ಸಾಹಿತ್ಯ ಮತ್ತು ಚಿತ್ರಕಲೆಗಳ ಐತಿಹಾಸಿಕ ಬೆಳವಣಿಗೆ.
Keywords:
ಕನ್ನಡ ಸಾಹಿತ್ಯ, ಚಿತ್ರಕಲೆ, ಲಿಪಿ, ಚಿತ್ರಲಿಪಿ, ರೇಖಾಚಿತ್ರ, ಭಿತ್ತಿಚಿತ್ರ, ಕಲೆ, ಲಲಿತಕಲೆAbstract
ಚಿತ್ರಕಲೆ ಮತ್ತು ಸಾಹಿತ್ಯಗಳು ಮೂಲದಲ್ಲಿ ಶುದ್ಧ ಜನಪದೀಯವಾಗಿದ್ದವು. ಯಾವುದೇ ಶಿಸ್ತಿಗೆ ಒಳಪಡದ ಹಾಗೆ ಜನಸಾಮಾನ್ಯರ ವಲಯದಲ್ಲಿ ರಚನೆಯಾಗುತ್ತಿದ್ದವು. ಕೇವಲ ಚಿತ್ರಕಲೆ ಮತ್ತು ಸಾಹಿತ್ಯವಷ್ಟೇ ಅಲ್ಲ. ಎಲ್ಲ ಬಗೆಯ ಕಲಾಪ್ರಕಾರಗಳಿಗೂ ಈ ಮಾತು ಅನ್ವಯಿಸುತ್ತದೆ. ರಂಗಭೂಮಿಯು ಹೇಗೆ ಹುಟ್ಟಿಕೊಂಡಿತು ಎಂಬುದರ ಬಗ್ಗೆ ಕೆ.ವಿ.ಅಕ್ಷರ ಅವರು ಹೀಗೆ ಹೇಳಿದ್ದಾರೆ: “ನಾಟಕ ಸಾಹಿತ್ಯ, ಅಭಿನಯ, ರಂಗತಂತ್ರಗಳು ಮುಂತಾದ ಎಲ್ಲಾ ಅಂಗೋಪಾಂಗಗಳನ್ನು ಬೆಳೆಸಿಕೊಂಡ ಸಂಘಟಿತ ಮಾಧ್ಯಮಗಳನ್ನು ಮಾತ್ರ ನಾವು ‘ರಂಗಭೂಮಿ’ ಎಂದು ಕರೆಯುವುದಾದರೆ, ಅಂತಹ ರಂಗಭೂಮಿ ಹುಟ್ಟಿದ್ದು ತುಂಬ ತಡವಾಗಿ. ಅಂದರೆ, ಮೊದಲು ವಿಕಾಸಗೊಂಡ ಮನುಷ್ಯಜೀವಿಗಳಿಗಿಂತ ಎಷ್ಟೋ ಸಾವಿರ ವರ್ಷಗಳಷ್ಟು ತಡವಾಗಿ.” ಕಾಲಾಂತರದಲ್ಲಿ ಸಾಹಿತ್ಯ ಮತ್ತು ಚಿತ್ರಕಲೆಗಳು ವ್ಯವಸ್ಥಿತವಾಗಿ ರಚನೆಯಾಗಿ ಲಲಿತಕಲೆಗಳಲ್ಲಿ ಸ್ಥಾನಗಳಿಸಿದವು. ಆದರೆ ಈಗಾಗಲೇ ಚಿತ್ರಕಲೆ ಮತ್ತು ಸಾಹಿತ್ಯಗಳು ಪ್ರತ್ಯೇಕ ಕಲಾಶಿಸ್ತುಗಳಾಗಿ ಬೆಳವಣಿಗೆಯನ್ನು ಪಡೆದಿದ್ದವು. ಈ ಹಿನ್ನೆಲೆಯಲ್ಲಿ ಇಲ್ಲಿ ಚಿತ್ರಕಲೆ ಮತ್ತು ಸಾಹಿತ್ಯಗಳ ಬೆಳವಣಿಗೆಯ ಹಂತವನ್ನು ಗಮನಿಸುವ ಪ್ರಯತ್ನವನ್ನು ಮಾಡಲಾಗಿದೆ.