ದ. ರಾ. ಬೇಂದ್ರೆಯವರ ಕಾವ್ಯದಲ್ಲಿ ಸ್ತ್ರೀ ಸಂವೇದನೆಯ ಭಿನ್ನ ನೆಲೆಗಳು
Keywords:
ನೆಲ, ಅನುಭವ, ಬೇಂದ್ರೆ, ತಾಯಿ, ಪ್ರೇಯಸಿ, ಮಡದಿ, ಮಗಳುAbstract
ಕನ್ನಡ ಸಂಸ್ಕೃತಿಯ ಒಂದು ಅವಿಭಾಜ್ಯ ಭಾಗವಾಗಿರುವ ದ.ರಾ. ಬೇಂದ್ರೆಯವರು ಕನ್ನಡವನ್ನು ಹಾಗೂ ಕನ್ನಡ ನಾಡನ್ನು ಅಖಂಡವಾಗಿ ಪ್ರೀತಿಸಿದ ಮಾಂತ್ರಿಕ ಕವಿ. ಬಡತನ, ಸಿರಿತನ ಕಡೆತನಕ ಉಳಿದಾವೇನ ಎಂಬುದು ಅವರ ದೃಷ್ಟಿಯಾಗಿತ್ತು. ‘ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ’ ಎಂಬ ಸಂಕಲ್ಪವು ಅವರ ಕಾವ್ಯದ ಮೂಲ ದೃಷ್ಟಿಯಾಗಿತ್ತು. ದೈತ್ಯ ಪ್ರತಿಭೆಯಾದ ಬೇಂದ್ರೆಯವರಿಗೆ ಉತ್ತರ ಕನ್ನಡದ ದೇಸಿ ಕೇವಲ ಉಪಭಾಷೆಯಾಗದೆ, ಒಂದು ಸಾಂಸ್ಕೃತಿಕ ಪರಂಪರೆಯ ಬಳುವಳಿಯಾಗಿ ಬಂದಿದೆ. ದೇಸಿ, ಗೇಯ, ರೂಪಗಳು ಮರಾಠಿ ಗೇಯ ರೂಪಗಳೊಂದಿಗೆ ಮೇಳೈಸಿಕೊಂಡು ಬೇಂದ್ರೆಯವರ ಕಾವ್ಯಕ್ಕೆ ಗೇಯತೆಯ ಸೊಬಗನ್ನು ಮೂಡಿಸಿವೆ. ಕುಣಿಯೋಣ ಬಾರಾ, ಗಮಗಮಾ ಗಮಾಡಿಸ್ತಾವ, ನಾದಲೀಲೆ, ಕುರುಡು ಕಾಂಚಾಣ, ನೀಹಿಂಗ ನೋಡಬ್ಯಾಡ ನನ್ನ ಇನ್ನಿತರ ಕವಿತೆಗಳು ಕವಚ ಕುಂಡಲಧಾರಿಯಾಗಿಯೇ ಹುಟ್ಟಿದ ಕರ್ಣನಂತೆ ಗೇಯತೆಯೊಂದಿಗೆ ಮೂಡಿ ಬಂದಿದೆ. ಇವರ ಕಾವ್ಯದಲ್ಲಿ ಜಾನಪದಪರಂಪರೆ ಮುಂದುವರೆದ ಸೂಚನೆಯಂತೆ ಕನ್ನಡದ ಕಾವ್ಯಭಾಷೆಯ ಸಾತತ್ಯವನ್ನು ಉಳಿಸುವ ಸಿದ್ಧಿಯು ನಡೆದಿದೆ. ಬದುಕೇ ಕಾವ್ಯವಾಗುತ್ತಾ ಹೋಗುವ ಪವಾಡ ಸದೃಶ್ಯ ಕ್ರಿಯೆ ಬೇಂದ್ರೆಯವರ ಕಾವ್ಯದ ವೈಶಿಷ್ಯವಾಗಿದೆ. ಭಾಷಣ ಮತ್ತು ಕಾವ್ಯವಾಚನದಲ್ಲಿ ಅಸದೃಶ್ಯವಾದ ಸೃಜನಶೀಲ ಪ್ರತಿಭೆಯನ್ನು ಬೇಂದ್ರೆಯವರು ಹೊಂದಿದ್ದರು. ಕವಿತೆಯನ್ನು ಸಹೃದಯದ ಹೃದಯಕ್ಕೆ ಮುಟ್ಟಿಸಬೇಕೆಂದು ಅವರ ಆಗ್ರಹವಾಗಿತ್ತು. ಸೃಜನಾತ್ಮಕವಾದ ಕಾವ್ಯ ವಾಚನ ಕ್ರಿಯೆಯನ್ನು ಹೊಂದಿದ್ದ ಬೇಂದ್ರೆಯವರು ಸದಾ ಕಾವ್ಯರಚನೆ, ವಿಮರ್ಶೆ, ನಾಟಕ, ಭಾಷಣಗಳು, ಹೃದಯಸಂವಾದ ಹಾಗೂ ಸಂಭಾಷಣೆಗಳ ಮುಖೇನಾ ಸದಾ ಚೈತನ್ಯಮಯವಾಗಿ ಚುರುಕಾಗಿದ್ದರು. ತಾಯಿಯನ್ನು ವಿಶ್ವಮಾತೆಯಾಗಿ, ಭೂಮಾತೆಯಾಗಿ, ಭಾರತಮಾತೆಯಾಗಿ ಕಾಣುತ್ತಾ, ಗೌರವ ಆದರದಿಂದ ತಮ್ಮ ಕವನಗಳಲ್ಲಿ ಚಿತ್ರಿಸಿದ್ದಾರೆ ಹೆಣ್ಣು ಶಕ್ತಿಸ್ವರೂಪಣಿಯಾಗಿದ್ದು, ಬದುಕಿನಲ್ಲಿ ಬರುವ ಸಂಕಷ್ಟಗಳನ್ನು ಎದುರಿಸುತ್ತಾ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಮಗಳಾಗಿ, ತಾಯಿಯಾಗಿ, ಹೆಂಡತಿ ಮತ್ತು ಸಹೋದರಿಯಾಗಿ ಸ್ತ್ರೀಯರನ್ನು ಕಾವ್ಯದಲ್ಲಿ ಬೇಂದ್ರೆಯವರು ಕಟ್ಟಿಕೊಟ್ಟಿದ್ದಾರೆ, ಅವರ ಕಾವ್ಯದಲ್ಲಿ ಸ್ತ್ರೀ ಸಂವೇದನೆಯ ಬಹುಮುಖ ಚಿಂತನೆಗಳನ್ನು ಕಾಣಬಹುದಾಗಿದೆ.