ಮೈಸೂರು ಚಾಮುಂಡೇಶ್ವರಿ: ಸಾಂಸ್ಕೃತಿಕ ಆಯಾಮ.
Abstract
ಕರ್ನಾಟಕ ರಾಜ್ಯದ ಮೈಸೂರು ತನ್ನ ಇತಿಹಾಸದಿಂದ ಪ್ರಸಿದ್ಧವಾಗಿದೆ. ಇಲ್ಲಿನ ಸುಂದರ ಅರಮನೆ, ಚಾಮುಂಡಿ ಬೆಟ್ಟ ಸದಾ ನೋಡುಗರನ್ನು ಆಕರ್ಷಿಸುತ್ತದೆ. ಚಾಮುಂಡೇಶ್ವರಿ ದೇವಿಯು ಶಿಷ್ಟ ರಕ್ಷಣೆಗೆ ಮತ್ತು ದುಷ್ಟ ಶಿಕ್ಷೆಗೆ ಹೆಸರಾಗಿದ್ದಾಳೆ. ಇಲ್ಲಿ ದೇವಿಯ ತಲೆಗೂದಲು ಬಿದ್ದಿವೆ ಎಂಬ ನಂಬಿಕೆ ಇದೆ. ಮಹಿಷಾಸುರನೆಂಬ ರಾಕ್ಷಸನು ಘೋರ ತಪಸ್ಸನ್ನಾಚರಿಸಿ ದೇವತೆಗಳಿಂದಾಗಲೀ, ರಾಕ್ಷಸರಿಂದಾಗಲೀ, ಮನುಷ್ಯರಿಂದಾಗಲೀ ತನಗೆ ಮೃತ್ಯು ಬಾರದಿರಲೆಂದು ದೇವತೆಗಳಿಂದ ವರ ಪಡೆದಿದ್ದನು. ಕೊನೆಗೆ ಇಂದ್ರನನ್ನು ಓಡಿಸಿ ಸ್ವರ್ಗವನ್ನು ಮಹಿಷಾಸುರ ಆಕ್ರಮಿಸಿಕೊಂಡನು. ಇದನ್ನು ಸಹಿಸಲಾಗದ ದೇವತೆಗಳು ವಿಷ್ಣುವಿನ ಹತ್ತಿರ ಹೋಗಿ ವಿಷಯ ತಿಳಿಸಿದರು. ಆವಾಗ ವಿಷ್ಣು ಒಬ್ಬ ಸ್ತ್ರೀ ಶಕ್ತಿಯಿಂದ ಮಾತ್ರ ಅವನ ಅಂತ್ಯ ಎಂದು ಹೇಳಿದನು. ಮುಂದೆ ‘ಬ್ರಹ್ಮ, ವಿಷ್ಣು, ಮಹೇಶ್ವರ ತೇಜಸ್ಸುಗಳು ಸೇರಿ ಒಬ್ಬ ಸ್ತ್ರೀ ಉತ್ಪತ್ತಿಯಾದಳು.’ ಈ ಸ್ತ್ರೀಯು ಮಹಿಷಾಸುರನನ್ನು ಸಂಹಾರ ಮಾಡಿದಳು. ದೇವಿಯನ್ನು ಸಂಹಾರ ಮಾಡಿದ ಸ್ಥಳದಲ್ಲೇ ನೆಲೆ ನಿಲ್ಲುವಂತೆ ಮಹರ್ಷಿಗಳು ಪ್ರಾರ್ಥಿಸಿದರ ಪರಿಣಾಮ ದೇವಿಯು ಅಲ್ಲೇ ನೆಲೆನಿಂತಳು ಮತ್ತು ಮಹಿಷಸುರನನ್ನು ವಧೆ ಮಾಡಿದ ಸ್ಥಳ ಮೈಸೂರು ಎಂದು ಹೆಸರಾಯಿತು. ದೇವಿಯ ರೂಪವನ್ನು ಚಾಮುಂಡೇಶ್ವರಿ ಎಂದು ಇಂದಿಗೂ ಕರೆಯುತ್ತಾರೆ. ದೇವಿಯು ಕೈಯಲ್ಲಿ ತ್ರಿಶೂಲ ಹಿಡಿದು, ಮಹಿಷನನ್ನು ಕಾಲಲ್ಲಿ ಮೆಟ್ಟಿ, ತನ್ನ ನಾಲಿಗೆ ಹಿರಿದು ನಿಂತ ಭಂಗಿ ಜನಪ್ರಿಯವಾಗಿದೆ.