ಕನ್ನಡ ಡಿಜಿಟಲ್ ಸಾಹಿತ್ಯ: ಸವಾಲು ಮತ್ತು ಸಾಧ್ಯತೆಗಳು.
Abstract
೨೧ನೆಯ ಶತಮಾನದ ಕನ್ನಡ ಸಾಹಿತ್ಯದ ಚಟುವಟಿಕೆಗಳು ಈ ಹಿಂದಿನ ಸಾಹಿತ್ಯ ಘಟ್ಟಗಳ ಪ್ರೇರಣೆ ಮತ್ತು ಪ್ರಭಾವಗಳಿಂದಾಗಿ ಹಾಗೂ ಇಂದಿನ ಆಧುನಿಕತೆಯ ಅಗತ್ಯಕ್ಕನುಗುಣವಾಗಿ ವಿನೂತನವಾದ ಛಾಪಿನಿಂದ ವೈವಿಧ್ಯಮಯವಾಗಿ ಕಂಗೊಳಿಸುತ್ತಿದೆ. ಇದರ ಬಹುಪಾಲು ಆಶಯ ಸಾಹಿತ್ಯ ಪ್ರಚಾರದ ಜೊತೆಗೆ ಮಾಹಿತಿ ಹಂಚಿಕೆಯೂ, ಸಮಕಾಲೀನ ಸಾಮಾಜಿಕ ತಲ್ಲಣಗಳ ದನಿಯಾಗಿಯೂ, ಸಮಾಜದ ಅಸಮಾನತೆಗಳನ್ನು ಬಿಂಬಿಸುವ ಕನ್ನಡಿಯಾಗಿಯೂ, ಮೋಸ-ಭ್ರಷ್ಟಾಚಾರಗಳ ವಿರುದ್ಧದ ಕಿಡಿಯಾಗಿಯೂ, ಅಂಧಶ್ರದ್ಧೆ, ಕುರುಡು ನಂಬಿಕೆಗಳು, ಜಾತೀಯತೆ, ಆಧುನಿಕತೆಯ ತುಡಿತ ಮುಂತಾದ ಸಾಮಾಜಿಕ ಅಂಶಗಳನ್ನು ತನ್ನ ವಸ್ತುವಾಗಿ ಒಳಗೊಂಡು ನಾಗರೀಕತೆಯೊಂದಿಗೆ ಮಾನವೀಯತೆಯ ಸಮಾಜವನ್ನು ಕಟ್ಟುವ ನೆಲೆಯಲ್ಲಿ ಸಾಹಿತ್ಯದ ರಚನೆ ಮತ್ತು ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಾ ಬಂದಿವೆ. ಇದರ ಜೊತೆಗೆ ವಾಣಿಜ್ಯ, ವಿಜ್ಞಾನ, ಕ್ರೀಡೆ, ವೈದ್ಯಕೀಯ, ಶೈಕ್ಷಣಿಕ ಹೀಗೆ ಮಾಹಿತಿ ಪ್ರಧಾನ ಸಾಹಿತ್ಯವನ್ನು ಸಹ ೨೧ನೆಯ ಶತಮಾನದ ಕನ್ನಡ ಸಾಹಿತ್ಯದಲ್ಲಿ ಗುರುತಿಸಬಹುದು.