ಕನ್ನಡ ಪತ್ರಿಕೆಗಳು ಮತ್ತು ಸ್ವಾತಂತ್ರ್ಯ ಸಂಗ್ರಾಮ.
Abstract
ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಹೋರಾಟಗಾರರ ಬಗ್ಗೆ ಮಾತನಾಡುವಾಗಲೆಲ್ಲ ನಮ್ಮ ಗಮನಕ್ಕೆ ಬರುವ ಮುಖ್ಯವಾದ ವಿಷಯವೆಂದರೆ, ನಮ್ಮ ಚಳವಳಿಗಾರರ ಪೈಕಿ ಎಷ್ಟೋ ಮಂದಿ ಪತ್ರಕರ್ತರಿದ್ದರೆನ್ನುವುದು. ಸ್ವಾತಂತ್ರ್ಯವೀರರು ಪತ್ರಿಕೆಗಳನ್ನು ತಮ್ಮ ಹೋರಾಟದ ಒಂದು ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿದ್ದರು. ಹೀಗೆ ಪತ್ರಿಕಾವೃತ್ತಿ ನಮ್ಮ ರಾಷ್ಟ್ರೀಯ ಚಳವಳಿಯ ಒಂದು ಅವಿಭಾಜ್ಯ ಅಂಗವಾಗಿತ್ತು. ರಾಷ್ಟ್ರೀಯ ಪ್ರಜ್ಞೆ ಹಾಗೂ ಸ್ವದೇಶಾಭಿಮಾನವನ್ನು ಮೂಡಿಸುವ ಮತ್ತು ಚಾಲನೆಯಲ್ಲಿಡುವ ಕೆಲಸವನ್ನು ಪತ್ರಿಕೆಗಳು ನಿರಂತರವಾಗಿ ಮಾಡಿದವು.
ಭಾರತೀಯ ಮನಸ್ಸುಗಳ ಸ್ವರಾಜ್ಯದ ಕಲ್ಪನೆ ಒಂದು ಬೃಹತ್ ರಾಷ್ಟ್ರೀಯ ಆಂದೋಲನವಾಗಿ ಬೆಳೆಯುವುದರ ಹಿಂದೆ ಪತ್ರಿಕೆಗಳ ಪಾತ್ರ ತುಂಬ ದೊಡ್ಡದು. ಸಂಸ್ಥಾನಗಳಾಗಿ ಹರಿದುಹಂಚಿಹೋಗಿದ್ದ ಭಾರತ ಒಂದು ರಾಷ್ಟ್ರವಾಗಿ ಒಗ್ಗೂಡಿ, ಸ್ವಾತಂತ್ರ್ಯವೆಂಬ ಕನಸು ಅರಳಿಕೊಳ್ಳುವ ಪ್ರಕ್ರಿಯೆಯಲ್ಲಿ ಪತ್ರಿಕಾಮಾಧ್ಯಮ ನೀಡಿದ ಕೊಡುಗೆ ಅಸದೃಶ. ನಮ್ಮ ನೆಲದಲ್ಲಿ ನಾವೇ ಪರಕೀಯರಾಗಿದ್ದೇವೆ, ಈ ಬಂಧನದಿಂದ ಹೇಗಾದರೂ ಹೊರಬರಬೇಕು, ಅದಕ್ಕಾಗಿ ಸಂಘಟಿತಹೋರಾಟ ಅನಿವಾರ್ಯ ಎಂಬ ಪ್ರಜ್ಞೆ ಪ್ರತಿಯೊಬ್ಬ ಭಾರತೀಯನಲ್ಲೂ ಮೂಡಿದ್ದರ ಹಿಂದೆ ಪತ್ರಿಕೆಗಳು ಬೀರಿದ ಪ್ರಭಾವ ಕಲ್ಪನೆಗೂ ಮೀರಿದ್ದು. ಇಂತಹದೊಂದು ಪ್ರಜ್ಞಾಪ್ರವಾಹದ ಓಟದಲ್ಲಿ ಕನ್ನಡನಾಡು ಮತ್ತು ಅಲ್ಲಿನ ಪತ್ರಿಕೆಗಳು ಒಂದಾಗಿ ಸಾಗಿದ್ದು ಇತಿಹಾಸ ಸದಾ ನೆನಪಿಸಿಕೊಳ್ಳುವ ಒಂದು ಅಧ್ಯಾಯ.