ಲಲಿತಾ ಸಿದ್ದಬಸವಯ್ಯನವರ ಇನ್ನೊಂದು ಸಭಾಪರ್ವ – ತಾತ್ವಿಕ ವಿಶ್ಲೇಷಣೆ.
Keywords:
ಮಾನವ ಭಾಷೆ, ಇನ್ನೊಂದು ಸಭಾಪರ್ವ, ಉಪ ಪಾಂಡವರು, ದುಶ್ಯಾಸನನ ಪಾಪಪ್ರಜ್ಞೆAbstract
ಮಹಾಭಾರತದಲ್ಲಿ ಪ್ರತಿ ನಾಯಕತ್ವಕ್ಕೆ ಅವಕಾಶವೇ ಇಲ್ಲದಂತಹ ಒಂದು ಪಾತ್ರವೂ ಇದೆ. ಅದು “ದ್ರೌಪದಿಯ” ಪಾತ್ರ ಆ ಪಾತ್ರದ ವ್ಯಕ್ತಿತ್ವ ಶಕ್ತಿ ಇದೆಯಲ್ಲ ಯಾರು ಯಾವ ದೃಷ್ಟಿಕೋನದಿಂದ ಅರ್ಥೈಸಿದರು ದ್ರೌಪದಿಯ ಪಾತ್ರದ ವ್ಯಕ್ತಿತ್ವವನ್ನು ಅಲ್ಪ ಸ್ವಲ್ಪ ಕದಲಿಸಬಹುದೇ ಹೊರತು ದುರ್ಬಲಗೊಳಿಸಲು ಆಗುವುದಿಲ್ಲ. “ಇನ್ನೊಂದು ಸಭಾಪರ್ವ” ನಾಟಕದಲ್ಲಿ ದ್ರೌಪದಿಯ ವ್ಯಕ್ತಿತ್ವವನ್ನು ‘ಬೆಳಗಿಸುವ’ ‘ಶುದ್ಧೀಕರಿಸುವ’ ರೂಪದಲ್ಲಿ ಕಂಡುಕೊಳ್ಳಲಾಗಿದೆ, ದ್ರೌಪದಿಯ ಸೀರೆಯನ್ನು ತುಂಬಿದ ಸಭೆಯಲ್ಲಿ ಸೆಳೆದಾಗ ಹತ್ತಿಕೊಂಡ ಜ್ವಾಲೆ ವ್ಯಾಪಿಸಿ ಕೊಳ್ಳಬೇಕಾಗಿತ್ತಲ್ಲವೇ ಅದು ಬೆಳಗಿಸುವ ರೂಪವನ್ನು ಪಡೆದುಕೊಂಡದ್ದು ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರ “ತಾಯ್ತನ”. ಅದನ್ನು ಈ ಕೃತಿಯು ಹುಡುಕಾಡಿದೆ ಕಂಡುಕೊಂಡ ಉತ್ತರವೂ ಹೌದು. ಬಹುಶಃ ಜೀವನ ಸಂದರ್ಭದಲ್ಲಿ ಕಂಡು ಕೊಳ್ಳಬಹುದಾದ ಉತ್ತರವೂ ಹೌದು. ಇಲ್ಲಿ ಬಳಸಿದ ಭಾಷೆ ಮಾನವ ಭಾಷೆಯ ವಿನ್ಯಾಸದಲ್ಲಿದೆ. ಅದರಿಂದಾಗಿಯೇ ಇಲ್ಲಿ ಉಪಪಾಂಡವರಿಗೆ ಪ್ರಾಮುಖ್ಯತೆ ಬಂದಿದೆ. ದೀರ್ಘ ಮಹಾಭಾರತದಲ್ಲಿ ತಾಯಿಯಾದ ದ್ರೌಪದಿಯು ತನ್ನ ಮಕ್ಕಳ ಬಗ್ಗೆ ಎಂದು ಎಲ್ಲೂ ಯೋಚಿಸುವುದೇ ಇಲ್ಲ. ರಾಜ ಭಾಷೆಯಲ್ಲಿ ಮಹಾಭಾರತವನ್ನು ಸ್ವೀಕರಿಸುವಾಗ ಇದು ಒಂದು ಊನತೆ ಎನ್ನುವುದು ಹೊಳೆಯುವುದೇ ಇಲ್ಲ. ಆದರೆ ಮಾನವಭಾಷೆ ಬಳಕೆಯಾದಾಗ ಇದೆಲ್ಲ ಮುಖ್ಯವಾಗಿ ಬಿಡುತ್ತದೆ. ಈ ಪ್ರಯತ್ನ ಇಲ್ಲಿ ಚೆನ್ನಾಗಿ ನಡೆದಿದೆ. ಮಾನವ ಭಾಷೆಯ ಜೊತೆ ಜೊತೆಗೆ ಉಪ ಪಾಂಡವರು ಮುಖ್ಯವಾಗುವುದರೊಂದಿಗೆ ಯಾಕೆ ಅವರು ನಿರ್ಲಕ್ಷಿಸಲ್ಪಟ್ಟರು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಅದರೊಂದಿಗೆ ಅವರ ತಂದೆಯಂದಿರ ವಿಭಿನ್ನ ಹಿತಾಸಕ್ತಿಗಳು ಹೊಳೆಯುತ್ತದೆ ಈ ಎಲ್ಲದರ ಆಚೆ ನಾಟಕವು ಒಂದು ಸತ್ಯವನ್ನು ಹೇಳಲು ತೊಡಗುತ್ತದೆ, ಅದೇನೆಂದರೆ “ಒಳ್ಳೆಯವರಾಗಿರುವುದೆಂದರೆ ನಮ್ಮ ಮೇಲೆ ನಡೆಯುವ ಶೋಷಣೆಯನ್ನು ಅನುಭವಿಸಿಕೊಂಡೆ ಬಾಳುವುದಲ್ಲ” ಎಂಬ ಮಾತನ್ನು ಮಾರ್ಮಿಕವಾಗಿ ಧ್ವನಿಸುತ್ತದೆ.