ನಾ. ಡಿಸೋಜರವರ ‘ದ್ವೀಪ’: ವಸ್ತು ವಿನ್ಯಾಸ.
Keywords:
ಮುಳುಗಡೆ, ಭೂಸ್ವಾಧೀನ, ದ್ವೀಪ, ನಿರಾಶ್ರಿತರು, ಪ್ರೀತಿ, ತಲ್ಲಣ, ಬದುಕು, ಪ್ರಕೃತಿAbstract
ಕನ್ನಡ ಕಥನ ಸಾಹಿತ್ಯದಲ್ಲಿ ಮುಳುಗಡೆ ಸಮಸ್ಯೆಯನ್ನು ಕುರಿತು ರಚನೆಯಾದಂತಹ ಕಥೆಗಳು ಬಹಳ ಕಡಿಮೆ. ಸಾರ್ವಜನಿಕ ಕಾಮಗಾರಿಗಳಿಂದ ನಿರಾಶ್ರಿತರಾದ ಜನತೆಯ ತಲ್ಲಣಗಳನ್ನು ಕುರಿತು ರಚನೆಯಾದ ಕಥಾ ಸಾಹಿತ್ಯವೂ ಕಡಿಮೆ. ಪ್ರಸ್ತುತ ‘ದ್ವೀಪ’ ಕೃತಿಯು ಮುಳುಗಡೆ ಸಮಸ್ಯೆಯನ್ನು ಕುರಿತು ಮಾತನಾಡುತ್ತದೆ. ಮುಳುಗಡೆ ಆಗಲಿರುವ ಪ್ರದೇಶದಲ್ಲಿ ಎಲ್ಲರಿಗೂ ಪರಿಹಾರ ಸಿಕ್ಕಿ ಗಣಪಯ್ಯನಿಗೆ ಮಾತ್ರ ಪರಿಹಾರ ಸಿಕ್ಕಿಲ್ಲ ಎಂದು ಹೇಳುತ್ತಲೇ ಆರಂಭವಾಗುವ ಕಾದಂಬರಿಯು ನೇರವಾಗಿ ಕೇಂದ್ರ ಸ್ಥಾನಕ್ಕೆ ಪ್ರವೇಶ ಪಡೆಯುತ್ತದೆ. ಅಣೆಕಟ್ಟೆಯ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಮುಗಿದ ನಂತರವೂ ಗಣಪಯ್ಯನ ಸಂಸಾರಕ್ಕೆ ಪರಿಹಾರ ದೊರೆಯುವುದಿಲ್ಲ. ಕನ್ನಡ ಕಾದಂಬರಿ ಪ್ರಪಂಚದಲ್ಲಿ ಪ್ರಕೃತಿಯೇ ಒಂದು ಪಾತ್ರವಾಗಿ ಬಂದದ್ದು ತೀರ ಅಪರೂಪ. ರಾಷ್ಟ್ರಕವಿ ಕುವೆಂಪು ಅವರ ಕಾದಂಬರಿಗಳಲ್ಲಿ, ಕಥೆಗಳಲ್ಲಿ, ಶಿವರಾಮ ಕಾರಂತ, ಯು. ಆರ್. ಅನಂತಮೂರ್ತಿ, ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಕೆಲವು ಕಾದಂಬರಿಗಳಲ್ಲಿ ತುಂಬಾ ಪರಿಣಾಮಕಾರಿಯಾಗಿ ಬಳಸಲ್ಪಟ್ಟ ನಿದರ್ಶನಗಳಿವೆ. ಕನ್ನಡ ಸಿನಿಮಾ ರಂಗದಲ್ಲಂತೂ ಪ್ರಕೃತಿ ಕೇವಲ ಹಿನ್ನೆಲೆಯಾಗಿ ಬಂದಿದೆ. ಪ್ರಕೃತಿ ಒಂದು ಪಾತ್ರವಾಗಿ ಬಂದ ನಿದರ್ಶನವೇ ಇಲ್ಲ. ‘ದ್ವೀಪ’ ದಲ್ಲಿ ಅಂತಹ ಸಾಧ್ಯತೆಗಳಿವೆ. ‘ದ್ವೀಪ’ ಕೃತಿಯನ್ನು ಸಿನಿಮಾ ಮಾಡಿದ ನಟಿ, ನಿರ್ಮಾಪಕಿ ಸೌಂದರ್ಯ ಅವರ ಧೈರ್ಯವನ್ನು ಮೆಚ್ಚಲೇಬೇಕು. ಸೀಮಿತ ಮಾರುಕಟ್ಟೆ ವ್ಯಾಪ್ತಿಯನ್ನು ಹೊಂದಿರುವ ಕನ್ನಡ ಚಿತ್ರರಂಗದಲ್ಲಿ ಕಲಾತ್ಮಕ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗುವುದಿಲ್ಲವೆಂಬ ವಿಚಾರ ತಿಳಿದಿದ್ದರೂ ಅವರು ‘ದ್ವೀಪ’ ಸಿನಿಮಾವನ್ನು ನಿರ್ಮಿಸುತ್ತಾರೆ. ‘ದ್ವೀಪ’ ಕತೆಯೂ ಅಲ್ಲ, ಕಾದಂಬರಿಯೂ ಅಲ್ಲ. ಅದೊಂದು ಶ್ರೇಷ್ಠ ನೀಳ್ಗತೆ. ‘ದ್ವೀಪ’ ನೀಳ್ಗತೆಯ ಮತ್ತೊಂದು ವಿಶೇಷತೆ ಎಂದರೆ ಅಧ್ಯಾಯಗಳಿಗೆ ಮಳೆಯ ಹೆಸರನ್ನಿಟ್ಟಿರುವುದು. ಏಳು ಅಧ್ಯಾಯಗಳಿವೆ. ಏಳು ಮಳೆಯ ಹೆಸರುಗಳನ್ನಿಡಲಾಗಿದೆ.