ಕಳಚೂರಿ ಬಿಜ್ಜಳ
Keywords:
ಕಳಚೂರಿ, ಬಿಜ್ಜಳ, ಬಸವಣ್ಣ, ವಚನವಾಙ್ಮಯ, ವಚನಕ್ರಾಂತಿ, ಸಾಮಾಜಿಕ ಆಂದೋಲನ, ರಾಯಮುರಾರಿ ಸೋವಿದೇವ, ಸಿಂದಬಿಜ್ಜಳ, ಅಳಿಯ ಬಿಜ್ಜಳ, ವೀರಬಿಜ್ಜಣAbstract
ಕನ್ನಡ ಸಾಹಿತ್ಯದ ಕಾಲಗತಿಯಲ್ಲಿ 12ನೇ ಶತಮಾನಕ್ಕೆ ಮಹತ್ವದ ಸ್ಥಾನವುಂಟು. ಈ ಕಾಲದ ಪೂರ್ವದ ಮಹತ್ವದ ಕವಿಗಳಾದ ಪಂಪ, ರನ್ನಾದಿಗಳು ಸಂಸ್ಕೃತಭೂಯಿಷ್ಠ ಮಾರ್ಗಗನ್ನಡದಲ್ಲಿ ತಮ್ಮ ಕಾವ್ಯಗಳನ್ನು ರಚಿಸಿದ್ದರು. ಅದು ಅಂದಿನ ಪರಿಸರದ ಪ್ರೇರಣೆ ಹಾಗೂ ಒತ್ತಡವೂ ಆಗಿರಬಹುದು.
ಇದಾದ ಒಂದೆರಡು ಶತಮಾನಗಳಲ್ಲಿ ಕನ್ನಡದ ಮಾರ್ಗಕಾವ್ಯ, ದೇಸಿತನಕ್ಕೆ ತಿರುಗಿ, ಅಚ್ಚಗನ್ನಡದ ಸೊಗಸನ್ನು ಪಡೆದದ್ದು ಆಶ್ಚರ್ಯದ ಸಂಗತಿ. ‘ವಚನಗಳು’ ಎಂಬ ಪ್ರಕಾರವೊಂದು ಕನ್ನಡ ನೆಲದ ಮೂಲಕ ಹುಟ್ಟಿ ವಿಶ್ವಮಾನ್ಯವಾದುದು ಈಗ ಇತಿಹಾಸ.
ಈ ವಚನಕ್ರಾಂತಿಯ ಕಾಲವು ಎರಡು ಕಾರಣಗಳಿಗೆ ಮಹತ್ವ ಪಡೆದುಕೊಂಡಿದೆ.
ವಚನ ವಾಙ್ಮಯ
ಸಾಮಾಜಿಕ ಆಂದೋಲನ ಮೊದಲನೆಯದು ಸಾಹಿತ್ಯಿಕ ದೃಷ್ಟಿಯಾದರೆ, ಎರಡನೆಯದು ಸಾಮಾಜಿಕ ದೃಷ್ಟಿ. 12ನೆಯ ಶತಮಾನದ ಈ ವಚನ ಕ್ರಾಂತಿಯ ಕಾಲವು ಸಾಮಾಜಿಕವಾಗಿ ಹಲವು ಸ್ಥಿತ್ಯಂತರಗಳಿಗೆ ಎಡೆ ಮಾಡಿಕೊಟ್ಟ ಕಾಲವಾಗಿದೆ. ಮುಖ್ಯವಾಗಿ ಬಸವಾದಿಗಳ ಹೊಸಕ್ರಾಂತ ದೃಷ್ಟಿಯ ವೀರಶೈವ ಧರ್ಮ ಆಗ ಮುನ್ನೆಲೆಗೆ ಬಂದು ಸಾಮಾಜಿಕ ಕ್ರಾಂತಿಗೆ ಕಾರಣವಾಯಿತು. ಈ ಅವಧಿಯಲ್ಲಿ ಈ ಬಸವಾದಿಗಳ ಕರ್ಮಕ್ಷೇತ್ರವಾಗಿದ್ದ ಕಲ್ಯಾಣವನ್ನು ಆಳುತ್ತಿದ್ದ ಅರಸು ಬಿಜ್ಜಳದೇವರಾಯ. ಇತಿಹಾಸ ಈತನ ಬಗ್ಗೆ ನೇತ್ಯಾತ್ಮಕ ದೃಷ್ಟಿಯಲ್ಲಿ ಹೆಚ್ಚಾಗಿ ಕಾಣಿಸಿದೆ. ಅಂದಿನ ವೀರಶೈವ ಕಾವ್ಯಗಳು ಕೂಡ ಈ ಬಗೆಗೆ ಸರಿಯಾದ ನ್ಯಾಯವನ್ನು ಒದಗಿಸಲಿಲ್ಲ. ಏಕಮುಖ ದೃಷ್ಟಿಯನ್ನು ಅವು ಬಿಂಬಿಸಿವೆ. ಇತಿಹಾಸ ಕೊರೆದಿಟ್ಟ ಗೆರೆಯಂತೆ ಎಂದೂ ಇರುವುದಿಲ್ಲ. ಅದನ್ನು ವಿಶದವಾಗಿ, ಸಾವಧಾನವಾಗಿ ಅಭ್ಯಸಿಸಿದರೆ ಮಾತ್ರ ಸತ್ಯ ದೊರೆತೀತು. ಈ ಸಂಶೋಧನಾ ಲೇಖನ ಕಳಚೂರಿ ಬಿಜ್ಜಳನ ಬಗೆಗೆ ನಿರಪೇಕ್ಷ ದೃಷ್ಟಿಯಿಂದ ನೋಡುವ ಪ್ರಯತ್ನವಾಗಿದೆ. ಸಾಹಿತ್ಯಪಠ್ಯಗಳು, ಐತಿಹಾಸಿಕ ಪರಿಕರಗಳು ಇದರ ಹಿನ್ನೆಲೆಗಿರುವುದು ಅಧ್ಯಯನಕ್ಕೆ ಸಮಗ್ರತೆ ಒದಗಿಸಿದೆ.