ಕುಂಬಾರ ಗುಂಡಯ್ಯನ ಮಡದಿ ಶರಣೆ ಕೇತಲದೇವಿ.
Abstract
ಬಸವಪೂರ್ವಯುಗ, ಬಸವಯುಗದ ಅನೇಕ ಶಿವಶರಣ-ಶರಣೆಯತರ ಕಾಲ-ದೇಶ, ಪರಿಸರ, ಅವರ ಬದುಕಿನ ಜೀವನ ಮೌಲ್ಯಗಳನ್ನು ಕುರಿತು ಇತಿಹಾಸ ಪುಟಗಳಲ್ಲಿ ಸ್ಪಷ್ಟ ಚಿತ್ರಣವಿಲ್ಲ. ಈ ಕುರಿತು ಸರಿಯಾದ ನಿಟ್ಟಿನ ಸಂಶೋಧನಾ ಅಧ್ಯಯನದ ಅವಶ್ಯಕತೆ ಇದೆ.
ನಮ್ಮೆಲ್ಲ ಪುರಾಣ, ಕಾವ್ಯ, ಶಾಸನ ಸಾಹಿತ್ಯಗಳಲ್ಲಿ ವರ್ಣಿಸಲ್ಪಟ್ಟ, ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಜನಾನುರಾಗಿಯಾಗಿ, ಜನಮಾನಸದಲ್ಲಿರುವ ಕುಂಬಾರ ಗುಂಡಯ್ಯ ಮತ್ತು ಆತನ ಹೆಂಡತಿ ಶರಣೆ ಕೇತಲದೇವಿ ಚರಿತ್ರೆಯ ಕಾಲಗರ್ಭದಲ್ಲಿ ಎಲೆಮರೆಯ ಕಾಯಿಯಾಗಿ ನಿಂತಿರುವುದನ್ನು ಕಾಣಬಹುದು. ಗುಂಡಯ್ಯ ಸಂಸ್ಕೃತಿಯ ಪ್ರತೀಕವಾಗಿ ಕಂಗೊಳಿಸಿದ್ದರೆ, ಕೇತಲದೇವಿ ವಚನಕಾರ್ತಿಯಾಗಿ ಕಂಗೊಳಿಸಿದ್ದಾಳೆ. ಅವಳ ಜೀವನದ ವೃತ್ತಾಂತವನ್ನು ಕುರಿತು ಸಿಕ್ಕಿರುವ ಆಕರಗಳ ಹಿನ್ನೆಲೆಯಲ್ಲಿ ಬೆಳಕು ಚೆಲ್ಲುವ ಪ್ರಯತ್ನ ಈ ಪ್ರಬಂಧವಾಗಿದೆ.