ಬೋರೇಗೌಡ ಚಿಕ್ಕಮರಳಿ ಅವರ ಕಥನ ಸಾಹಿತ್ಯದಲ್ಲಿ ದಲಿತ ಸಂವೇದನೆಯ ನೆಲೆ
Keywords:
ದಲಿತ, ಸಂವೇದನೆ, ಜಾತಿವ್ಯವಸ್ಥೆ, ಭೂಮಿ, ಪ್ರತಿಭಟನೆAbstract
ಬೋರೇಗೌಡ ಚಿಕ್ಕಮರಳಿ ಕಥನಗಳಲ್ಲಿ ಸಮಾಜದ ಜಾತಿವ್ಯವಸ್ಥೆಯ ತಾರತಮ್ಯದಿಂದಾಗಿ ತಳಸಮುದಾಯದವರ ಮೇಲಿನ ಶೋಷಣೆಗಳು, ಇವರ ನೋವುಗಳು, ಅಸ್ಪೃಶ್ಯತೆಯ ವರ್ತನೆಗಳು ಹೇಗೆ ಸಮಾಜದಲ್ಲಿ ಅಸ್ತಿತ್ವದಲ್ಲಿವೆ ಎಂಬುದನ್ನು ಕಾಣಬಹುದು. ಹಾಗೆಯೇ ಇವುಗಳ ವಿರುದ್ಧ ದಲಿತರ ಪ್ರತಿಭಟನಾ ಧೋರಣೆಗಳನ್ನು ತಮ್ಮ ಕಥನದಲ್ಲಿ ಚಿತ್ರಿಸಿರುವುದನ್ನು ಕಾಣಬಹುದು.
‘ನೆಲ್ಲೂರಿನಲ್ಲಿ ಒಂದು ದಿನ’ ಕಾದಂಬರಿಯಲ್ಲಿ ಕಾದಂಬರಿಕಾರರು ಜಮೀನ್ದಾರರು ಬಡವರ ಭೂಮಿಯನ್ನು ಮೋಸದಿಂದ ಕಸಿದುಕೊಂಡು ಅವರ ಮೇಲೆ ಹೇಗೆ ದೌರ್ಜನ್ಯಗಳನ್ನು ಎಸಗುತ್ತಾರೆ ಎನ್ನುವುದನ್ನು ಚಿತ್ರಿಸುತ್ತಾರೆ. ಕಾದಂಬರಿಯಲ್ಲಿನ ಪಾತ್ರವಾದ ಮಾದನ ತಂದೆ ಮಾಡಿದ ಸಾಲಕ್ಕೆ ಕ್ಯಾತೆಗೌಡನಿಗೆ ತನ್ನ ಭೂಮಿಯನ್ನು ಭೋಗ್ಯಕ್ಕೆ ನೀಡಿರುತ್ತಾನೆ. ಜಮೀನಿನ ಭೋಗ್ಯದ ಅವಧಿ ಕಳೆದ ಕಾರುಬೆಳೆಗೆ ಮುಗಿದಿತ್ತು. ಮಾದನಿಗೆ ಈಗ ಹೊಸ ಸಮಸ್ಯೆಗಳು ಹುಟ್ಟಿಕೊಂಡಿತ್ತು. ಕ್ಯಾತೇಗೌಡನಿಗೆ ತನ್ನ ಜಮೀನನ್ನು ಭೊಗ್ಯ ಕೊಟ್ಟಿದ್ದುದಕ್ಕೆ ಮಾದನ ತಂದೆ ಕಾಗದ ಪತ್ರಗಳ ಸಾಕ್ಷಿಯನ್ನು ಇಟ್ಟುಕೊಂಡಿರಲಿಲ್ಲ. ಅದು ಕೇವಲ ಬಾಯಿಮಾತಿನ ಒಪ್ಪಂದವಾಗಿತ್ತು. ಅವನು ಕೊಟ್ಟಿದ್ದ ಎರಡು ಸಾವಿರ ರೂಪಾಯಿಗಳಿಗೆ ಹತ್ತು ವರ್ಷಗಳ ಭೋಗ್ಯ ಅನುಭವಿಸಿದ್ದನು. ಆದರೆ ಈಗ ಕ್ಯಾತೇಗೌಡ ಮಾತು ತಪ್ಪಿ ಹದಿನೈದು ವರ್ಷಗಳ ಭೋಗ್ಯವನ್ನು ಮಾತಾಡಿತ್ತೆಂದು ಮಾದ ಹೊನ್ನೇಗೌಡರ ಬಳಿ ದೂರನ್ನು ಹೇಳಿಕೊಂಡಿದ್ದನು. ಹೊನ್ನೇಗೌಡರು ಸಹ ಜಮೀನಿಗೆ ಎತ್ತು ಕಟ್ಟಲು ಸೂಚಿಸಿ ತಮ್ಮ ಎತ್ತುಗಳನ್ನೆ ಮಾದನಿಗೆ ನೀಡಿದ್ದರು. ಆದರೆ ಕ್ಯಾತೇಗೌಡನಿಗೆ ಹೊನ್ನೇಗೌಡರ ಎತ್ತುಗಳು ಮಾದನ ಜಮೀನಿನಲ್ಲಿ ದುಡಿಯುವುದು ಇಷ್ಟವಿರಲಿಲ್ಲ. ಅವನಿಗೆ ಮಾದನ ಜಾತಿ ಅಡ್ಡವಾಗಿತ್ತು. ಆದರೆ ಮಾರನೆಯ ದಿನ ತಾನು ಬರುವುದಕ್ಕೆ ಮೊದಲೇ ಕ್ಯಾತೇಗೌಡರ ಎತ್ತುಗಳು ಮಾದನ ಜಮೀನಿನಲ್ಲಿ ದುಡಿಯುತ್ತಿದ್ದದ್ದು ಮಾದನ ಕೋಪಕ್ಕೆ ಕಾರಣವಾಯಿತು. ಕೇಳಲು ಹೋದರೆ ಕ್ಯಾತೇಗೌಡ ಮತ್ತವನ ಮಗ ನಂಜುಂಡ ಇವನ ವಿರುದ್ಧ ಜಗಳಕ್ಕೆ ನಿಂತರು.
ಹೀಗೆ ಒಟ್ಟಾರೆ ನೆಲ್ಲೂರಿನ ದಲಿತರ ಬದುಕು ಇತರೆಡೆಗಳಲ್ಲಿ ದಲಿತರ ಬದುಕಿನ ವಾಸ್ತವತೆಯನ್ನೆ ತೆರೆದಿಡುತ್ತದೆ. ದಲಿತರನ್ನು ಶೋಷಿಸುತ್ತಿರುವುದು ಬ್ರಾಹ್ಮಣವರ್ಗವೆಂದು ಚಿತ್ರಿಸುವ ಕನ್ನಡ ಸಾಹಿತ್ಯ ಈ ದಲಿತರ ಆರ್ಥಿಕ, ಸಾಮಾಜಿಕ ಶೋಷಣೆಗೆ ಮೂಲ ಕಾರಣ ಜಮೀನ್ದಾರರು ಎನ್ನುವ ಶ್ರಮಭಾಷೆಯ ಧೋರಣೆಗಳನ್ನು ವ್ಯಕ್ತಪಡಿಸುವುದು ಕಡಿಮೆ. ಹಾಗೊಂದು ವೇಳೆ ಶ್ರಮಸಂಸ್ಕೃತಿ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯವನ್ನು ಅವಲೋಕಿಸಿದರೆ ದಲಿತರ ಸಮಕಾಲೀನ ಪರಿಸ್ಥಿತಿಗೆ ಮೂಲ ಕಾರಣ ಜಮೀನ್ದಾರರ ಶೋಷಣೆಯೆನ್ನುವ ಸಾಮಾನ್ಯ ಅರಿವು ನಮಗುಂಟಾಗುತ್ತದೆ. ಪೌರೋಹಿತ್ಯ ವರ್ಗದ ವಿರುದ್ಧ ದಲಿತರನ್ನು ಎತ್ತಿಕಟ್ಟುವ ಬದಲು ಜಮೀನ್ದಾರರ ಶ್ರಮಭಂಜಕ ನಡವಳಿಕೆಯ ವಿರುದ್ಧ ಮಾತನಾಡಬೇಕಾದ ಪರಿಸ್ಥಿತಿ ಇಂದು ತಲೆದೋರಿದೆ. ಈ ಮಾತುಗಳಿಗೆ ಉದಾಹರಣೆಯಾಗಿ ನೆಲ್ಲೂರಿನ ಚಿತ್ರಣ ಕಂಡುಬರುತ್ತದೆ ಎನ್ನಬಹುದಾಗಿದೆ. ಸತ್ತವನ ಸುಳಿಯಲ್ಲಿ ಕತೆಯಲ್ಲಿ ಬರುವ ಹೊಲೆಯರ ರಾಚನ ಹಿನ್ನೆಲೆಯಲ್ಲಿ ಜಮೀನ್ದಾರರು ಹಾಗೂ ಹೊಲೆಯರ ಸಂಬಂಧ ಚಿಕ್ಕಂದಿನಿಂದ ದೊಡ್ಡವರತನಕ ಹೇಗೆ ಬೆಳೆದುಬರುತ್ತದೆ ಎನ್ನುವುದನ್ನು ತಿಳಿಸುತ್ತದೆ. ಹುಟ್ಟುತ್ತಾ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎನ್ನುವ ರೀತಿಯಲ್ಲಿ ಚಿಕ್ಕಂದಿನಲ್ಲಿ ಸ್ನೇಹಿತರು, ಬೆಳೆದ ಮೇಲೆ ಜಾತಿವಂತರು ಎನ್ನುವಂತಹ ಪರಿಸ್ಥಿತಿಯನ್ನು ದ್ಯಾವೇಗೌಡರ ಹಿನ್ನೆಲೆಯಲ್ಲಿ ರಾಚ ಈ ರೀತಿಯಲ್ಲಿ ವಿವರಿಸುತ್ತಾನೆ. ದೈಹಿಕ ಕೊಳಕಿಗಿಂತ ಮಾನಸಿಕ ಕೊಳಕು ದೊಡ್ಡದು. ಜಾತಿಯಿಂದ ಕೀಳಾಗಿದ್ದರೂ ರಾಚ ಗುಣದಲ್ಲಿ ದ್ಯಾವಪ್ಪನಿಗಿಂತಲೂ ಮೇಲು ಎನ್ನುವುದನ್ನು ಲೇಖಕರು ಇಲ್ಲಿ ಸ್ಪಷ್ಟವಾಗಿ ಚಿತ್ರಿಸುತ್ತಾರೆ. ಜಾತಿ ಮೇಲಾಗಿರುವುದಕ್ಕಿಂತಲೂ ಗುಣ ಮೇಲಾಗಿರಬೇಕು ಎನ್ನುವುದನ್ನು ಲೇಖಕರು ಮುಖ್ಯವಾಗಿ ಗುರುತಿಸುತ್ತಾರೆ.