ಲಂಕೇಶ್ ಅವರ ಸಣ್ಣಕತೆ ಮತ್ತು ಲೋಹಿಯಾ ಅವರ ಸಮಾನತೆಯ ಚಿಂತನೆ
Keywords:
ಸಮಾಜವಾದ, ಡಾ. ರಾಮಮನೋಹರ ಲೋಹಿಯಾ, ಸಮಾನತೆ, ನವ್ಯ ಸಾಹಿತ್ಯ, ಲಂಕೇಶ್, ಸಮಾನತೆಯ ಪರಿಕಲ್ಪನೆ, ಸಣ್ಣಕತೆAbstract
ಭಾರತದ ಸನ್ನಿವೇಶಕ್ಕೆ ಅನುಗುಣವಾದ ಸಮಾಜವಾದದ ಪ್ರತಿಪಾದನೆ ಮಾಡಿದ ವಿಶಿಷ್ಟ ಚಿಂತಕರಲ್ಲಿ ಡಾ. ರಾಮಮನೋಹರ ಲೋಹಿಯಾ ಅವರು ಪ್ರಮುಖರು. ಸ್ವಾತಂತ್ರ್ಯಪೂರ್ವದಲ್ಲಿಯೇ ಅಂದಿನ ಮುಂಚೂಣಿ ನಾಯಕರುಗಳ ಜೊತೆಗೆ ಮುಂದೆ ಭಾರತ ಎದುರಿಸಬೇಕಾದ ಸಮಸ್ಯೆಗಳ ಬಗೆಗೆ ಲೋಹಿಯಾ ಚರ್ಚೆ ನಡೆಸುತ್ತಿದ್ದರು. ಭಾರತೀಯ ಸಮಾಜವಾದಿ ಚಳುವಳಿಯ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿದರು. ವಸಾಹತುಶಾಹಿಯ ಪ್ರಭಾವದಿಂದ ಸ್ವತಂತ್ರ ಭಾರತದಲ್ಲಿಯೂ ಸಮಾಜಿಕ ಅಸಮಾನತೆ ಹೆಚ್ಚಾಗಿದ್ದನ್ನು ಮನಗಂಡ ಲೋಹಿಯಾ ಅವರು ಸಮಾನತೆಯ ತತ್ವವನ್ನು ತಮ್ಮ ಚಿಂತನೆಯ ತಳಹದಿಯಾಗಿಸಿದ್ದಾರೆ. ಮಾರ್ಕ್ಸ್, ಗಾಂಧಿ, ಅಂಬೇಡ್ಕರ್, ಲೋಹಿಯಾ ಮುಂತಾದವರ ಚಿಂತನೆಗಳು ಕನ್ನಡ ಸಾಹಿತಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರುವುದರೊಂದಿಗೆ ಅವರ ಸಾಹಿತ್ಯ ಸೃಷ್ಟಿಯಲ್ಲಿ ಬಿಂಬಿತವಾಗಿರುವುದು ಸ್ಪಷ್ಟವಾಗಿ ಕಾಣಸಿಗುತ್ತದೆ. ಲೋಹಿಯಾ ಅವರು ಕರ್ನಾಟಕದ ಕಾಗೋಡಿಗೆ ಬಂದು ಕಾಗೋಡು ಸತ್ಯಾಗ್ರಹದಲ್ಲಿ ಭಾಗಿಯಾಗಿ ಜೈಲುವಾಸವನ್ನು ಅನುಭವಿಸಿದ ಮೇಲೆ ಕರ್ನಾಟಕದಲ್ಲಿ ಅವರ ಚಿಂತನೆಯ ಪ್ರಭಾವ ಹೆಚ್ಚಾಯಿತು. ಸಮಾನತೆಯು ಎಲ್ಲಾ ರಂಗಗಳಲ್ಲೂ ಅಸ್ತಿತ್ವಕ್ಕೆ ಬರಬೇಕೆನ್ನುವ ಲೋಹಿಯಾ ಅವರು ಸಮಾನತೆಯ ಬಗ್ಗೆ ತಮ್ಮ ಚಿಂತನೆಯನ್ನು ಪ್ರತಿಪಾದಿಸುತ್ತಾರೆ. ಲೋಹಿಯಾ ಅವರ ಚಿಂತನೆಗಳ ಪ್ರಭಾವಕ್ಕೆ ಒಳಗಾದ ಕನ್ನಡ ಸಾಹಿತಿಗಳಲ್ಲಿ ಲಂಕೇಶರು ಒಬ್ಬರು. ಲೋಹಿಯಾ ಚಿಂತನೆಗಳನ್ನು ತಮ್ಮ ಕತೆಗಳ ಮೂಲಕ ಸಹೃದಯರಲ್ಲಿ ಚಿಂತನೆಗೆ ಒಳಗುಮಾಡುವ, ಅವರಲ್ಲಿ ಜಾಗೃತಿ ಉಂಟಾಗಿಸುವ ಹಾಗೂ ಜವಾಬ್ದಾರಿಯನ್ನು ಮೂಡಿಸುವುದರೊಂದಿಗೆ ಸಮಾಜದ ಆರೋಗ್ಯವನ್ನು ಸದೃಢಗೊಳಿಸುವ ಪ್ರಾಮಾಣಿಕ ಪ್ರಯತ್ನ ಲಂಕೇಶರು ಮಾಡಿರುವುದು ಕಂಡುಬರುತ್ತದೆ. ಲಂಕೇಶರು ಲೋಹಿಯಾ ಅವರ ಸಮಾನತೆಯ ಪರಿಕಲ್ಪನೆಯನ್ನು ತಮ್ಮ ಕೆಲವು ಸಣ್ಣಕತೆಗಳಲ್ಲಿ ವ್ಯಕ್ತ ಪಡಿಸಿರುವ ಅಂಶಗಳನ್ನು ಅನಾವರಣಗೊಳಿಸಿರುವ ಉದ್ದೇಶ ಈ ಲೇಖನದ್ದಾಗಿದೆ.