ಕುವೆಂಪು ಕಾವ್ಯದಲ್ಲಿ ಪರಿಸರ ಮೌಲ್ಯ.
Keywords:
ದೇವರು, ಸೌಂದರ್ಯ, ಧರ್ಮ, ಪ್ರಕೃತಿ, ಸಾಹಿತ್ಯ, ಕಾವ್ಯAbstract
ಕುವೆಂಪು ಅವರ ಕವಿತೆಗಳಲ್ಲಿ ಪ್ರಕೃತಿ ಕವನಗಳು ಮನಸ್ಸು ಸೆರೆ ಹಿಡಿದು ವಿಚಾರದ ಕಡೆಗೆ ತೆರಳುತ್ತವೆ. ಪ್ರಕೃತಿ ಕೇವಲ ಜಡವಲ್ಲ, ಸೌಂದರ್ಯ ಸಾಕ್ಷಾತ್ಕಾರದ ಮೂಲಕ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಕರೆದೊಯ್ಯುವ ಸಾಧನ. ಪ್ರಕೃತಿಯಾರಾಧನೆಯೆ ಪರಮನಾರಾಧನೆ, ಪ್ರಕೃತಿಯೊಲ್ಮೆಯೆ ಮುಕ್ತಿಯಾರಾಧನೆ. ನಗರ ಜೀವನದ ಬೇಸರ, ಯಾಂತ್ರಿಕತೆಯ ಜೀವನ, ಹಸುರಿನಿಂದ ವಂಚಿತವಾಗಿರುವ ಕವಿಯ ಮನೋಧರ್ಮವನ್ನು ಕಾಣಬಹುದು. ಪ್ರಕೃತಿಯಲ್ಲಿಯೇ ಪೂಜೆಯನ್ನು ಕಾಣುತ್ತಾರೆ. ಹೂಗಳನ್ನು ಕೀಳುವ ಪೂಜಾರಿಯ ಮೇಲೆ ಆಕ್ರೋಶ ಕಡುವಾಗಿಯೇ ಮೂಡಿಬಂದಿದೆ. ಹೂಗಳನ್ನು ಕಿತ್ತು ಕಗ್ಗಲ್ಲಿನ ಕಗ್ಗತ್ತಲೆಗೆ ಹೊಯ್ದು ಗುಡಿಯ ಶಿವನಿಗೆ ಇಟ್ಟರೆ ಪರಮಾತ್ಮನಿಗೆ ತೃಪ್ತಿ ಬರುವುದಿಲ್ಲ ಎಂಬುದು ಅವರ ಭಾವನೆ. ಪೂಜಾರಿಯನ್ನು ಹಕ್ಕಿಗಳ ಕೊರಳು ಮುರಿಯುವ ಬೇಟೆಗಾರನಿಗೆ ಹೋಲಿಸಿದ್ದಾರೆ. ಸೌಂದರ್ಯದಿಂದ ಕೂಡಿರುವ ಹೂಗಳನ್ನು ಕೀಳುವುದು ಕವಿಗೆ ಇಷ್ಟವಿಲ್ಲ. ಸಹಜವಾದ ಸೌಂದರ್ಯವೇ ಶಿವ. ಕುವೆಂಪುರವರದು ಸೌಂದರ್ಯ ಧರ್ಮ, ದೇವಾಲಯ, ದೇವರು, ಪೂಜೆ, ಧರ್ಮ ಇತ್ಯಾದಿಗಳ ಬಗ್ಗೆ ಇರುವ ಸಾಂಪ್ರದಾಯಿಕ ಕಲ್ಪನೆಗಳನ್ನು ನಿರಾಕರಿಸಿ ಅವುಗಳ ಸ್ಥಾನದಲ್ಲಿ ಪ್ರಕೃತಿ ಸೌಂದರ್ಯವನ್ನು ಸ್ಥಾಪಿಸಿದರು.