ಮಹಿಳಾ ಸಣ್ಣಕಥೆಗಳಲ್ಲಿ ಹೆಣ್ಣಿನ ಅನನ್ಯತೆಯ ಅಭಿವ್ಯಕ್ತಿ

Authors

  • ಸವಿತಾ ಬಿ.

Abstract

ಸ್ವಾಭಿಮಾನಿ ಮಹಿಳೆಯೊಬ್ಬಳು ತಾನು ತನ್ನನ್ನು ವ್ಯಾಖ್ಯಾನಿಸಿಕೊಳ್ಳಬೇಕಾದರೆ ‘ನಾನು ಒಬ್ಬ ಹೆಂಗಸು’ ಎಂದು ಮೊದಲು ಹೇಳಿಕೊಳ್ಳಬೇಕಾಗುತ್ತದೆ. ಮಲಯಾಳದ ಕಥೆಗಾರ್ತಿ ಚಂದ್ರಮತಿಯವರ ಒಂದು ಕಥೆ ಆರಂಭವಾಗುವ ರೀತಿಯೆಂದರೆ; ‘ನಾನು ದೇವಿಗ್ರಾಮದ ಹೆಣ್ಣು, ಇದು ನನ್ನ ಗ್ರಾಮ’ ಎಂದು. ಇಲ್ಲಿ ‘ನಾನು’ ಎನ್ನುವ ಆತ್ಮಾಭಿಮಾನ, ಆತ್ಮಗೌರವ ಇದುವೇ ಹೆಣ್ಣಿನ ಅನನ್ಯತೆಯನ್ನು ವ್ಯಕ್ತಪಡಿಸುತ್ತದೆ. ಆಧುನಿಕ ಜೀವನದ ಸಂದರ್ಭದಲ್ಲಿ ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಸ್ವಾವಲಂಬನೆ ಕುಟುಂಬದ, ಅದರಲ್ಲೂ ಹೆಣ್ಣಿನ ಜೀವನದ ಮೇಲೆ ಪ್ರತ್ಯಕ್ಷವಾಗಿಯೇ ಪ್ರಭಾವ ಬೀರುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಕುಟುಂಬದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿರುವ ಹೆಣ್ಣಿನ ಸಂದರ್ಭದಲ್ಲಿ ‘ಸ್ವಾಭಿಮಾನ’ ಪರಿಕಲ್ಪನೆಯನ್ನು ಅನ್ವಯಿಸಿಕೊಂಡು ಅಧ್ಯಯನ ಕೈಗೊಳ್ಳಬೇಕಾದ ಅಗತ್ಯ ಇಂದಿನ ಸಾಹಿತ್ಯಕ್ಕಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನಲ್ಲಿ ‘ಸ್ವಾಭಿಮಾನ’ ಪದಕ್ಕೆ ತನ್ನ ಬಗೆಗಿನ ಅಭಿಮಾನ, ಆತ್ಮಾಭಿಮಾನ ಎನ್ನುವ ಅರ್ಥ ವಿವರಣೆಯಿದ್ದರೆ, ‘ಸ್ವಾಭಿಮಾನಿ’ ಪದಕ್ಕೆ ಸ್ವಾಭಿಮಾನವುಳ್ಳವನು, ತನ್ನ ಗೌರವವನ್ನು ಕಾಪಾಡಿಕೊಳ್ಳುವವನು ಎನ್ನುವ ಅರ್ಥವಿದೆ.ಸಾಂಪ್ರದಾಯಿಕ ಸಮಾಜದಲ್ಲಿ ಮಹಿಳೆಯರು ಕುಟುಂಬದಲ್ಲಿ ಪುರುಷಾಧೀನರಾಗಿ, ಸ್ವಾಭಿಮಾನವೇ ಇಲ್ಲದವರಾಗಿ, ಅನ್ಯರಾಗಿ, ತಮ್ಮನ್ನು ತಾವು ಕಳೆದುಕೊಂಡವರಾಗಿ ಜೀವಿಸಿರುವುದೇ ಹೆಚ್ಚು. ಆದರೆ ಬದಲಾದ ಕಾಲದಲ್ಲಿ ಶಿಕ್ಷಣ, ಉದ್ಯೋಗ, ಆರ್ಥಿಕ ಸ್ವಾವಲಂಬನೆ ಪಡೆದವರಾದ ಸ್ತ್ರೀಯರು ತಮ್ಮ ಅಧೀನ ಸ್ಥಿತಿಯ ಕಾರಣಗಳನ್ನು ಅರಿತುಕೊಂಡು ಶೋಷಣೆಗೆ ತಲೆಬಾಗದ ಪ್ರಜ್ಞೆಯಿಂದಲೇ ಜೀವನವನ್ನು ಎದುರಿಸುತ್ತಿರುವುದು ಲೇಖಕಿಯರ ಕಥೆಗಳಲ್ಲಿ ವ್ಯಕ್ತವಾಗಿವೆ. ಸ್ತ್ರೀಯರಿಗೆ ದೊರಕಿದ ಶಿಕ್ಷಣದ ಅವಕಾಶ, ಅದರಿಂದ ಉಂಟಾದ ತನ್ನತನದ ಅರಿವು, ಅದರ ಫಲವಾಗಿ ಹೆಚ್ಚಾದ ಕೌಟುಂಬಿಕ, ಬೌದ್ಧಿಕ ತರ್ಕಗಳಲ್ಲಿ ತನ್ನತನವನ್ನು ಬಿಟ್ಟುಕೊಡಲು ತಯಾರಿಲ್ಲದ ಮಹಿಳೆಯರು ಪ್ರಸ್ತುತ ಕುಟುಂಬದಿಂದ ಹೊರಬಂದು ಸಮಾಜವನ್ನು ಮೀರಿನಿಂತು ಒಂಟಿ ಬದುಕನ್ನು ಕಟ್ಟಿಕೊಳ್ಳುವ ಅಥವಾ ದೃಢನಿರ್ಧಾರ ತೆಗೆದುಕೊಂಡು ತನ್ನ ಬದುಕನ್ನು ಹಸನುಗೊಳಿಸುವ ಮಟ್ಟಿಗೆ ಮುಂದುವರಿದಿರುವುದು ವಾಸ್ತವಿಕ ಸತ್ಯವೇ ಆಗಿದೆ. ಇನ್ನೊಂದು ಕಡೆ, ಸ್ತ್ರೀಯರು ಸಾಂಗತ್ಯವಿಲ್ಲದ ಕುಟುಂಬದಿಂದ ದೂರ ಸರಿದು ಸಂಬಂಧಗಳ ಶಿಥಿಲತೆಗೆ ಕಾರಣರಾಗುತ್ತಿದ್ದಾರೆ ಎನ್ನುವ ಅಪವಾದವನ್ನು ಎದುರಿಸುವ ಪರಿಸ್ಥಿತಿಯು ಅವರಿಗೆ ಎದುರಾಗಿದೆ. ಆದ್ದರಿಂದಲೇ ಲೇಖಕಿಯರು ತಮ್ಮ ಕಥೆಗಳ ಮೂಲಕ ಹೆಣ್ಣಿನಲ್ಲಿ ಉಂಟಾದ ಸ್ವಾಭಿಮಾನದ ಸ್ಥಿತಿಯು ಸಂಬಂಧಗಳ ಶಿಥಿಲತೆಗೆ ಕಾರಣಗಳಾಗದೆ, ಹೇಗೆ ಬದುಕಿನಲ್ಲಿ ಸುಧಾರಣೆ, ಸಂಬಂಧಗಳ ನವೀಕರಣದ ಶೋಧನೆ ನಡೆಸಬಹುದೆಂಬುದಾಗಿ ಕಥೆಗಳ ಮೂಲಕ ಅನ್ವೇಷಣೆ ನಡೆಸಿದ್ದಾರೆ.

Downloads

Published

05.12.2022

How to Cite

ಸವಿತಾ ಬಿ. (2022). ಮಹಿಳಾ ಸಣ್ಣಕಥೆಗಳಲ್ಲಿ ಹೆಣ್ಣಿನ ಅನನ್ಯತೆಯ ಅಭಿವ್ಯಕ್ತಿ. AKSHARASURYA, 1(03), 48 to 55. Retrieved from http://aksharasurya.com/index.php/latest/article/view/22

Issue

Section

Article