ಡಾ. ಚಂದ್ರಶೇಖರ ಕಂಬಾರರ ‘ಶಿವರಾತ್ರಿ’ ನಾಟಕದಲ್ಲಿ ಸ್ತ್ರೀ ಸಂವೇದನೆ.
Abstract
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಅವರು ಬರೆದಿರುವ ‘ಶಿವರಾತ್ರಿ’ ಎಂಬ ನಾಟಕವು ಹನ್ನೆರಡನೆಯ ಶತಮಾನದ ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಸಂಕ್ಷಿಪ್ತ ಪರಿಣಾಮವನ್ನು ಅನಾವರಣ ಗೊಳಿಸಿರುವಂತಹದ್ದಾಗಿದೆ. ಬಸವಣ್ಣನವರು ಸ್ಥಾಪಿಸಹೊರಟಂತಹ ಸಮಾನತೆ ಎಂಬ ತತ್ವವು ಪುರೋಹಿತಶಾಹಿ ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಟಿಯಲ್ಲಿ ಹೇಗೆ ಛಿದ್ರವಾಯಿತು ಎಂಬುದನ್ನು ಧ್ವನಿಪೂರ್ಣವಾಗಿ ತಿಳಿಸುವಂತಹ ನಾಟಕವಾಗಿದೆ. ಬಸವಣ್ಣನವರ ತತ್ವವು ಸಮಾಜದ ಎಲ್ಲ ಸ್ತರದಿಂದ ತುಳಿಯಲ್ಪಟ್ಟವರನ್ನು ಮೇಲಕ್ಕೆತ್ತಿ ಸಮಾನತೆಯ ದಾರಿಗೆ ತಂದು ಕಾಯಕವೇ ಶ್ರೇಷ್ಠ ಎಂದು ಸಾರಿದ ಮಹಾನ್ ಆದರ್ಶ ತತ್ವವಾಗಿದೆ. ಈ ತತ್ವದ ಅಡಿಯಲ್ಲಿ ಯಾವ ಜಾತಿಯು ಮೇಲಲ್ಲ-ಕೀಳಲ್ಲ, ಗಂಡು-ಹೆಣ್ಣೆಂಬ ಯಾವುದೇ ಭೇದವಿಲ್ಲದ ಸಮಾನತೆಯ ಕ್ರಾಂತಿಯಾಗಿದೆ. ಆದರೆ ಇದು ಅಂದಿನ ಮೇಲ್ವರ್ಗದವರ ಹೊಟ್ಟೆಕಿಚ್ಚಿನಿಂದಾಗಿ ಎಂತಹ ಕೆಟ್ಟ ಪರಿಣಾಮವನ್ನು ಪಡೆಯಿತು ಎಂಬ ಸತ್ಯವನ್ನು ಕಂಬಾರರು ಈ ನಾಟಕದ ಮೂಲಕ ತಿಳಿಸುತ್ತ; ಅರಿವಿನ ಜಾಗೃತಿಯನ್ನುಂಟು ಮಾಡಿದ್ದಾರೆ.