ಕಾರಂತರ ಕಾದಂಬರಿಗಳಲ್ಲಿ ಮಣ್ಣು ಮತ್ತು ಮನುಷ್ಯ.
Abstract
ಆಧುನಿಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಶಿವರಾಮ ಕಾರಂತರಿಗೆ ಒಂದು ವಿಶಿಷ್ಟ ಸ್ಥಾನವಿದೆ. ಕನ್ನಡ ಸಾಹಿತ್ಯ ಲೋಕದ ವಿವಿಧ ಪ್ರಕಾರಗಳಲ್ಲಿ ವಿಸ್ಮಯಗೊಳಿಸುವ, ವಿಪುಲ ಸಾಹಿತ್ಯವನ್ನು ಸೃಷ್ಟಿಸಿದ ಬಹುಜ್ಞ ಲೇಖಕರು. ಅವರನ್ನು ಕೇವಲ ಲೇಖಕರು ಎಂದು ಕರೆಯುವುದಕ್ಕಿಂತ, ಬಹುಮುಖ ಪ್ರತಿಭೆಯ ಕಲಾಕಾರರು ಎಂದು ಕರೆಯುವುದು ಹೆಚ್ಚು ಸೂಕ್ತವೆನಿಸುತ್ತದೆ. “ಕಾದಂಬರಿಕಾರರಾಗಿ ಕಾರಂತರು” ಎಂಬುದನ್ನು ಹೊರತುಪಡಿಸಿ, ಕಾರಂತರ ಇತರ ಆಯಾಮಗಳನ್ನು ಗುರುತಿಸಿ ಹೇಳುವುದಾದರೆ “ಯಕ್ಷಗಾನ ಪರಿಷ್ಕಾರಕ ಕಾರಂತ, ಸಣ್ಣ ಕಥೆಗಾರ ಕಾರಂತ, ನಾಟಕಕಾರ ಕಾರಂತ, ಕಲಾವಿಮರ್ಶಕ ಕಾರಂತ, ವಿಜ್ಞಾನ ಗ್ರಂಥ ಕರ್ತೃ ಕಾರಂತ, ವಿದ್ಯಾ ಕ್ಷೇತ್ರದಲ್ಲಿ ಪ್ರಯೋಗಕಾರ ಕಾರಂತ” ಹೀಗೆ ಇವರ ಕಾರ್ಯಕ್ಷೇತ್ರ ವಿಸ್ತಾರವಾದುದು. ಜೀವನಾನುಭವವನ್ನು ವಿಸ್ತ್ತರಿಸಿಕೊಳ್ಳಬೇಕೆಂಬ ಅವರ ಸತತ ಪ್ರಯತ್ನ ಶ್ರದ್ಧಾಪೂರ್ಣವಾದುದು. ಕಾರಂತರು ಎಲ್ಲಾ ಕ್ಷೇತ್ರದಲ್ಲೂ ಅನುಭವದ ಅಗ್ನಿಪರೀಕ್ಷೆಯಲ್ಲಿ ಗೆಲ್ಲದ ಯಾವುದೂ ಸತ್ಯವಲ್ಲ ಎಂದು ನಂಬಿ, ಬದುಕಿನ ಅತ್ಯಂತ ನಿಷ್ಠೂರ ಪರೀಕ್ಷೆಗಳಿಗೆ ತಮ್ಮನ್ನು ತಾವೇ ಒಡ್ಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ “ಆಡು ಮುಟ್ಟದ ಸೊಪ್ಪಿಲ್ಲ ಕಾರಂತರು ಕೈಯಾಡಿಸದ ಕ್ಷೇತ್ರವಿಲ್ಲ” ಎಂಬ ಜನಜನಿತವಾದ ಮಾತನ್ನು ಒಪ್ಪತಕ್ಕದ್ದಾಗಿದೆ.