ಕನ್ನಡ ವೃತ್ತಿರಂಗಭೂಮಿಯ ಧೃವತಾರೆ: ರಹೆಮಾನವ್ವ.
Abstract
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪ್ರಮುಖವಾದ ಸ್ಥಾನವನ್ನು ಪಡೆದುಕೊಂಡಿರುವ ಹೈದ್ರಾಬಾದ ಕರ್ನಾಟಕ ಪ್ರದೇಶವು ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ಶ್ರೀಮಂತಿಕೆಯನ್ನು ಹೊಂದಿದೆ. ಕ್ರಿ.ಶ 7 ನೇಯ ಶತಮಾನದಿಂದ ನಿಜಾಮರ ಕಾಲದವರೆಗೂ ಈ ಭಾಗವನ್ನು ಶಾತವಾಹನರು, ಮೌರ್ಯರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಆದಿಲ್ ಶಾಹಿಗಳು, ಬಹುಮನಿ ಸುಲ್ತಾನರು ಹೀಗೆ ಅನೇಕ ರಾಜಮನೆತನಗಳು ಆಡಳಿತ ನಡೆಸಿವೆ. ಹೀಗಾಗಿ ಇಲ್ಲಿ ಆಯಾ ಕಾಲಘಟ್ಟದಲ್ಲಿ ಸಾಂಸ್ಕೃತಿಕ ಪಲ್ಲಟಗಳಾಗುತ್ತಾ ಬಂದಿವೆ. ಕನ್ನಡ ಸಾಹಿತ್ಯ ಚರಿತ್ರೆಗೆ ಮುನ್ನುಡಿ ಹಾಕಿದ ‘ಕವಿರಾಜ ಮಾರ್ಗ’ಕಾರ ಕಲಬುರಗಿಯ ಮಾನ್ಯಖೇಟ (ಈಗೀನ ಮಳಖೇಡ)ದ ಶ್ರೀವಿಜಯನು. ಹಾಗೇನೆ ವಚನ ಸಾಹಿತ್ಯ, ದಾಸ ಸಾಹಿತ್ಯ, ತತ್ವಪದ ಸಾಹಿತ್ಯಕ್ಕೆ ಬುನಾದಿ ಹಾಕಿ ಬೃಹತ್ ಬಂಗಲೆಯನ್ನು ನಿರ್ಮಿಸಿದ ಹಿರಿಮೆ ಈ ಭಾಗದ್ದಾಗಿದೆ.