ರಾಘವೇಂದ್ರ ಪಾಟೀಲ್‌ರವರ ತೇರು ಕಾದಂಬರಿಯಲ್ಲಿನ ವಾಸ್ತವಿಕತೆಯ ಹೊಳಹುಗಳು.
Abstract
ರಾಘವೇಂದ್ರ ಪಾಟೀಲರು ರಚಿಸಿರುವಂತಹ ತೇರು ಕಾದಂಬರಿಯನ್ನು ಒಂದು ನೀಳ್ಗಯಂತೆಯೊ ಅಥವಾ ಒಂದು ಜಾನಪದ ಅಥವಾ ಜನಾಂಗಿಕ ಅಧ್ಯಯನದಂತೆಯೂ ನೋಡಬಹುದು. ತೇರು ಕೃತಿಯು ಧರಮನಟ್ಟಿ ದೆಸಗತಿಯ ಸ್ಥಾಪನೆಯ ಕಾಲದಿಂದಲೇ ಪ್ರಾರಂಭವಾಗುತ್ತದೆ. ಹೊಸ ದೇಸಾಯಿ ಧರಮಟ್ಟಿಯಲ್ಲಿ ತನ್ನ ಮನೆ ದೇವರಾದ ವಿಠ್ಠಲನ ಒಂದು ಭವ್ಯದೇವಾಲಯವನ್ನು ಕಟ್ಟಿಸುತ್ತಾನೆ, ಹೊನ್ನ ಕಳಸದ ಬೃಹತ್ ಕಲ್ಲಿನ ಚಕ್ರಗಳು ಆ ದೇವಾಲಯದ ತೇರು ಇಡೀ ದೇಸಗತಿಯ ಪ್ರತಿಷ್ಠೆಯ ಸಂಕೇತ ಆದರೆ ಮೊದಲನೆಯ ರಥೋತ್ಸವದ ಸಂದರ್ಭದಲ್ಲಿಯೇ ಆ ತೇರು ನೂರಾರು ಜನರು ಪ್ರಯತ್ನಿಸಿದರೂ ಚಲಿಸುವುದಿಲ್ಲ; ಮತ್ತು ಶಾಸ್ತ್ರದ ಅಯ್ಯನವರು ನರಬಲಿ ಆಗಬೇಕೆಂದು ಹೇಳುತ್ತಾರೆ, ಕೊನೆಗೆ ಕೆಳ ಜಾತಿಯ ಬಡ ದ್ಯೌವಪ್ಪ ಎಂಬುವವನ ಮಗನನ್ನು ಬಲಿ ಕೊಟ್ಟ ನಂತರ ತೇರು ಚಲಿಸುತ್ತದೆ. ಈ ತ್ಯಾಗಕ್ಕಾಗಿ ದ್ಯಾವಪ್ಪನಿಗೆ ದೇಸಾಯಿಯಿಂದ ಕಳ್ಳೀಗುದ್ದಿ ಎಂಬ ಊರಿನಲ್ಲಿ ಎಂಟೆಕರೆ ಜಮೀನು ಇನಾಮಾಗಿ ದೊರೆಯುತ್ತದೆ ಮತ್ತು ಅಂದಿನಿಂದ ಪ್ರತಿ ವರ್ಷ ದ್ಯಾವಪ್ಪ ಅಥವಾ ಅವನ ವಂಶದವರು ರಥೋತ್ಸವದ ದಿನ ರಥದ ಚಕ್ರಕ್ಕೆ ಹಣೆ ಒಡೆದುಕೊಂಡು ರಕ್ತ ತಿಲಕದ ಸೇವೆಯ ಆಚರಣೆಯು ಪ್ರಾರಂಭವಾಗುತ್ತದೆ. ಆದರೆ ಕಾಲಕ್ರಮದಲ್ಲಿ ಜನರಿಗೆ ದೇವರಲ್ಲಿ ಮತ್ತು ರಥೋತ್ಸವದಲ್ಲಿಯ ನಂಬಿಕೆ ಕಡಿಮೆಯಾಗುತ್ತದೆ. ಇನಾಮಿನ ಜಮೀನನ್ನು ಮೋಸದಿಂದ ಆ ಊರಿನ ಗೌಡ ತನ್ನದಾಗಿಸಿಕೊಳ್ಳುತ್ತಾನೆ.