ ಕುವೆಂಪುರವರು ಹೊಸಗನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದವರು. ಇಂತಹ ಪ್ರಖ್ಯಾತ ಕವಿಯ ಜೇಷ್ಠ ಪುತ್ರನಾಗಿ ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರು ಸಾಹಿತ್ಯ ಲೋಕದ ದಿಗ್ಗಜರಲ್ಲಿ ಒಬ್ಬರೆನಿಸಿದ್ದಾರೆ. ಮಲೆನಾಡಿನ ಪ್ರಕೃತಿಯ ಸೊಬಗಿಗೆ ಮನಸೋತು ಕೃಷಿ, ಶಿಕಾರಿ, ಮೀನು ಹಿಡಿಯುವುದು, ಛಾಯಾಗ್ರಹಣ, ಕಥೆಗಾರರಾಗಿ ಮತ್ತು ಕಾಂದಬರಿಕಾರರಾಗಿ ಹೀಗೆ ಹತ್ತು ಹಲವು ಪ್ರವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದರು.