ವಿವೇಕ ಶಾನುಭಾಗರ ‘ಹುಲಿ ಸವಾರಿ’ ಮತ್ತು ಜಾಗತೀಕರಣ.
Keywords:
ಗುಂಟಿ, ಸಾಂಸ್ಕೃತಿಕ ಬದುಕು, ಸ್ವಾವಲಂಬಿ, ಆಮಿಷ, ಕೌರ್ಯ, ಮೇಳೈಸು, ವ್ಯಕ್ತಿತ್ವ, ಕೈಗನ್ನಡಿAbstract
ಭಾರತದಲ್ಲಿ ಜಾಗತೀಕರಣವು ಜನರ ಜೀವನಮಟ್ಟದಲ್ಲಿ ಮಹತ್ತರವಾದ ಬದಲಾವಣೆಯನ್ನು ತಂದಿತು ಎಂಬುದರಲ್ಲಿ ಸಂದೇಹವಿಲ್ಲ. ಜಗತ್ತಿನಾದ್ಯಂತ ಜನರು ಜಾಗತೀಕರಣದಿಂದ ಅನೇಕ ದುಷ್ಪಪರಿಣಾಮಗಳನ್ನು ಎದುರಿಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಗಡಿಬಿಡಿಯ ಬಾಳಿನಲ್ಲಿ ಕೈಗಾರಿಕರಣ, ಖಾಸಗೀಕರಣ, ಕಂಪ್ಯೂಟರೀಕರಣ ಮತ್ತು ಜಾಗತೀಕರಣಗಳು ಮನುಷ್ಯನನ್ನು ಬಿಗಿದಪ್ಪಿಕೊಂಡಿವೆ. ಮಾನವೀಯತೆಯ ಮೂಲಜಲವೇ ಬತ್ತಿಹೋಗುತ್ತಿರುವ ಅಪಾಯ ಎದುರಾಗುತ್ತಿದೆ. ಅಂತಃಕರಣವಿಲ್ಲದ ಬದುಕು ಮರುಭೂಮಿಯಗುತ್ತಿದೆ. ದೇಶಿ ಸಂಸ್ಕೃತಿಯನ್ನು ಜಾಗತಿಕರಣದ ಭೂತ ಮುಕ್ಕುತ್ತಿದೆ. ಭೂಮಿಯನ್ನೇ ನಂಬಿಕೊಂಡಿದ್ದ ರೈತರು ಖಾಸಗೀಕಣದ ಸಂಕೋಲೆಯಲ್ಲಿ ಸಿಲುಕಿ ತೊಳಲುತ್ತಿದ್ದಾರೆ. ಭೂಮಿ ತಾಯಿಯ ಮಕ್ಕಳು ಅನಾಥರಾಗಿ ಬದುಕುತ್ತಿದ್ದಾರೆ. ಉಳ್ಳವರು ಮತ್ತು ಇಲ್ಲದವರ ನಡುವೆ ಅಂತರ ನಿರ್ಮಾಣವಾಗಿದೆ.
ಅವಸರದ ನಡುವೆ ಬದುಕಿಗೆ ಬೇಕಾದ ಮೂಲ ದ್ರವ್ಯವನ್ನೇ ಕಳೆದುಕೊಂಡು ಬದುಕು ಕಟ್ಟಿಕೊಳ್ಳಲು ಹೊರಟಿರುವ ಚಿತ್ರಣವನ್ನು ಕೊಳ್ಳುಬಾಕ ಸಂಸ್ಕೃತಿಯ ಮೂಲಕ ತೆರೆದು ತೋರುವ ರೀತಿ ಭಿನ್ನವಾಗಿದೆ. ದೇಸಿಯ ಆಹಾರ ಪದ್ದತಿಗಳು ಮಾಯವಾಗಿ ಅನಾರೋಗ್ಯಕ್ಕೆ ಗುರಿ ಮಾಡುವ ರಾಸಾಯನಿಕ ಆಹಾರ ಪದಾರ್ಥಗಳು ದೇಹ ಸೇರುತ್ತಿವೆ. ವಿದೇಶಿ ಖಾದ್ಯ ತಿನಿಸುಗಳಿಗೆ ದಾಸರಾಗಿರುವ ಯುವ ಜನಾಂಗವು ಖಿನ್ನತೆ ಕೋಪ, ಭಯ, ತಲ್ಲಣ, ತಳಮಳ ಮತ್ತು ಆತ್ಮವಿಶ್ವಾಸವಿಲ್ಲದ ಪರಿಸ್ಥಿತಿಗೆ ಒಳಗಾಗುತ್ತಿದ್ದಾರೆ.
ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ ಮಾನವಪರ ಹೋರಾಟಗಳು ನೆಲಗಚ್ಚುತ್ತಿವೆ. ಜಾಗತೀಕರಣ ಮನುಷ್ಯನ ಬದುಕುವ ಹಕ್ಕನ್ನು ಕಸಿದುಕೊಂಡಿದೆ. ರೈತಪರ ಹೋರಾಟಗಳು ಸ್ವಾರ್ಥಿಗಳ ಪಾಲಾಗಿ ರೈತರು ದಿಕ್ಕೆಟ್ಟಿದ್ದಾರೆ. ಬಂಡವಾಳಶಾಹಿಗಳು ರೈತರಿಗೆ ಆಸೆ ತೋರಿಸಿ ಭೂಮಿ ಕಸಿಯುತ್ತಿದ್ದಾರೆ. ರೈತರ ಭೂಮಿಗಳು ಕೈಗಾರಿಕೆಗಳಾಗಿ ಖಾಸಗಿ ಬಡಾವಣೆಗಳಾಗಿ ಪರಿವರ್ತನೆಗೊಂಡು ಅನ್ನದಾತನೆಂದು ಕರೆಸಿಕೊಂಡ ರೈತ ಅನ್ನ ಇಲ್ಲದವನಾಗುತ್ತಿರುವುದು ದುರಂತ.