ಸಂಬಳಿಗೋಲು

Authors

  • A. R. KRISHNASHASTRY
  • BYRAPPA M.

Keywords:

ಸಂಬಳಿಗೋಲು, ಹರಿಶ್ಚಂದ್ರ ಕಾವ್ಯ, ಕಿಟ್ಟಲ್, ಬಿದಿರುಕೋಲು, ಸಿರಿಗನ್ನಡ ಅರ್ಥಕೋಶ, ಕನ್ನಡ ನಿಘಂಟು, ಹೊಲೆಯ, ದಲಿತ

Abstract

ಆಶಯ:

ಆಧುನಿಕ ಕನ್ನಡ ಸಾಹಿತ್ಯದ ಆರಂಭ ಘಟ್ಟದಲ್ಲಿ ಕನ್ನಡದ ಅಸ್ಮಿತೆಯನ್ನೂ ಘನತೆಯನ್ನೂ ಎತ್ತಿಹಿಡಿಯುವಲ್ಲಿ ಅಪಾರವಾಗಿ ಶ್ರಮವಹಿಸಿದ ವಿದ್ವಾಂಸರಲ್ಲಿ ಎ.ಆರ್.ಕೃಷ್ಣಶಾಸ್ತ್ರಿ ಅವರು ಪ್ರಮುಖರಾಗಿದ್ದಾರೆ. ಕನ್ನಡ ನವೋದಯದ ಪ್ರವರ್ತಕರೆಂದೂ ಪ್ರಸಿದ್ಧರಾದ ಬಿ.ಎಂ.ಶ್ರೀಕಂಠಯ್ಯನವರ ಪ್ರಿಯಶಿಷ್ಯರಾಗಿ, ಅವರ ಪ್ರೇರಣೆ ಪ್ರೋತ್ಸಾಹಗಳಿಂದ ಕೃಷ್ಣಶಾಸ್ತ್ರಿಗಳು ಕನ್ನಡದ ಬೋಧನೆಯಲ್ಲಿ, ಸಾಹಿತ್ಯರಚನೆಯಲ್ಲಿ, ವಿಮರ್ಶೆ ವಿಶ್ಲೇಷಣೆಗಳಲ್ಲಿ ಪ್ರಾಚ್ಯ ಮತ್ತು ಪಾಶ್ಚಾತ್ಯ ವಿಚಾರಧಾರೆಯನ್ನೂ ವಿಧಿವಿಧಾನಗಳನ್ನೂ ಗಾಢವಾದ, ವ್ಯಾಪಕವಾದ ವ್ಯಾಸಂಗದ ಬಲದಿಂದ ಸ್ವತಃ ರೂಢಿಸಿಕೊಂಡರು. ತಮ್ಮ ಶಿಷ್ಯರಲ್ಲಿಯೂ ಬೆಳೆಯುವಂತೆ ಮಾರ್ಗದರ್ಶನಮಾಡಿದರು. ಅನಂತರದ ವರ್ಷಗಳಲ್ಲಿ, ಕನ್ನಡ ಭಾಷೆ ಸಾಹಿತ್ಯಗಳ ಕ್ಷೇತ್ರದಲ್ಲಿ ತಮ್ಮ ಸಾಧನೆಗಳಿಂದ ಎತ್ತರದ ಜಲ ಚಿಹ್ನೆಗಳನ್ನು ನಿರ್ಮಿಸಿದ ಕವಿಶ್ರೇಷ್ಠರಾದ ಕುವೆಂಪು ಅವರು, ವಿದ್ವಾಂಸವರಿಷ್ಠರಾದ ತೀ.ನಂ.ಶ್ರೀಕಂಠಯ್ಯನವರು, ಡಿ.ಎಲ್.ನರಸಿಂಹಾಚಾರ್ಯರು ಮೊದಲಾದವರು ಕೃಷ್ಣಶಾಸ್ತ್ರಿಗಳನ್ನು ಗೌರವಾದರ ಭಾವದಲ್ಲಿ ಸ್ಮರಿಸಿದ್ದಾರೆ. ಕುವೆಂಪು ಅವರು ತಮ್ಮ ಗುರುಗಳನ್ನು ಕುರಿತು “ಶ್ರೀ ಕೃಷ್ಣಶಾಸ್ತ್ರಿಗಳ ನೆನಪೇ ಒಂದು ಪೂಜ್ಯವಸ್ತು. ಅವರು ಇಂದು ದೇಹಚಕ್ಷುವಿಗೆ ಅಗಮ್ಯವಾಗಿದ್ದಾರೆ, ಆದರೆ ಹೃದಯಚಕ್ಷುವಿಗೆ ಧ್ಯಾನಗಮ್ಯರಾಗಿದ್ದಾರೆ…” ಎಂದು ಸ್ಮರಿಸಿದ್ದಾರೆ.

ಕೃಷ್ಣಶಾಸ್ತ್ರಿಗಳು ಮೈಸೂರು ಮಹಾರಾಜ ಕಾಲೇಜಿನಲ್ಲಿ ಇತಿಹಾಸ ಮತ್ತು ಭಾಷಾವಿಷಯಗಳನ್ನು ಅಭ್ಯಾಸ ಮಾಡಿ ೧೯೧೩ರಲ್ಲಿ ಬಿ.ಎ. ಪದವೀಧರರಾದರು. ೧೯೧೪ರಲ್ಲಿ ಮದರಾಸು ವಿಶ್ವವಿದ್ಯಾನಿಲಯದ ಸಂಸ್ಕೃತ ಕನ್ನಡ ಭಾಷೆಗಳ ಎಂ.ಎ. ಪರೀಕ್ಷೆಗೆ ಗೊತ್ತುಮಾಡಿದ್ದ ಪಠ್ಯಗಳನ್ನು ಸ್ವತಃ ಅಭ್ಯಾಸಮಾಡಿಕೊಂಡು ಅದಕ್ಕೆ ಸಿದ್ಧವಾಗಿದ್ದರು. ಅಂದು ಮದರಾಸು ವಿಶ್ವವಿದ್ಯಾನಿಲಯ ಮದರಾಸಿನಲ್ಲಿಯೇ ಇದ್ದುಕೊಂಡು ಕ್ರಮಬದ್ದವಾಗಿ ವ್ಯಾಸಂಗಮಾಡಬೇಕೆಂಬ ತನ್ನ ನಿಯಮವನ್ನು ಭಾಷೆಗಳ ವಿಷಯದಲ್ಲಿ ಸಡಿಲಿಸಿತು; ಖಾಸಗಿಯಾಗಿ ವ್ಯಾಸಂಗ ಮಾಡಿದವರು ಮದರಾಸಿನಲ್ಲಿ ಪರೀಕ್ಷೆ ತೆಗೆದುಕೊಳ್ಳಬಹುದೆಂದು ಸೂಚಿಸಿತು. ಆದರೆ ಈ ಸೌಕರ್ಯ ಅದೊಂದು ವರ್ಷಕ್ಕೆ ಮಾತ್ರ. ಅದನ್ನು ಉಪಯೋಗಿಸಿಕೊಳ್ಳಲು ಕೃಷ್ಣಶಾಸ್ತ್ರಿಗಳು ಕೂಡಲೇ ಮುಂದಾದರು. ಸಂಸ್ಕೃತ ಕನ್ನಡ ಎರಡು ಭಾಷೆಗಳಲ್ಲಿಯೂ ಎಂ.ಎ. ಪದವೀಧರರಾದರು. ಆ ಕಾಲಕ್ಕೆ ಆ ವಿಧದ ಹೆಚ್ಚುಗಾರಿಕೆ ಮೈಸೂರು ಸಂಸ್ಥಾನದಲ್ಲಿ ತುಂಬ ವಿರಳವಾದ ವಿದ್ಯಮಾನವೇ ಆಗಿತ್ತೆಂಬುದನ್ನು ಮರೆಯಲಾಗದು.

ಅಂದಿನ ಅಧ್ಯಾಪಕರಲ್ಲಿ ಸಂಪ್ರದಾಯಮಾರ್ಗದ ಸಂಸ್ಕೃತ ಕನ್ನಡ ಪಂಡಿತರ ಬೋಧನೆ ಮಾರ್ಗದರ್ಶನಗಳಿಂದ ದೊರೆಯದ ಆಧುನಿಕ ವಿಮರ್ಶೆಯ ದೃಷ್ಟಿ, ತುಲನಾತ್ಮಕ ಸಮಾಲೋಚನೆ ಹಾಗೂ ಒಳನೋಟಗಳನ್ನು ಗ್ರಹಿಸುವ ಕ್ರಮ ಇವನ್ನು ಪ್ರಾಚೀನ ಮತ್ತು ಆಧುನಿಕ ಸಾಹಿತ್ಯಾಧ್ಯಯನದಲ್ಲಿ ಬಿ.ಎಂ.ಶ್ರೀಕಂಠಯ್ಯನವರಿಂದ ಕಂಡುಕೊಂಡರು. ಅವರ ಬಹುಭಾಷಾಧ್ಯಯನದ ಪ್ರಯೋಜನ, ಅನನ್ಯ ಕನ್ನಡಭಾಷಾ ಸಾಹಿತ್ಯಪ್ರೇಮ ಹಾಗೂ ಭಾಷೆ ಶೈಲಿ ವಸ್ತುಗಳಲ್ಲಿ ಹೊಸತನವನ್ನು ಹೂಡುವ, ನಡೆಸುವ ಉತ್ಸಾಹ ಇವನ್ನು ತಾವೂ ಮೈಗೂಡಿಸಿಕೊಂಡರು. ಅವರು ಸಂಸ್ಕೃತಸಾಹಿತ್ಯ, ವೇದಾಂತ, ಕಾವ್ಯಮೀಮಾಂಸೆ ಇವುಗಳಲ್ಲಿ ಅಗಾಧವಾದ ಪಾಂಡಿತ್ಯವನ್ನು ಗಳಿಸಿದ್ದ ಎಂ.ಹಿರಿಯಣ್ಣನವರಿಂದಲೂ ವಿಶೇಷವಾಗಿ ಪ್ರಭಾವಿತರಾದರು. ಕ್ರಮಬದ್ಧವಾಗಿ ಕೆಲಸಮಾಡುವ ರೀತಿ, ತರ್ಕಬದ್ಧವಾಗಿ ವಿಚಾರಮಾಡುವ ಶಕ್ತಿ, ಸರಳವಾದ ನಿರೂಪಣಕ್ರಮ, ವಿದ್ವತ್ ಪತ್ರಿಕೆಗಳ ವ್ಯಾಸಂಗದ ಪ್ರಯೋಜನ ಇವುಗಳನ್ನು ಅವರಿಂದ ಗ್ರಹಿಸಿದರಲ್ಲದೆ, ಅವರ ಸಾತ್ತ್ವಿಕವಾದ, ಉದಾರವಾದ ವ್ಯಕ್ತಿತ್ವವನ್ನು ತುಂಬ ಗೌರವಿಸಿದರು. ಕನ್ನಡ ಪಂಡಿತರಾದ ಕೆ.ವರದಾಚಾರ್ಯರು ಮಾಡುತ್ತಿದ್ದ ಪಾಠಪ್ರವಚನಗಳನ್ನು ಮೆಚ್ಚಿದರು. ಇಂತಹವರ ಸಂಪರ್ಕ ಸಾಹಚರ್ಯಗಳಿಂದ ಜೀವನಪ್ರೀತಿಯೂ ಸಂಪ್ರದಾಯಜಡವಲ್ಲದ ಸಾಹಿತ್ಯಾಭಿರುಚಿಯೂ ಅವರಲ್ಲಿ ಮೈಗೂಡಿದುವು.

ವಿದ್ಯಾಭ್ಯಾಸದ ನಂತರ ಮೈಸೂರು ಸರ್ಕಾರದ ಡಿಸ್ಟ್ರಿಕ್ಟ್ ಆಫೀಸಿನಲ್ಲಿ ತಿಂಗಳಿಗೆ ೩೫ ರೂಪಾಯಿ ಸಂಬಳದ ಗುಮಾಸ್ತ ಕೆಲಸಕ್ಕೆ (೧೯೧೪) ಸೇರಿಕೊಂಡಿದ್ದ ಶಾಸ್ತ್ರಿಗಳು ಆನಂತರ ಆ ಕೆಲಸವನ್ನು ಬಿಟ್ಟು, ಯಾವುದಾದರೂ ಶಾಲೆ ಕಾಲೇಜಿನಲ್ಲಿ ಅಧ್ಯಾಪಕರಾಗಬೇಕೆಂಬ ಅಪೇಕ್ಷೆಯನ್ನು ಹೊಂದಿದ್ದರು. ಆಗ್ಗೆ ಹೊಸಗನ್ನಡ ಭಾಷಾಸಾಹಿತ್ಯಗಳ ಪುನರುಜ್ಜೀವನಕರ್ತರಲ್ಲಿ ಅಗ್ರಗಣ್ಯರೆನ್ನಿಸಿದ ಎಂ.ಶಾಮರಾಯರ ಬೆಂಬಲದಿಂದ, ಕನ್ನಡ ನವೋದಯದ ಆಚಾರ್ಯ ಪುರುಷರೆನ್ನಿಸಿದ ಹಾಗೂ ಪದವಿಶಿಕ್ಷಣದ ದಿನಗಳಲ್ಲಿ ತಮಗೆ ಗುರುಗಳೇ ಆಗಿದ್ದ ಬಿ.ಎಂ.ಶ್ರೀಕಂಠಯ್ಯನವರ ವಿಶ್ವಾಸದಿಂದ, ಎಂ.ಎ. ಪದವೀಧರರನ್ನು ಹುಡುಕಿ ಆರಿಸಿ ತಂದು ತಮ್ಮ ಕಾಲೇಜಿಗೆ ಬರಮಾಡಿಕೊಳ್ಳುವುದರಲ್ಲಿ ಸಮರ್ಥರೆನ್ನಿಸಿದ್ದ ಹಾಗೂ ಸಂಸ್ಕೃತ ಕನ್ನಡ ಭಾಷೆಗಳ ವಿಷಯದಲ್ಲಿ ಅಭಿಮಾನವಿಟ್ಟುಕೊಂಡಿದ್ದ ಸೆಂಟ್ರಲ್ ಕಾಲೇಜಿನ ಮುಖ್ಯಾಧಿಕಾರಿಗಳಾದ ಆಂಗ್ಲವಿದ್ವಾಂಸ ಟೆಯ್ಟ್ ಅವರ ಪ್ರೋತ್ಸಾಹದಿಂದ ಕೃಷ್ಣಶಾಸ್ತ್ರಿಗಳು ಸೆಂಟ್ರಲ್ ಕಾಲೇಜಿನಲ್ಲಿ ಮೊದಲು ಕನ್ನಡ ಉಪ-ಅಧ್ಯಾಪಕ(ಟ್ಯೂಟರ್)ರೆಂದು ನೇಮಕವಾದರು. ಮೈಸೂರು ವಿಶ್ವವಿದ್ಯಾನಿಲಯ ಸ್ವತಂತ್ರವಿದ್ಯಾಪೀಠವಾಗಿ ಕಾರ್ಯನಿರ್ವಹಿಸಲು ಆರಂಭಿಸುವುದಕ್ಕೆ (೧೯೧೬) ಹಿಂದಿನ ವರ್ಷವಷ್ಟೇ (೧೯೧೫) ಕೃಷ್ಣಶಾಸ್ತ್ರಿಗಳು ಕನ್ನಡ ಅಧ್ಯಾಪನಕಾರ್ಯದಲ್ಲಿ ನಿಯುಕ್ತರಾದುದು ಕನ್ನಡ ಪ್ರಜ್ಞಾವಿಕಾಸ ಚರಿತ್ರೆಯ ಸುವರ್ಣಗಳಿಗೆಯೆಂದೇ ಹೇಳಬೇಕು. ಯಾಕೆಂದರೆ, ಅಂದು ಕನ್ನಡದ ಪರಿಸ್ಥಿತಿ ಏನೂ ಉತ್ತಮವಾಗಿರಲಿಲ್ಲ. ಅದಕ್ಕೆ ತಕ್ಕ ಸ್ಥಾನಮಾನಗಳಿರಲಿಲ್ಲ. ಅದರ ಬಗ್ಗೆ ವಿದ್ಯಾರ್ಥಿಗಳಿಗೆ ಅಸಡ್ಡೆ, ಅನ್ಯವಿಭಾಗಗಳ ಅಧ್ಯಾಪಕರಿಗೆ ತಿರಸ್ಕಾರ ಎಂಬಂತೆ ಇತ್ತು. ಕನ್ನಡದಲ್ಲಿ ಕಲಿಯುವುದು ಏನೂ ಇಲ್ಲ ಎಂಬ ಭಾವನೆಯೇ ತುಂಬಿಕೊಂಡಿತ್ತು. ಇಂತಹ ಸನ್ನಿವೇಶದಲ್ಲಿ ಕೃಷ್ಣಶಾಸ್ತ್ರಿಗಳು ಹೋರಾಡಿ ಕನ್ನಡದ ಬಗ್ಗೆ ಎಲ್ಲರಲ್ಲಿಯೂ ಅಭಿಮಾನವನ್ನೂ ಗೌರವವನ್ನೂ ಹುಟ್ಟಿಸಲು ತಮ್ಮ ಸರ್ವಶಕ್ತಿಯನ್ನೂ ವಿನಿಯೋಗಿಸಿದರು. ವಿದ್ಯಾರ್ಥಿಗಳ ಹಾಗೂ ಸಹೋದ್ಯೋಗಿಗಳ ವಿಶ್ವಾಸ ಗೌರವಗಳನ್ನೂ ಸಂಪಾದಿಸಿದರು. ಕನ್ನಡ ಭಾಷೆ ಸಾಹಿತ್ಯಗಳ ಹಿರಿಮೆಗರಿಮೆಗಳನ್ನು ಅವರಿಗೆ ಮನವರಿಕೆ ಮಾಡಿಕೊಟ್ಟರು. ತಾವು ಗಳಿಸಿದ್ದ ಪ್ರಾಚ್ಯ ಮತ್ತು ಪಾಶ್ಚಾತ್ಯ ವಿದ್ಯಾಸಂಸ್ಕಾರಗಳ ಬಲದಿಂದ ಕನ್ನಡ ಭಾಷಾಸಾಹಿತ್ಯಗಳ ಬೋಧನೆಯಲ್ಲಿ ಅಪೂರ್ವವಾದ ಹೊಸಗಾಳಿಯ ಸಂಚಾರವನ್ನೂ ಉಂಟುಮಾಡಿದರು. ಮದರಾಸು ವಿಶ್ವವಿದ್ಯಾನಿಲಯದ ಇಂಟರ್‌ಮೀಡಿಯೇಟ್ ಪರೀಕ್ಷೆಗೆ ಕನ್ನಡ ಪ್ರಬಂಧಪತ್ರಿಕೆಯಲ್ಲಿ ಒಂದು ಪ್ರಶ್ನೆ ಇಂಗ್ಲಿಷ್ ಪಠ್ಯಗ್ರಂಥದ ಮೇಲೆ ಇರುತ್ತಿತ್ತು. ಅದನ್ನು ಬೋಧಿಸುವುದು ಕನ್ನಡ ಅಧ್ಯಾಪಕರಿಗೆ ಸಾಧ್ಯವಾಗುತ್ತಿರಲಿಲ್ಲ; ಇಂಗ್ಲಿಷ್ ಅಧ್ಯಾಪಕರಿಗೆ ಬೇಕಾಗಿರಲಿಲ್ಲ. ಇಂಥ ಹೊತ್ತಲ್ಲಿ ಕೃಷ್ಣಶಾಸ್ತ್ರಿಗಳು ಅದನ್ನು ಸಮರ್ಪಕವಾಗಿ ನಿರ್ವಹಿಸಿ, ಇಂಗ್ಲಿಷ್ ಪ್ರಿಯರಾದ ವಿದ್ಯಾರ್ಥಿಗಳ ಗೌರವಾದರಗಳನ್ನು ಗಳಿಸಿದರು. ಈ ಮೂಲಕ ಇತರ ವಿಷಯಗಳ ಅಧ್ಯಾಪಕರಂತೆಯೇ ಕನ್ನಡ ಅಧ್ಯಾಪಕರು ಸಂಭಾವಿತರು ಎಂಬ ಘನತೆಯನ್ನು ಸಾಧಿಸಿತೋರಿಸಿ ಕನ್ನಡ ಭಾಷೆಯ ಮಾದರಿ ಪ್ರಾಧ್ಯಾಪಕರೆನಿಸಿದರು.

ಸೆಂಟ್ರಲ್ ಕಾಲೇಜಿಗೆ ಅಧ್ಯಾಪಕರಾಗಿ ಬಂದಿದ್ದ ಕೃಷ್ಣಶಾಸ್ತ್ರಿಗಳವರು ‘ಕರ್ನಾಟಕ ಸಂಘ’ ಸ್ಥಾಪಿಸಿದರು. ಈ ಸಂಘವನ್ನನುಸರಿಸಿ ದೇಶಾದ್ಯಂತ ಕರ್ನಾಟಕ ಸಂಘಗಳು ಹುಟ್ಟಿಕೊಂಡು ಕನ್ನಡ ಪ್ರಸಾರಕ್ಕೆ ನಿಂತವು. ವಿದ್ಯಾರ್ಥಿಗಳ ಸೌಕರ್ಯಕ್ಕಾಗಿ ‘ಪ್ರಬುದ್ಧ ಕರ್ನಾಟಕ’ ತ್ರೈಮಾಸಿಕ ಪತ್ರಿಕೆಯನ್ನು ಆರಂಭಿಸಿದರು. ಹದಿಮೂರು ವರ್ಷಕಾಲ ಪತ್ರಿಕೆಯ ಸಂಪಾದಕರಾಗಿದ್ದುಕೊಂಡು ಕೃಷ್ಣಶಾಸ್ತ್ರಿಗಳವರು ೧೯೩೨ರಲ್ಲಿ ಪತ್ರಿಕೆಯನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಒಪ್ಪಿಸಿದರು. ಕೇವಲ ವಿದ್ಯಾರ್ಥಿಗಳ ಉಪಯೋಗಾರ್ಥವಾಗಿ ಹುಟ್ಟಿಕೊಂಡ ‘ಪ್ರಬುದ್ಧ ಕರ್ನಾಟಕ’ ಕ್ರಮಕ್ರಮೇಣ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡು ನಾಲ್ಕಾರು ವರ್ಷಗಳಲ್ಲಿ ಕರ್ನಾಟಕದ ಅತ್ಯಂತ ಶ್ರೇಷ್ಠ ಪತ್ರಿಕೆಯಾಯಿತು. ಶಾಸ್ತ್ರಿಗಳವರ ಪೋಷಣೆಯಿಂದ ಅನೇಕ ಹಿರಿಯ ಲೇಖಕರು ತಮ್ಮ ಸೇವೆ ಸಲ್ಲಿಸಲಾರಂಭಿಸಿದರು. ಡಿ.ವಿ.ಜಿ., ಬಿ.ಎಂ.ಶ್ರೀ… ಮಾಸ್ತಿಯವರ ಗ್ರಂಥಗಳು ಕರ್ನಾಟಕ ಸಂಘದ ಆಶ್ರಯದಲ್ಲಿ ಪ್ರಕಟವಾದವು. ವಿದ್ವಾಂಸರು ಗುರ್ತಿಸುವಂತೆ, ಕನ್ನಡ ನಾಡಿನ ಸಾಹಿತ್ಯ ಚರಿತ್ರೆಯಲ್ಲಿ ‘ಕರ್ನಾಟಕ ಸಂಘ’ ಮತ್ತು ‘ಪ್ರಬುದ್ಧ ಕರ್ನಾಟಕ’ ಎರಡು ಮಹತ್ವ ಘಟ್ಟಗಳು.

ಕನ್ನಡ ನವೋದಯ ಸಂದರ್ಭದ ಮಹತ್ವದ ಪತ್ರಿಕಗಳಲ್ಲಿ ಅಗ್ರಗಣ್ಯವೆನಿಸಿದ ‘ಪ್ರಬುದ್ಧ ಕರ್ನಾಟಕ’ಕ್ಕೆ ಶಾಸ್ತ್ರಿಗಳವರು ಹೆಸರಿಗೆ ಮಾತ್ರ ಸಂಪಾದಕರಾಗಿರಲಿಲ್ಲ. ಪ್ರತಿ ಪಟವೂ ಅವರ ಪಾಂಡಿತ್ಯ, ವಿಮರ್ಶೆಗಳ ಸಾಣೆಗೆ ಸಿಕ್ಕಿಯೇ ಪ್ರಕಟವಾಗಬೇಕಿತ್ತು. ಶಾಸ್ತ್ರಿಗಳವರೇ ತಪ್ಪದೇ ಲೇಖನಗಳನ್ನು ಕಥೆಗಳನ್ನೂ, ವಿಮರ್ಶೆಗಳನ್ನೂ, ಸಂಪಾದಕೀಯ ಟೀಕೆ ಟಿಪ್ಪಣಿಗಳನ್ನೂ ಬರೆಯುತ್ತಿದ್ದರು. ‘ಈ ಇಪ್ಪತೈದು ವರ್ಷಗಳಿಂದ ಹೊಸಗನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎಷ್ಟೋ ಉತ್ತಮವಾದ ವ್ಯವಸಾಯ ನಡೆದಿದೆ. ‘ಪ್ರಬುದ್ಧ ಕರ್ನಾಟಕ’ವು ಅದು ನಡೆಯುವಂತೆ ಸ್ವಲ್ಪವಾದರೂ ಸಾಧನವಾಗಿ ಕಾಡು ಕಡಿದು, ಭೂಮಿಯನ್ನು ಉತ್ತು, ನೆಲ ಹದ ಮಾಡಿ, ಬೇಲಿ ಹಾಕಿ ಅಷ್ಟೋ ಇಷ್ಟೋ ನೀರು, ಬೀಜ ಗೊಬ್ಬರಗಳನ್ನು ಒದಗಿಸಿಕೊಟ್ಟಿದೆ ಎಂದು ನಂಬಿದ್ದೇನೆ. ಆದರೆ ಬರಿಯ ನೆಲ ನೇಗಿಲುಗಳಿಂದ ಆಗುವುದೇನು? ಫಲ ತೆಗೆಯಲು “‘ನೇಗಿಲಯೋಗಿ’ಗಳು ಬೇಕು. ಅವರನ್ನು ಆರಿಸಿ ಕಳುಹಿಸಿಕೊಡುವುದು ಭಗವಂತನ ದಯೆ ನಾಡಿನ ಪುಣ್ಯ” ಎಂದಿರುವ ಕೃಷ್ಣಶಾಸ್ತ್ರಿಗಳವರು ವಿನಯ-ವಿದ್ವತ್‌ಗಳ ವಿದ್ಯುದಾಲಿಂಗನದ ಮೇರುಶಿಖವೇ ಆಗಿದ್ದವರು.

ವಿದ್ವಾಂಸರಾದ ಪ್ರೊ.ಟಿ.ವಿ.ವೆಂಕಟಾಚಲಶಾಸ್ತ್ರಿ ಅವರು ಹೇಳುವಂತೆ, “ಕೃಷ್ಣಶಾಸ್ತ್ರಿಗಳು ಹುಟ್ಟುಹಾಕಿದ ಬೆಂಗಳೂರು ಸೆಂಟ್ರಲ್ ಕಾಲೇಜಿನ ‘ಕರ್ಣಾಟಕ ಸಂಘ’ ಇಂದು ಕನ್ನಡ ನಾಡಿನ ತುಂಬ ಕನ್ನಡ ಸಂಘಗಳೆಂಬುದಾಗಿ ಕವಲೊಡೆದು ಹೆಮ್ಮರವಾಗಿ ಹಬ್ಬಿದೆ. ಅವರು ಪ್ರಾರಂಭಿಸಿದ ‘ಪ್ರಬುದ್ಧ ಕರ್ಣಾಟಕ’ವೆಂಬ ಉನ್ನತ ಶೈಕ್ಷಣಿಕ ಸಾಹಿತ್ಯ ಪತ್ರಿಕೆ ಈಗ ಬೆಳ್ಳಿಯ, ಚಿನ್ನದ ಹಾಗೂ ವಜ್ರದ ಹಬ್ಬಗಳನ್ನು ದಾಟಿ ಶತಮಾನೋತ್ಸವಕ್ಕೆ ಫಲಪ್ರದವಾಗಿ ಸಾಗಿ ಬಂದಿದೆ. ಅವರಿಂದ ಮಾತು ಕಲಿತ, ಬರಹದಲ್ಲಿ ಪಳಗಿದ, ನಾನಾ ಮುಖವಾಗಿ ತಮ್ಮನ್ನು ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡು ಕೀರ್ತಿವಂತರಾದ ಕನ್ನಡಿಗರು ನಾಡು ನುಡಿಗಳನ್ನು ಅಭ್ಯುದಯಪಥದಲ್ಲಿ ಮುನ್ನಡಸಿದ್ದಾರೆ. ದೀಪದಿಂದ ದೀಪ ಬೆಳಗಿ ದೀಪಮಾಲೆ ಬೆಳಗುತ್ತಲೇ ಇದೆ.”

ಎ.ಆರ್.ಕೃ. ಅವರಲ್ಲಿ ಅಪ್ರತಿಮವಾದ ಕನ್ನಡಾಭಿಮಾನವಿತ್ತು ಎಂಬುದಕ್ಕೆ ಅವರ ಈ ಸಿರಿನುಡಿಯು ಸಾಕ್ಷ್ಯಗನ್ನಡಿಯಂತಿದೆ: “ಹಿಂದೆ ಮಹಾನುಭಾವರಾದ ಗೌತಮಬುದ್ಧ ಮಹಾವೀರರು ಜನದ ಭಾಷೆಯಲ್ಲಿ ಸಾಹಿತ್ಯ ಹುಟ್ಟುವುದಕ್ಕೆ ತಳಹದಿ ಹಾಕಿದರು; ವಚನಕಾರರೂ, ದಾಸಭಕ್ತರೂ ಈ ಸಂಪ್ರದಾಯವನ್ನು ಮುಂದುವರೆಸಿ, ಸಾಹಿತ್ಯವನ್ನು ಬೆಳೆಸಿದರು, ಕನ್ನಡವನ್ನು ಬೆಳೆಸಿದರು; ಹಿಂದೆ ಕನ್ನಡ ಸಂಸ್ಕೃತಗಳ ಬಲಾಬಲ ವಿಚಾರಗಳಲ್ಲಿ ಮೇಲಾಟ ಹೋರಾಟಗಳು ನಡೆದರೂ, ಕನ್ನಡವು ನಮ್ಮದೆಂಬ ಮಮತೆಯು, ಅಭಿಮಾನವು, ಈಚಿನದು; ಕನ್ನಡಿಗರಿಗೆ ಕನ್ನಡದಿಂದಲೇ ಭುಕ್ತಿ, ಕನ್ನಡದಿಂದಲೇ ‘ಮುಕ್ತಿ’ ಎಂಬ ತತ್ವವನ್ನು ನಾವು ಪೂರ್ತಿಯಾಗಿ ಗ್ರಹಿಸಿದ್ದು ಈಚೆಗೆ. ಈಗಲೂ ಈ ವಿಚಾರವಾಗಿ ಸ್ವಲ್ಪ ವೀರೋಪಾಸನೆಯಿಲ್ಲದಿದ್ದರೆ ಅದು ಬದುಕದು; ಏಕದೇವೋಪಾಸನೆಯಂತೆ ಏಕಭಾಷೋಪಾಸನೆ ಮಾಡಿದರೆ ತಾನೇ ವರ ಸಿಕ್ಕಿತು ? ಕನ್ನಡ ಭಕ್ತನು ‘ತೈಲಧಾರೆಯಂತೆ ಕನ್ನಡದಲ್ಲಿ ಮನವಕೊಡು, ಇಂಗ್ಲಿಷ್, ಸಂಸ್ಕೃತಾ?’ ಎಂದು ಪ್ರಾರ್ಥಿಸಬೇಕು; ವೀರದೀಕ್ಷೆ ವಹಿಸಬೇಕು. ಕನ್ನಡದ ಭಕ್ತರಾಗಿ ಮಿಕ್ಕ ಭಾಷೆಗಳಿಗೆ ಪೂಜೆ ಸಲ್ಲಿಸುವುದನ್ನು ವಚನಕಾರರಾಗಿದ್ದರೆ ಬಹು ಕಠಿಣ ಮಾತಿನಲ್ಲಿ ಖಂಡಿಸುತ್ತಿದ್ದರು… ಕನ್ನಡಿಗರಲ್ಲಿ ಕಾವು ಸಾಲದು; ಕಾವಿನಿಂದ ಕಾವ್ಯ, ಕಾವಿನಿಂದ ಕಾರ್ಯ.” ೧೯೪೧ರಲ್ಲಿ ಹೈದರಾಬಾದು ನಗರದಲ್ಲಿ ನಡೆದ ೨೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನದಿಂದ ಶಾಸ್ತ್ರಿಗಳ ಸಿರಿಕಂಠದಲ್ಲಿ ಮೂಡಿಬಂದಿರುವ ಕನ್ನಡಪರ ನುಡಿಕುಲುಮೆಯ ಕಿಡಿಗನ್ನಡಿಯಿದು. ಅ.ನ.ಕೃ ಅವರು ದಾಖಲಿಸುವಂತೆ, “ಕನ್ನಡವೇ ತಮ್ಮ ಸರ್ವಸ್ವವೆಂದು ತಿಳಿದು, ಅದಕ್ಕಾಗಿ ತನು, ಮನ, ಧನವನ್ನರ್ಪಿಸಿ ದುಡಿದಿರುವವರು ಬಹಳ ಮಂದಿಯಿಲ್ಲ. ಕನ್ನಡ ಬದುಕಲೆಂದು ನೂರೆಂಟು ಅಡಚಣೆಗಳನ್ನು, ವಿರೋಧಗಳನ್ನು ಎದುರಿಸಿ ವಿರೋಪಾಸಕರಾಗಿ ನಿಂತವರು ವಿರಳ. ಅಂಥ ವಿರಳರಲ್ಲಿ ಕೃಷ್ಣಶಾಸ್ತ್ರಿಗಳವರ ಸ್ಥಾನ ಬಹಳ ಹಿರಿಯ ಸ್ಥಾನ. ಕೃಷ್ಣಶಾಸ್ತ್ರಿಗಳವರ ಸಂದೇಶ ಕೇವಲ ಒಣ ಅಭಿಮಾನದಿಂದ ಪ್ರೇರಿತವಾಗಿದ್ದಲ್ಲ; ಅವರ ಮಾತಿನ ಹಿಂದೆ ಅಗಾಧವಾದ ಅಪಾರವಾದ ಸಂಸ್ಕೃತ, ಕನ್ನಡ, ಇಂಗ್ಲಿಷ್ ಪಾಂಡಿತ್ಯವಿದೆ; ಉಕ್ಕಿ ಹರಿಯುವ ದೇಶಾಭಿಮಾನವಿದೆ..” ಕನ್ನಡದಲ್ಲಿ ಮಾತ್ರವಲ್ಲದೇ ಸಂಸ್ಕೃತ, ಇಂಗ್ಲಿಷ್, ತಮಿಳು, ತೆಲುಗು, ಬಂಗಾಳಿ, ಜರ್ಮನ್ ಭಾಷೆಗಳಲ್ಲಿ ಪರಿಣತಿಗಳಿಸಿ ಹದಗೊಂಡ ಪಾಂಡಿತ್ಯ, ಉತ್ತಮ ಕಾವ್ಯಸಂಸ್ಕಾರ, ವಿಶಾಲವಾದ ಲೋಕಾನುಭವ, ಪರಿಪಕ್ವವಾದ ವಿಮರ್ಶನಸಾಮರ್ಥ್ಯ ಇವುಗಳಿಂದಾಗಿ ಶಾಸ್ತ್ರಿಯವರ ಸಾಹಿತ್ಯಕೃಷಿಯು ಮಾದರಿ ಚಿಂತನೆ-ಶೋಧನೆಗೆ ಸಾಕ್ಷೀಭೂತವಾಗಿದೆ.

‘ಪ್ರಬುದ್ಧ ಕರ್ಣಾಟಕ’ದಲ್ಲಿ ಬಹುಕಾಲದ ಹಿಂದಿನಿಂದ ಆಗಾಗ್ಗೆ ಪ್ರಕಟವಾದ ‘ಶ್ರೀಪತಿಯ ಕಥೆಗಳು’, ‘ಸರ್ವಜ್ಞ ಕವಿ‘, ‘ಸಂಸ್ಕೃತ ನಾಟಕ’, ‘ವಚನ ಭಾರತ’, ‘ಭಾಸಕವಿ‘, ‘ಭಾಷಣಗಳು ಮತ್ತು ಲೇಖನಗಳು’, ‘ಸೋಮದೇವನ ‘ಕಥಾಸರಿತ್ಸಾಗರ’ ಕಥಾಮೃತ’, ‘ನಿರ್ಮಲ ಭಾರತೀ ಅಥವಾ ಮಕ್ಕಳ ಮಹಾಭಾರತ’, ‘ನಾಗಮಹಾಶಯ’, ‘ಈಶ್ವರಕವಿ ವಿರಚಿತಂ ಕವಿಜಿಹ್ವಾಬಂಧನಂ’ ಹಾಗೂ ‘ಬಂಕಿಮಚಂದ್ರ’ ಎಂಬುವು ಎ.ಆರ್.ಕೃ ಅವರು ಸಾಹಿತ್ಯಕೃಷಿಯಲ್ಲಿ ಬೆಳೆದ ಬಂಗಾರದಬೆಳೆಗಳು. ಎ.ಆರ್.ಕೃ. ಅವರು ಮೊದಲು ಓದಿದ ಬಂಕಿಮಚಂದ್ರರ ಕೃತಿ, ಶ್ರೀ ಬಿ.ವೆಂಕಟಾಚಾರ್ಯರು ಕನ್ನಡಕ್ಕೆ ತರ್ಜುಮೆ ಮಾಡಿದ್ದ ‘ಆನಂದಮಠ’. ಅದನ್ನು ಮೂಲದಲ್ಲಿ ಓದಬೇಕೆಂದು ಬಂಗಾಲೀ ಭಾಷೆಯನ್ನು ಕಲಿತು-ಆ ಭಾಷೆಯನ್ನು ಕರತಲಾಮಲಕವನ್ನಾಗಿ ಮಾಡಿಕೊಂಡರು. ನಿವೃತ್ತರಾದ ಮೇಲೆ, ಪಾಠ ಹೇಳುವಾಗ ತಾವು ಮಾಡಿಕೊಂಡಿದ್ದ ಟಿಪ್ಪಣಿಗಳನ್ನೆಲ್ಲಾ ಸೇರಿಸಿ ‘ಬಂಕಿಮಚಂದ್ರ’ (ಬಂಕಿಮರ ಜೀವನ ಚರಿತ್ರೆ-ಕೃತಿ-ವಿಮರ್ಶೆ) ಬರೆದರು. ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂತು. ವೃದ್ಧಾಪ್ಯದಿಂದಾಗಿ ದೆಹಲಿಗೆ ಹೋಗಲು ನಿರಾಕರಿಸಿದಾಗ ಕೇಂದ್ರ ಸಾಹಿತ್ಯ ಅಕಾಡೆಮಿಯವರೇ ಅವರ ಮನೆಬಾಗಿಲಿಗೆ ಬಂದು ಆಹ್ವಾನಿತ ಸನ್ಮಿತ್ರರ ಮುಂದೆ ಗೌರವಿಸಿ ಸಮಾರಂಭವನ್ನು ನಡೆಸಿದರು. ಇಂತಹ ಸನ್ಮಾನವನ್ನು ಪಡೆದ ಕನ್ನಡಿಗರಲ್ಲಿ ಎ.ಆರ್.ಕೃ. ಅವರು ಮೊದಲನೆಯವರು. ಆ ಸಂದರ್ಭದಲ್ಲಿ ಬಂಗಾಳದ ಅಮೃತ ಬಜಾರ್ ಪತ್ರಿಕೆಯವರು ಒಂದು ಹೇಳಿಕೆಯನ್ನಿತ್ತು, “ಒಬ್ಬ ಬೆಂಗಾಲಿ ಮಾಡಲಾಗದ ಕೆಲಸವನ್ನು, ಬೆಂಗಾಲಿಯಬಗ್ಗೆ- ಮಾತೃಭಾಷೆ ಕನ್ನಡ ಆಗಿರುವ ಒಬ್ಬರು ಮಾಡಿರುವುದು- ಇಂಥ ಪುಸ್ತಕವನ್ನು ಬರೆದು, ಪುರಸ್ಕಾರ ಪಡೆಯುತ್ತಿರುವುದು ಶ್ಲಾಘನೀಯ” ಎಂದಿದ್ದು ಕನ್ನಡಕ್ಕೆ ಧಕ್ಕಿದ ಮಹಾಸಮ್ಮಾನವೇ ಆಗಿದೆ.

ಹೊಸಗನ್ನಡ ಭಾಷೆ ಸಾಹಿತ್ಯಗಳಲ್ಲಿ ಶಕ್ತಿ ಸತ್ತ್ವಗಳನ್ನು, ಸರಳತೆ ಸೌಲಭ್ಯಗಳನ್ನು, ಹೊಗರುಳ್ಳ ಹೊಸತನ ಹೃದ್ಯತೆಗಳನ್ನು ನಿರಂತರವಾಗಿ ತುಂಬುತ್ತ, ಅದಕ್ಕಾಗಿ ಯೋಧನಂತೆ ಹೋರಾಡಿ, ಭಕ್ತನಂತೆ ಹರಕೆಹೊತ್ತು, ಕನ್ನಡಯಾನ ಹಾಗೂ ಜೀವನಯಾನದಲ್ಲಿ ಸಾರ್ಥಕ್ಯವನ್ನು ಕಂಡ ಶಾಸ್ತ್ರಿಗಳ ಸಾಧನೆಯು ಮನನೀಯವಾದುದು. ಹೀಗೆ, ಕನ್ನಡದ ಶ್ರೇಷ್ಠ ಅಧ್ಯಾಪಕ, ಪತ್ರಿಕಾಸಂಪಾದಕ, ಲೇಖಕ, ವಾಗ್ಮಿ, ವಿದ್ವಾಂಸ, ಪ್ರಸಾರಕ, ಸಂಘಟಕ ಮೊದಲಾದ ಬಹುಮುಖಗಳಲ್ಲಿ ಶ್ರದ್ಧೆ ಉತ್ಸಾಹಗಳಿಂದ ದುಡಿದು ಕನ್ನಡದ ಪುನರುಜ್ಜೀವನವನ್ನು ಸಾಧಿಸಿದ ಮಹನೀಯರು ಅವರು. ಅವರ ಸಾಧನೆಗಳು ಈಗ ಬರಿಯ ಚರಿತ್ರೆಯ ವಿಷಯಗಳಾಗಿಲ್ಲ, ಫಲ ಕೊಡುತ್ತಿರುವ ಕಲ್ಪವೃಕ್ಷಗಳಾಗಿವೆ.

ಎ.ಆರ್.ಕೃ. ಅವರು ಗಹನವೂ ಸೂಕ್ಷ್ಮವೂ ಆದ ಪ್ರಜ್ಞಾಪಾರಮಿತ ಗುಣವುಳ್ಳ ಸಂಶೋಧಕರೆಂಬುದಕ್ಕೆ ಪ್ರಸ್ತುತ ಲೇಖನವೇ ಸಾಕ್ಷಿ. ಅವರ ಪ್ರತೀ ಲೇಖನದಂತೆಯೇ ಈ ಲೇಖನವೂ ಅವರ ಒಂದೊಂದು ಆಳವಾದ ಪಾಂಡಿತ್ಯದಿಂದ ಹಾಗೂ ಪ್ರಬುದ್ಧ ಪರಾಮರ್ಶೆಯಿಂದ ತುಂಬಿ ತುಳುಕುತ್ತಿದೆ. ಕನ್ನಡ ಶಾಸ್ತ್ರಿಯ ಪಠ್ಯಗಳಲ್ಲಿ ಒಂದಾದ ಕವಿ ರಾಘವಾಂಕ ವಿರಚಿತ “ಹರಿಶ್ಚಂದ್ರ ಕಾವ್ಯ ಸಂಗ್ರಹ’’ದಲ್ಲಿ ಬರುವ ‘ಸಂಬಳಿಗೋಲು’ ಎಂಬ ಮಾತಿನ ಅರ್ಥವನ್ನು ನಿಕಷಕ್ಕೆ ಒಡ್ಡುತ್ತಾ, ಪದವೊಂದು ರೂಪುಗೊಂಡಿರುವ ಸಾಂಸ್ಕೃತಿಕ ಹಿನ್ನೆಲೆಯನ್ನು ಹಾಗೂ ಸಾಂಸ್ಕೃತಿಕ ಪದವೊಂದಕ್ಕೆ ಇರಬಹುದಾದ ಬಹು ಅರ್ಥಗಳನ್ನು ಶೋಧಿಸಿರುವ ಮಹತ್ವಪೂರ್ಣ ಲೇಖನವಿದು. “ಹರಿಶ್ಚಂದ್ರ ಕಾವ್ಯ ಸಂಗ್ರಹ’’ದ ಸಂಪಾದಕರು ನೀಡದ ಅರ್ಥವನ್ನು ಇಟ್ಟುಕೊಂಡೇ, ಅದೇ ಕಾವ್ಯದಲ್ಲಿ ಇತರ ಸಂದರ್ಭದಲ್ಲಿ ಬರುವ ಸಂಬಳಿ ಸಂಬಂಧದ ಪದಾರ್ಥಗಳನ್ನು ಮತ್ತು ಕನ್ನಡದ ಇತರ ಕಾವ್ಯಸಂದರ್ಭಗಳಲ್ಲಿ ಮೂಡಿಬಂದಿರುವ ಸಂಬಳಿ ಪದಾರ್ಥ ವೈವಿಧ್ಯತೆಯನ್ನು ಇಲ್ಲಿ ಶೋಧಿಸಿಕೊಟ್ಟಿದ್ದಾರೆ. ಸಂಬಳಿ ಎಂಬುದು ದ್ರಾವಿಡಮೂಲದ ಪದವೇ? ಅಥವಾ ಉತ್ತರದ ಮಹಾರಾಷ್ಟ್ರಿ ಮೂಲದ್ದೇ? ಎಂದು ಎ.ಆರ್.ಕೃ ಅವರು ನಡೆಸಿರುವ ಭಾಷಿಕ-ಭೌಗೋಳಿಕ-ಸಾಂಸ್ಕೃತಿಕ ಜಿಜ್ಞಾಸೆಯು ಅರ್ಥಪೂರ್ಣ. ಈ ಮೂಲಕ ‘ಸಂಬಳಿ’ ಹಾಗೂ ‘ಸಂಬಳಿಗೋಲು’ ಕುರಿತು ಇರಬಹುದಾದ ಹೆಚ್ಚಿನ ಸಂಶೋಧನಾ ಸಾಧ್ಯತೆಯತ್ತ ಮಾರ್ಗದರ್ಶನ ದೊರೆಯುತ್ತದೆ.

Downloads

Published

05.01.2024

How to Cite

A. R. KRISHNASHASTRY, & BYRAPPA M. (2024). ಸಂಬಳಿಗೋಲು. AKSHARASURYA, 3(01), 01–19. Retrieved from http://aksharasurya.com/index.php/latest/article/view/292

Issue

Section

ಹಿಂದಣ ಹೆಜ್ಜೆ. | TRODDEN PATH