ವಿವೇಕ ಶಾನಭಾಗರ ‘ಜಾಮೀನು ಸಾಹೇಬ’ ಕಥೆಯಲ್ಲಿನ ಸಮಕಾಲೀನ ತಲ್ಲಣಗಳು.
Keywords:
ಜಾಮೀನು, ದೈಹಿಕ ಕ್ಷಮತೆ, ಪುಢಾರಿ, ಸ್ತ್ರೀ ಶೋಷಣೆ, ಮೀಸಲಾತಿ, ನಿರುದ್ಯೋಗAbstract
ವಿವೇಕ ಶಾನಭಾಗರ ಜಾಮೀನು ಸಾಹೇಬ ಕಥೆಯು ಅವರ ಹುಲಿ ಸವಾರಿ ಕಥಾಸಂಕಲನದ ಪ್ರಮುಖ ಕಥೆಯಾಗಿದೆ. ನಿರುದ್ಯೋಗ ಸಮಸ್ಯೆಯ ತೀವ್ರತೆಯನ್ನು ಹೃದಯಕ್ಕೆ ತಾಗುವಾಗೆ ಬರಹದ ರೂಪಕ್ಕೆ ಇಳಿಸಿದ ಕಥೆ. ಬಡವರು, ಮಧ್ಯಮ ವರ್ಗದವರು, ಉನ್ನತ ಶಿಕ್ಷಣ ಪಡೆದರೂ ಓದಿದ ವಿದ್ಯಾರ್ಹತೆಗೆ ಸಮನಾದ ಕೆಲಸ ಪಡೆದುಕೊಳ್ಳಲಾಗದೆ, ತಾನು ಓದಿದ ಓದಿಗೂ ತಾನು ಮಾಡುತ್ತಿರುವ ಕೆಲಸಕ್ಕೂ ಸಂಬಂಧವೇ ಇಲ್ಲದೆ ಉದ್ಯೋಗದ ಬೆನ್ನುಹತ್ತಿ ಕಂಗಾಲಾಗಿ ಪರಿತಪಿಸುತ್ತಾ ಜೀವನ ನಿರ್ವಹಿಸಲು ಯಾವುದೋ ಉದ್ಯೋಗದ ಬೆಂಬತ್ತಿ ಸಾಗುತ್ತಿರುವ ಸಮಕಾಲೀನ ವಿದ್ಯಾವಂತರ ಬದುಕಿನ ತಲ್ಲಣಗಳನ್ನು ಪ್ರತಿಬಿಂಬಿಸುತ್ತದೆ.
ನಾಗತಿಹಳ್ಳಿಯವರ ‘ಅಮೇರಿಕಾ ಅಮೇರಿಕಾ’ ಕಾದಂಬರಿಯಲ್ಲಿ ಚಂದ್ರು ಇಂಜಿನಿಯರಿಂಗ್ ಮಾಡಿ ಉದ್ಯೋಗ ದೊರೆಯದೆ ಅಮೇರಿಕಕ್ಕೆ ತೆರೆಳುವುದು ಪ್ರತಿಭಾ ಪಲಾಯನವನ್ನು ಚಿತ್ರಿಸುತ್ತದೆ. ಸುಧಾಕರ ಅವರ ಉಸುಕು ಕಥೆಯ ರಾಮೇಗೌಡನ ವ್ಯಾಸಂಗದ ಚಿತ್ರಣವನ್ನು ಸುಧಾಕರ ಅವರು ಕಟ್ಟಿಕೊಡುವ ರೀತಿ ಮನಮಿಡಿಯುವಂತಿದೆ. ಹಳ್ಳಿಯ ಕಂದಾಚಾರದ, ಮೌಢ್ಯತೆಗಳ ವಿರುದ್ಧ ಹೋರಾಡಿ ಸಾಮಾಜಿಕ ನ್ಯಾಯದ ಪರ ಹಳ್ಳಿಯ ಜನರಲ್ಲಿ ಎಚ್ಚರಿಕೆ ಮೂಡಿಸಿದ ರಾಮೇಗೌಡನ ಸಾವಿಗೆ ಅದೇ ಹಳ್ಳಿಯ ಜನರೇ ಕಾರಣವಾಗುವ ಸ್ಥಿತಿ ವಿದ್ಯಾವಂತರಾಗಿ ಹಳ್ಳಿಯ ಜನರ ಬದುಕನ್ನು ಪರಿವರ್ತಿಸಲು ಹೊರಟ ಇಂದಿನ ಯುವ ಪೀಳಿಗೆಗೆ ಆತಂಕವನ್ನು ಹುಟ್ಟಿಸುತ್ತದೆ.
ಬೆಸಗರಹಳ್ಳಿ ರಾಮಣ್ಣ ಅವರ ‘ಪ್ರಜಾಪ್ರಭುತ್ವ ಮತ್ತು ಮೂರು ಮಂಗಗಳು’ ಕಥೆಯ ಮಂಚನ ಪಾತ್ರಕ್ಕೂ ಜಾಮೀನು ಸಾಹೇಬ ಕಥೆಯ ಕಥಾನಾಯಕನಾದ ದಯಾನಂದನ ಪಾತ್ರಕ್ಕೂ ತುಂಬಾ ಸಾಮ್ಯತೆಗಳಿವೆ. ಜಾಮೀನು ದಂಧೆ ನಡೆಸುವುದರಲ್ಲಿ ಆಸಕ್ತಿ, ಧೈರ್ಯ ಇಲ್ಲದಿದ್ದರೂ ಅನಿವಾರ್ಯವಾಗಿ ಜಾಮೀನು ದಂಧೆಯೊಳಗೆ ದಯಾನಂದ ಸಿಕ್ಕಿಕೊಳ್ಳುತ್ತಾನೆ. ಮಂಚ ಓದಿಗೆ ತಕ್ಕನಾದ ಸರಿಯಾದ ನೌಕರಿ ದೊರೆಯದೆ ಕೋತಿ ಆಡಿಸುವ ಕಸುಬನ್ನು ಮಾಡುವುದು, ಅದನ್ನು ಹಿಂಸೆಯೆಂಬ ನೆಪವೊಡ್ಡಿ ಪೋಲೀಸಿನವರು ಬಂಧಿಸುವ ರೀತಿ ಓದಿದ ವಿದ್ಯಾವಂತರ ಹೀನಾಯ ಬದುಕಿನ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುತ್ತದೆ. ಒಟ್ಟಾರೆಯಾಗಿ ಜಾಮೀನು ಸಾಹೇಬ ಕಥೆಯು ವಿದ್ಯಾವಂತರ ನಿರುದ್ಯೋಗ ಸಮಸ್ಯೆಯ ಬಗ್ಗೆ ಮಾತನಾಡುವ ಮನಮಿಡಿಯುವ ಕಥೆಯಾಗಿದೆ.