ಕೈವಾರ ತಾತಯ್ಯನ ಕೀರ್ತನ ವಚನಗಳಲ್ಲಿ ಜೀವನ ದರ್ಶನ.
Abstract
ಕೈವಾರ ತಾತಯ್ಯನೆಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಯೋಗಿ ನಾರಣಪ್ಪ (ನಾರಾಯಣಪ್ಪ) ನವರು ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕೈವಾರ ಗ್ರಾಮದಲ್ಲಿ ಕೊಂಡಪ್ಪ ಮತ್ತು ಮುದ್ದಮ್ಮ ದಂಪತಿಗಳಿಗೆ ಜನಿಸಿದವರು. 18-19ನೇ ಶತಮಾನದ (ಕ್ರಿ.ಶ.1726 ರಿಂದ 1836)1 ನಡುವೆ ಸು.110 ವರ್ಷಗಳ ಕಾಲ ತುಂಬು ಜೀವನ ನಡೆಸಿದ ನಾರಣಪ್ಪನವರು ಬಳೆ ಬಣಜಿಗರ ಜನಾಂಗಕ್ಕೆ ಸೇರಿದವರು. ತಂದೆಯಂತೆ ಬಳೆಮಾರುವ ಕುಲವೃತ್ತಿಯಲ್ಲೆ ತಮ್ಮ ಜೀವನ ಸಾಗಿಸುತ್ತಿದ್ದವರು. ತನ್ನ ಸೋದರತ್ತೆಯಾದ ಧರ್ಮಕ್ಕನವರ ಮಗಳಾದ ಮುನಿಯಮ್ಮನನ್ನು ಮದುವೆಯಾಗಿ ಪೆದ್ದಕೊಂಡಪ್ಪ, ಚಿನ್ನಕೊಂಡಪ್ಪ ಎಂಬ ಎರಡು ಗಂಡುಮಕ್ಕಳು, ಮುದ್ದಮ್ಮ ಎಂಬ ಒಂದು ಹೆಣ್ಣು ಮಗುವಿನ ತಂದೆಯಾಗಿ ಲೋಕ ಜಂಜಾಟಗಳಲ್ಲಿ, ಸಂಸಾರ ಸಾಗರದಲ್ಲಿ ಮೇಲೆಂಬುದಿಲ್ಲದೆ ತಮ್ಮ ಜೀವನದಲ್ಲಿ ಹೆಂಡತಿಯ ಮಾತುಗಳನ್ನು ಕೇಳಿಸಿಕೊಂಡು ಕೃಷ್ಣಾರ್ಪಣವೆಂಬಂತೆ ಜೀವನ ಸಾಗಿಸುತ್ತಿರುತ್ತಾರೆ.