ಸಾಹಿತ್ಯ ಮತ್ತು ಸಮಾಜದ ಸಂಬಂಧ.
Keywords:
ಸಾಹಿತ್ಯ, ಸಮಾಜ, ಮೌಲ್ಯ, ಚಳವಳಿAbstract
ಸಾಹಿತ್ಯ ಮನುಷ್ಯನ ಆತ್ಮ ಶುದ್ಧಿಗೆ ಇರುವಂತಹ ಅಕ್ಷರ ರೂಪ. ಸಾಹಿತಿ ಸಮಾಜದ ಒಂದು ಭಾಗವಾಗಿರುವುದರಿಂದ, ಆತ ತನ್ನ ಅಂತಃಚಕ್ಷುವಿನಿಂದ ಜಗದ ಎಲ್ಲ ವಿದ್ಯಮಾನಗಳನ್ನು ಗಮನಿಸಿ, ತನ್ನ ವಿಚಾರಶಕ್ತಿಯಿಂದ ಒಳಿತು ಕೆಡುಕನ್ನು ಕುರಿತ ಸಮಾಜದ ಅಭ್ಯುದಯಕ್ಕೆ ಬೇಕಾದ ಏನೆಲ್ಲ ಸಲಹೆಗಳನ್ನು ಸಾಹಿತ್ಯದ ಮೂಲಕ ತಿಳಿಸುತ್ತಾನೆ. ಅದು ಕಲ್ಪನೆಯ ಕೂಸಲ್ಲ. ಕಾಲದಿಂದ ಕಾಲಕ್ಕೆ ಸಾಹಿತಿಗಳು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನಪಟ್ಟಿದ್ದಾರೆ. ಅಕ್ಷರಗಳು ಆತ್ಮ ಶೋಧನೆಗೆ ಅವಕಾಶ ಮಾಡಿಕೊಡಬೇಕು, ಅವುಗಳ ಮೂಲಕ ಅರಿವು ವಿಸ್ತರಿಸಿ, ಆತ್ಮವಿಶ್ವಾಸ ಬೆಳೆಸಿ ಸಮಾಜದಲ್ಲಿ ಅಹಂಕಾರ ಕಡಿಮೆ ಮಾಡುತ್ತಾ ಸದೃಢ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ಸಾಹಿತ್ಯ ಸಮಾಜಶಾಸ್ತ್ರ ಮತ್ತು ಇತಿಹಾಸಕ್ಕಿಂತ ಭಿನ್ನವಾದದ್ದು. ಸಮಾಜಶಾಸ್ತ್ರಜ್ಞ ಗಮನಕೊಡದ ಒಳಬಾಳಿಗೂ ಸಾಹಿತ್ಯ ಗಮನ ಕೊಡುತ್ತದೆ. ಇತಿಹಾಸ ಭೂತವನ್ನು ಹಿಡಿದಿಟ್ಟಿರುವ ಒಂದು ದಾಖಲೆಯೂ ಆಗಿರುತ್ತದೆ. ಆದ್ದರಿಂದ ಸಾಹಿತ್ಯ ಸಮಾಜ – ವ್ಯಕ್ತಿಗಳ ಬದುಕಿನೊಂದಿಗೆ ಬೆರೆತ ಚೌಕಟ್ಟು. ಕತ್ತಲ ರೂಪದಲ್ಲಿ ಕೊಳೆಯುತ್ತಿರುವ ಕನಸುಗಳು ಇಲ್ಲದೆ ನರಳುತ್ತಿರುವ ಜನತೆಗೆ, ಸಮಾಜಕ್ಕೆ ಒಂದು ತಿರುವನ್ನು ಕೊಡುವುದು, ಅಲ್ಲಿನ ಬದಲಾವಣೆಗೆ ಪ್ರಯತ್ನಿಸುವುದು ಸಾಹಿತ್ಯದ ಆದ್ಯ ಕರ್ತವ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಜನಪದರು, ಪ್ರಾಚೀನ ಕವಿಗಳು, ವಚನಕಾರರು, ಕೀರ್ತನಕಾರರು, ಆಧುನಿಕ ಕನ್ನಡ ಕವಿಗಳು ಸಾಹಿತ್ಯ ಪ್ರಕಾರಗಳ ಮೂಲಕ ‘ಏಕಾಂತತೆಗೀತ ಲೋಕಾಂತ ಅಗತ್ಯ’ ಎಂಬ ಸಂದೇಶವನ್ನು ಸಾಹಿತ್ಯದ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಸಾಹಿತ್ಯದ ಮುಖ್ಯ ಉದ್ದೇಶ ಬದುಕು ಹಸನಾಗಬೇಕು, ಸಮಾಜ ನೆಮ್ಮದಿಯುತವಾಗಿರಬೇಕು, ಮೋಸ, ವಂಚನೆ, ಅಂಧಕಾರ, ಮೌಢ್ಯದಿಂದ ಹೊರಬಂದು, ವೈಚಾರಿಕತೆಯ ಮೂಲಕ, ಶಾಂತಿ, ಸೌಹಾರ್ದತೆಯಿಂದ ಬಾಳ ಬೇಕೆಂಬ ಸಂದೇಶವನ್ನು ಸಾಹಿತ್ಯದ ಮೂಲಕ ನೀಡುತ್ತಾ ಬಂದಿದ್ದಾರೆ.