ಮಹಾಕವಿ ಪಂಪನ ಕಾವ್ಯಗಳಲ್ಲಿ ವರ್ಣನೆಗಳ ವೈಶಿಷ್ಟ್ಯ.
Abstract
ಕನ್ನಡ ಸಾರಸ್ವತ ಲೋಕದಲ್ಲಿ ಕ್ರಿ.ಶ. ೧೦ನೆಯ ಶತಮಾನದ ಪೂರ್ವಾರ್ಧದ ಕಾಲಘಟ್ಟದಲ್ಲಿ ಆದಿಕವಿ, ಮಹಾಕವಿ ಎಂದು ಗುರುತಿಸಲ್ಪಟ್ಟ ಪಂಪ ಕವಿಯು ಎರಡು ಮಹಾಕೃತಿಗಳನ್ನು ವಿಶಿಷ್ಟವಾದ ರೀತಿಯಲ್ಲಿ ರಚಿಸಿದ್ದಾನೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಅನುಭವಕ್ಕೆ ಅನುಗುಣವಾಗಿ ತನ್ನ ದೃಷ್ಟಿಯನ್ನು ರೂಪಿಸಿಕೊಳ್ಳುತ್ತಾನೆ. ಸಮಾಜವನ್ನು ಆತ ನೋಡುವ ಮತ್ತು ಅನುಭವಿಸುವ ಶಕ್ತಿಯ ಮೇಲೆ ಅವನವನ ಜೀವನದೃಷ್ಟಿ ಸಿದ್ಧವಾಗುತ್ತದೆ. ಅಗಾಧವಾದ ಜೀವನಾನುಭವವನ್ನು ಹೊಂದಿದ ಪಂಪನ ಜೀವನ ದೃಷ್ಟಿಯು ಅಷ್ಟೇ ವಿಸ್ತಾರವಾದುದು. ಆ ಮೂಲಕ ಮೂಡಿಬಂದ ಈತನ ಎರಡೂ ಕೃತಿಗಳಲ್ಲಿ ವರ್ಣನೆಯ ವೈಭವವು ವಿಶಿಷ್ಟವಾದುದು. ಆ ಕಾಲದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಚಾರಿತ್ರಿಕ ವಿಚಾರಗಳ ಜೊತೆಗೆ ಕವಿ ತನ್ನ ಹಾಗೂ ತನಗೆ ಆಶ್ರಯ ನೀಡಿದ ಅರಿಕೇಸರಿ ರಾಜನ ಕುರಿತಾಗಿ ಎರಡೂ ಕೃತಿಗಳಲ್ಲಿಯೂ ಹೇಳಿಕೊಂಡಿದ್ದಾನೆ. ಇದರಿಂದ ಆ ಕಾಲದ ಹಲವಾರು ಮಾಹಿತಿಗಳು ನಮಗೆ ಲಭ್ಯವಾಗುತ್ತವೆ.