ಸಿ. ಎನ್. ಮುಕ್ತಾರವರ ಕಾದಂಬರಿಗಳಲ್ಲಿ ವಿವಾಹ ವಿಚ್ಛೇದನ-ಒಂದು ವಿಮರ್ಶಾತ್ಮಕ ನೋಟ.
Keywords:
ವೈವಾಹಿಕ ಜೀವನ, ಪಾಶ್ಚಾತ್ಯ ಸಂಸ್ಕೃತಿ, ಹಿಂದೂ ವಿವಾಹ ಪದ್ಧತಿ, ಸಾಮಾಜಿಕ ವಿಘಟನೆ, ಬ್ರಹ್ಮಗಂಟು, ಸಂಸ್ಕಾರ ವಿಧಿ, ಶೋಷಣೆAbstract
ಮುಕ್ತಾರವರ ಕಾದಂಬರಿಗಳ ಸ್ತ್ರೀ ಸಂವೇದನೆಯ ನೆಲೆಯನ್ನು ಗ್ರಹಿಸುವಲ್ಲಿ ವಿವಾಹ ವಿಚ್ಛೇದನ ಪರಿಕಲ್ಪನೆ ಒಂದು ಉತ್ತಮ ವಸ್ತು ವಿಷಯವಾಗಿ ಪರಿಣಮಿಸಿದೆ. ಇಂಗ್ಲಿಷ್ ಶಿಕ್ಷಣ ಪದ್ಧತಿಯ ಮೂಲಕ ಆಧುನಿಕತೆಯ ನದಿಯಲ್ಲಿ ಮಿಂದೆದ್ದ ಮಹಿಳೆಯ ಜೀವನದಲ್ಲಿ ಹೊಸ ಬದುಕಿನ ಸಾಧ್ಯತೆಗಳು ಮತ್ತು ಅವಕಾಶಗಳು ತೆರೆದುಕೊಂಡಿವೆ. ಸಂಪ್ರದಾಯಬದ್ಧ ಮುಸುಕಿನ ತೆರೆಯಿಂದ ಹೊರಬಂದ ಮಹಿಳೆ, ಇಂದು ತನ್ನ ಸುತ್ತಲಿನ ವ್ಯೂಹವನ್ನು ಭೇದಿಸಿ, ಪುರುಷರೊಂದಿಗೆ ಸರಿಸಮಾನವಾಗಿ ಬದುಕುವ ಆತ್ಮಸ್ಥೈರ್ಯವನ್ನು ಪಡೆದುಕೊಂಡಿದ್ದಾಳೆ. ಹೀಗೆ ಮಹಿಳೆಯರ ಬದಲಾದ ಬದುಕಿನ ದಾರಿಯಲ್ಲಿ ವಿವಾಹ ಬಾಂಧವ್ಯವು ಬಂಧನವಾಗಿ ಪರಿಣಮಿಸಿದಾಗ, ಅದನ್ನು ಸಹಿಸಿ ದಾಂಪತ್ಯ ಮುಂದುವರೆಸುವ ಮತ್ತು ಹೊಸತನವನ್ನು ಅರಸಿ ವಿವಾಹ ವಿಚ್ಛೇದನ ಪಡೆಯುವ ಅತಂತ್ರ ಸ್ಥಿತಿ ಮಹಿಳೆಯರನ್ನು ಕಾಡಿದೆ. ಮುಕ್ತಾರವರು ಇಂತಹ ಒಳವೈರುಧ್ಯಗಳನ್ನು ಕೇಂದ್ರವಾಗಿರಿಸಿಕೊಕೊಂಡು ಆಧುನಿಕ ಮಹಿಳಾ ಪಾತ್ರಗಳನ್ನು ತಮ್ಮ ಕಾದಂಬರಿಯಲ್ಲಿ ಸೃಷ್ಟಿಸಿದ್ದಾರೆ.
ವಿವಾಹ ಮೌಲ್ಯಗಳನ್ನು ರೂಢಿಸಿಕೊಂಡ ಮಹಿಳೆಯರ ಬದುಕಿನಲ್ಲಿ ವಿವಾಹ ವಿಚ್ಛೇದನವು ರೂಪಿಸಿದ ದ್ವಂದ್ವ, ತಾಕಲಾಟಗಳನ್ನು ಬಹಳ ಹತ್ತಿರದಿಂದ ಗ್ರಹಿಸಿದ ಲೇಖಕಿ ಆಧುನಿಕತೆಯ ನಡೆ-ನುಡಿ, ಆಚಾರ-ವಿಚಾರಗಳ ಇತಿಮಿತಿಯಲ್ಲಿ ವಿಚಾರವಂತಿಕೆಯ ನೆಲೆಯ ಜೀವನ ಶೈಲಿಯಲ್ಲಿ ತಮ್ಮ ಕಾದಂಬರಿಗಳ ಸ್ತ್ರೀ ಪಾತ್ರಗಳನ್ನು ಪರಾಮರ್ಶಿಸಿದ್ದಾರೆ. ಸಂಪ್ರದಾಯವಾದಿ ಮನೆತನದವರಾದ ಮುಕ್ತಾರವರು ತಮ್ಮ ಕಾಲಘಟ್ಟದ ಸಮಾಜದಲ್ಲಿ ಜರುಗುತ್ತಿದ್ದ ವಿವಾಹ ವಿಚ್ಛೇದನದ ಬಗೆಗಿನ ಪರ ಮತ್ತು ಪ್ರತಿರೋಧದ ನೆಲೆಗಳನ್ನು ತಮ್ಮ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಆ ಹಿನ್ನಲೆಯಲ್ಲಿ ಸಂಪ್ರದಾಯವಾದಿಗಳು ವಿವಾಹ ವಿಚ್ಛೇದನದ ಬಗೆಗೆ ತಳೆದಿದ್ದ ಮನೋಭಾವ, ವಿವಾಹ ವಿಚ್ಛೇದನಕ್ಕೆ ನೀಡಿದ ಪ್ರತಿಕ್ರಿಯೆ ಮತ್ತು ಆಧುನಿಕತೆಯೆಡೆಗೆ ಮನಸ್ಸು ಮಾಡಿದ ಜನತೆ ವಿವಾಹ ವಿಚ್ಛೇದನಕ್ಕೆ ನೀಡಿದ ಪ್ರೋತ್ಸಾಹದ ಪರಿಯನ್ನು ಈ ಲೇಖನದಲ್ಲಿ ಅಧ್ಯಯನಕ್ಕೆ ಒಳಪಡಿಸಿ ಸಮಾಜದ ಬದಲಾದ ಕಾಲಘಟ್ಟದ ಸ್ಥಿತ್ಯಂತರಗಳೊಂದಿಗೆ ವಿಶ್ಲೇಷಿಸಲಾಗಿದೆ.