ಚದುರಂಗ ಅವರ ‘ನಾಲ್ಕು ಮೊಳ ಭೂಮಿ’ ಕಥೆಯಲ್ಲಿನ ಸಮಕಾಲೀನ ತಲ್ಲಣಗಳು.
Keywords:
ಭೂಮಿ, ಭೂ ಸಂವೇದನೆ, ಹಿಡುವಳಿ, ಒತ್ತುವರಿ, ಕಂದಾಯ, ವ್ಯಾಜ್ಯAbstract
ಕನ್ನಡ ಕಥನ ಸಾಹಿತ್ಯದಲ್ಲಿ ಭೂ ಸಂವೇದನೆಯನ್ನು ಕುರಿತ ಕೆಲವು ಕಥೆಗಳಲ್ಲಿ ‘ನಾಲ್ಕು ಮೊಳ ಭೂಮಿ’ ಕಥೆ ವಿಭಿನ್ನವಾಗಿ ನಿಲ್ಲುತ್ತದೆ. ಭೂಸಂವೇದನೆಯನ್ನು ಕುರಿತು ಪ್ರಕಟವಾಗಿರುವ ಬಹುತೇಕ ಕಥೆಗಳು ಸರ್ಕಾರಿ ಜಮೀನಿನ ಮಂಜೂರಾತಿ, ಅಕ್ರಮ ಖಾತಾ ವರ್ಗಾವಣೆ, ಸರ್ಕಾರಿ ಯೋಜನೆಗಳಿಗಾಗಿ ಭೂಸ್ವಾಧೀನ ಪ್ರಕ್ರಿಯೆ. ವಿಭಾಗ ಪತ್ರಗಳಲ್ಲಿನ ನ್ಯೂನತೆಗಳು ಇತ್ಯಾದಿ ವಿಷಯಗಳಿಗೆ ಸಂಬಂಧಪಟ್ಟವು. ಆದರೆ ನಾಲ್ಕು ಮೊಳ ಭೂಮಿ ಅಕ್ರಮ ಭೂ ಒತ್ತುವರಿಯನ್ನು ಕುರಿತು ಮಾತಾಡುತ್ತದೆ.
ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಗೆ ಅಳತೆಗೆಂದು ಸಲ್ಲಿಕೆಯಾಗುವ ಹೆಚ್ಚಿನ ಅರ್ಜಿಗಳು ಹದ್ದುಬಸ್ತಿಗೆ ಸಂಬಂಧಪಟ್ಟವು. ಸಾರ್ವಜನಿಕರ ಅಸಹಕಾರ, ಅರ್ಜಿದಾರರ, ಬಾಜುದಾರರ ಅನಕ್ಷರತೆ, ದೌರ್ಬಲ್ಯ, ರಾಜಕೀಯ ಹಸ್ತಕ್ಷೇಪ, ಇತ್ಯಾದಿ ಕಾರಣಗಳಿಂದ ಎಲ್ಲಾ ಅರ್ಜಿಗಳಿಗೂ ನ್ಯಾಯದೊರಕಿಸಿಕೊಡಲು ಸಾಧ್ಯವಾಗುತ್ತಿಲ್ಲ. ಹಿಡುವಳಿ ಭೂಮಿಯ ಒತ್ತುವರಿಯನ್ನು ತೆರವುಗೊಳಿಸುವ ಅಧಿಕಾರ ತಹಸೀಲ್ದಾರ್‌ರವರಿಗೆ ಇಲ್ಲದ ಕಾರಣದಿಂದ ಅಕ್ರಮ ಹಿಡುವಳಿ ಜಮೀನುಗಳ ಭೂ ಒತ್ತುವರಿಯನ್ನು ತೆರವುಗೊಳಿಸುವುದು ಕಷ್ಟ ಸಾಧ್ಯವಾಗಿದೆ. ಅಕ್ಷರಸ್ಥ ರೈತರು ಅಕ್ಕಪಕ್ಕದ ಜಮೀನಿನ ರೈತರ ಜೊತೆ ವಿಶ್ವಾಸ ಹಾಳಾಗಬಾರದೆಂಬ ಕಾರಣಕ್ಕೆ ಜಮೀನುಗಳನ್ನು ಅಳತೆ ಮಾಡಿಸುವ ಗೋಜಿಗೆ ಹೋಗುವುದಿಲ್ಲ.
ಕಂದಾಯ ಇಲಾಖೆ ಯಾವುದೇ ಹೊಸನಿಯಮಗಳನ್ನು ಜಾರಿಗೆ ತಂದರೂ ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರುವುದರಿಂದ ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಕಂದಾಯ ಇಲಾಖೆಯ ಕೆಲಸ ಕಾರ್ಯಗಳು ಅಷ್ಟು ಸುಲಭವಾಗಿ ಯಶಸ್ವಿಯಾಗುವುದಿಲ್ಲ. ಜಮೀನಿನ ಪೌತಿ ಖಾತೆಯ ವರ್ಗಾವಣೆಯ ಸಂದರ್ಭದಲ್ಲಿ ಕಡ್ಡಾಯವಾಗಿ ಮೃತ ವ್ಯಕ್ತಿಯ ಮರಣ ಪ್ರಮಾಣ ಪತ್ರವನ್ನು ಆರ್.ಡಿ.ಎಸ್. ವಂಶವೃಕ್ಷವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕಾಗುತ್ತದೆ. ವಂಶವೃಕ್ಷದಲ್ಲಿ ಕಡ್ಡಾಯವಾಗಿ ಮೃತವ್ಯಕ್ತಿಯ ಎಲ್ಲಾ ಹೆಣ್ಣುಮಕ್ಕಳ ಹೆಸರನ್ನು ಸೇರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕುಟುಂಬ ಕಲಹಗಳು ಹೆಚ್ಚಾಗುತ್ತವೆ.