ಕುವೆಂಪು ಅವರ ಸಾಲದ ಮಗು: ಮರು ಓದು.
Abstract
ಹೊಸಗನ್ನಡ ಕಥನ ಸಾಹಿತ್ಯಕ್ಕೆ ನವೋದಯ ಸಾಹಿತಿಗಳ ಕೊಡುಗೆಯನ್ನು ಕುರಿತು ಮಾತನಾಡುವಂತಹ ಸಂದರ್ಭದಲ್ಲಿ ರಾಷ್ಟ್ರ ಕವಿ ಕುವೆಂಪು ಅವರ ಕೊಡುಗೆಯನ್ನು ಕುರಿತು ಮಾತನಾಡದಿದ್ದರೆ ಅದು ಮೂರ್ಖತನದ ಪರಮಾವಧಿಯಾಗುತ್ತದೆ. ಸಹೃದಯರು ಅವರನ್ನು ಗುರುತಿಸುವುದು ಕವಿಯಾಗಿಯೇ ಅದರೂ ಸಹ, ಕುವೆಂಪು ಅವರದು ಅದ್ಭುತ ಕಥನ ಪ್ರತಿಭೆ. ಕುವೆಂಪು ಅವರು ಅದ್ಭುತ ಕಥೆಗಾರರು, ಮೇಲ್ಮಟ್ಟದ ಕಾದಂಬರಿಕಾರರು, ಶ್ರೇಷ್ಠ ನಾಟಕಕಾರರು. ಕುವೆಂಪು ಅವರ ಕಾವ್ಯ, ಮಹಾಕಾವ್ಯಗಳನ್ನು ವ್ಯಾಸಂಗ ಮಾಡುವ ಮುನ್ನ ಅವರ ಕಥೆ, ಕಾದಂಬರಿಗಳನ್ನು ವ್ಯಾಸಂಗ ಮಾಡಿದರೆ, ಅವರು ಕಥೆಗಾರರಾಗಿಯೇ ಸಹೃದಯರಿಗೆ ಇಷ್ಟವಾಗುತ್ತಾರೆ. ಕಥೆಯಲ್ಲಿ ಕಾವ್ಯಾತ್ಮಕ ಗುಣವಿರಬೇಕೆಂಬ ಅಂಶ ಅವರ ಕಥೆಗಳಾದ ‘ಸಾಲದ ಮಗು’, ‘ಯಾರು ಅರಿಯದ ವೀರ’, ‘ಮೀನಾಕ್ಷಿ ಮನೆಯ ಮೇಷ್ಟ್ರು’ ಕಥೆಗಳನ್ನು ಓದಿದಾಗ ಮನದಟ್ಟಾಗುತ್ತದೆ. ‘ಸಾಲದ ಮಗು’, ‘ಯಾರು ಅರಿಯದ ವೀರ’ ಕಥೆಗಳಲ್ಲಿ ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ಅದ್ಭುತವಾಗಿ ಕಾಣಬಹುದು.