ಕನ್ನಡ ನಾಟಕಗಳಲ್ಲಿ ಪುರಾಣ ಪ್ರಜ್ಞೆಯ ಚಿತ್ರಣ.
Abstract
ಭಾರತೀಯ ಸಂಪ್ರದಾಯದಲ್ಲಿ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳು ಶ್ರೇಷ್ಠವಾದವುಗಳು. ಬೆಲೆಯಿಂದಲೂ, ಭದ್ರತೆಯಿಂದಲೂ ಉಳಿದಾವ ಆಸ್ತಿಗಿಂತ ಉತ್ಕೃಷ್ಟವಾದವು. ಸೃಷ್ಟಿಯ ಮೂಲಗಳನ್ನು, ದೇವಾದಿದೇವತೆಗಳನ್ನು ದೇವತಾ ಅವತಾರವನ್ನು ಕುರಿತ ಕಥೆಗಳು ಇಲ್ಲಿವೆ. ಮತೀಯ ಪ್ರಕ್ರಿಯೆಗಳು ಮತ್ತು ನಂಬಿಕೆಗಳು ಸಹ ಈ ಕಥೆಗಳಲ್ಲಿ ಬಳಕೆಯಾಗುತ್ತವೆ. ವೀರಕಥೆಗಳೇ ಕಾಲಾನುಕ್ರಮದಲ್ಲಿ ಪುರಾಣ ಕಥೆಗಳಾಗಿ ಪರಿಣಮಿಸುವುದುಂಟು. ಈ ಹಿನ್ನೆಲೆಯಲ್ಲಿ ಪುರಾಣ ಪರಂಪರೆಯನ್ನು ವೇದಗಳ ಕಾಲದಿಂದಲೂ ಗುರುತಿಸುವುದು ಸಾಧ್ಯವಾಗಿದೆ. ಒಂದು ದೃಷ್ಟಿಯಿಂದ ಮಾನವನಿಗೆ ಪುರಾಣಗಳು, ದೇವತೆಗಳು ಪ್ರಾಚೀನ ಕಥೆಗಳು ಮಾತ್ರವೇ ಆಗಿರಲಿಲ್ಲ. ಅವು ಅವರಿಗೆ ಆಧ್ಯಾತ್ಮಿಕ ವಿಷಯ ತಿಳಿಸುವ ಗುರುಗಳೂ ಆಗಿದ್ದವು. ತತ್ಪರಿಣಾಮವಾಗಿ ನೀತಿ, ನಡವಳಿಕೆ, ಘನತೆಯ ಬದುಕು, ಸಂಸ್ಕೃತಿ, ರಾಜಕೀಯ, ಸಾಮಾಜಿಕ ಮುಂತಾದ ಅಂಶಗಳನ್ನು ಬೋಧಿಸುವ ಆಕರಗಳಾಗಿದ್ದವು. ಈ ಕಾರಣದಿಂದ ಸಮಕಾಲೀನ ಬದುಕಿಗೂ ಪೂರಕವಾಗಿವೆ.