ಯಶೋಧರ ಚರಿತೆಯ ವಿಮರ್ಶೆಯ ವಿಮರ್ಶೆ.
Keywords:
ಯಶೋಧರ ಚರಿತೆ, ಜೈನ, ಯಶೋಧರ, ಅಮೃತಮತಿ, ಜನ್ನAbstract
ಕನ್ನಡದ ಸಾಹಿತ್ಯ ಚರಿತ್ರೆಯಲ್ಲಿ ಜನ್ನನ ಯಶೋಧರ ಚರಿತೆ ಕನ್ನಡದ ಉತ್ತಮ ಕಾವ್ಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಆದರೂ ಇದೊಂದು ಧರ್ಮದ ಕುರಿತು ಚರ್ಚಿಸುವ ಕಾವ್ಯವೆಂದೂ ಭವಾವಳಿಯ ನೀರಸ ನಿರೂಪಣೆಯಿಂದಾಗಿ ಏರಬೇಕಾದ ಎತ್ತರಕ್ಕೆ ಏರಿಲ್ಲವೆಂದೂ ಕನ್ನಡದ ವಿಮರ್ಶಕರು ಒಮ್ಮತದಿಂದ ಅಭಿಪ್ರಾಯಕ್ಕೆ ಬಂದಿದ್ದಾರೆ. ಆದ್ದರಿಂದ ಈ ಯಶೋಧರ ಚರಿತೆ ಕಾವ್ಯದ ಯಶಸ್ವಿನ ಕಡೆ ಸಾಗಲು ಕಾರಣವೆಂದರೆ ಯಶೋಧರ ಅಮೃತಮತಿಯರ ಪ್ರಣಯ ಕಥೆಯಲ್ಲಿದೆ ಎಂಬ ಭಾವನೆ ಸಾರ್ವತ್ರಿಕವಾಗಿರುವಂತಿದೆ. ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಅನೇಕ ಕಾವ್ಯಗಳಂತೆ ‘ಯಶೋಧರ ಚರಿತೆ’ ಕಾವ್ಯ ಕುರಿತು ಕನ್ನಡದಲ್ಲಿ ವಿಪುಲವಾದ ಚರ್ಚೆಗಳು ಅಭಿಪ್ರಾಯಗಳು ನಡೆದಿವೆ. ಹೀಗಾಗಿ ೨೦ನೇ ಶತಮಾನದ ಕನ್ನಡದ ಪ್ರಮುಖ ವಿಮರ್ಶಕರೆಲ್ಲೂರು ಒಂದಿಲ್ಲೊಂದು ಬಗೆಯಲ್ಲಿ ಮುಖಾಮುಖಿಯಾಗಿಸಿದ್ದಾರೆ. ಈ ಕೃತಿಯನ್ನು ಅರ್ಥಮಾಡಿಕೊಳ್ಳಲು ಭಿನ್ನ ಭಿನ್ನ ತಾತ್ವಿಕ ನೆಲೆಯಲ್ಲಿ ಅನೇಕ ವಿಮರ್ಶಕರು ನಡೆಸಿದ ಯಶೋಧರ ಚರಿತೆಯ ಕಾವ್ಯ ಪ್ರಣಯ ಪ್ರಸಂಗಗಳ ಬೌದ್ಧಿಕ ವ್ಯಾಖ್ಯಾನಗಳು ಅಭಿಪ್ರಾಯಗಳು ಇಲ್ಲಿ ಚರ್ಚೆ ಮಾಡಲಾಗಿದೆ.
ಮನುಷ್ಯನ ಜೀವನದಲ್ಲಿ ನಡೆಯುವಂತಹ ಯಾವುದೇ ಘಟನೆ ಅದರಲ್ಲೂ ವಿಶೇಷವಾಗಿ ಕಾಮ ಪ್ರೇಮಕ್ಕೆ ಸಂಬಂಧಿಸದಂತಹ ಘಟನೆ ಯಾವುದೇ ಸಾಹಿತ್ಯ ಕೃತಿಯಲ್ಲಿ ಹೆಚ್ಚು ಮೂಡಿಬಂದಾಗ ಅದು ಹೆಚ್ಚು ಓದುಗರ ಮತ್ತು ವಿಮರ್ಶೆಕರ ಮನಸ್ಸನ್ನು ಸಹಜವಾಗಿ ಸೆಳೆಯುತ್ತದೆ. ಜನ್ನನ ಯಶೋಧರ ಚರಿತೆ ಕಾವ್ಯ ‘ಅಷ್ಟಾವಂಕ ಅಮೃತಮತಿಯರ ಅಧಾರ್ಮಿಕ ಸಂಬಂಧ, ಅಂದರೆ ಪರಸ್ತ್ರೀ ಪರಪುರುಷ ಪರಸ್ಪರ ಒಲಿಯುವಂತಹ ಸಂಬಂಧವಾಗಲಿ ವರ್ತಮಾನ ಕಾಲದ ಜೀವನದಲ್ಲಿಯೂ ವಿರಳವಾಗಿಯೂ ಕಂಡುಬರುವಂತದ್ದು. ಇದೊಂದು ಸಾಮಾಜಿಕ ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ಯಶೋಧರ ಚರಿತೆ ಕಾವ್ಯವನ್ನು ಜೀವನದ ಮೂಲಭೂತ ಸಮಸ್ಯೆ ಎಂದು ವಿಮರ್ಶಕರು ಪರಿಗಣಿಸಿದ್ದಾರೆ ಎಂದು ಹೇಳಬಹುದು.