ವಚನ ಸಾಹಿತ್ಯದಲ್ಲಿ ಬಂಡಾಯ ಮನೋಧೋರಣೆ.
Abstract
ಪ್ರತಿಯೊಂದು ಜೀವಿಯೂ ತನ್ನ ಅಸ್ತಿತ್ವಕ್ಕೆ ಧಕ್ಕೆಯುಂಟು ಮಾಡುವ ಯಾವುದೇ ಪ್ರತಿ ಜೀವಿಯ ಉಪಟಳ, ಮನಸ್ಸನ್ನು ಹಿಂಸಿಸುವ ಸಂಗತಿಗಳ ವಿರುದ್ಧ ಪ್ರತಿರೋಧ ಒಡ್ಡುವುದರ ಮೂಲಕ ತನ್ನ ಉಳಿವಿಗೆ ಪ್ರಯತ್ನಿಸುತ್ತದೆ. ವ್ಯಕ್ತಿಗತವಾಗಿ ಹುಟ್ಟಿಕೊಳ್ಳುವ ಪ್ರತಿರೋಧ ಸಾಮುದಾಯಿಕ ಸ್ವರೂಪವನ್ನು ಪಡೆದುಕೊಂಡಾಗ ಅದು ಬಂಡಾಯವೆನಿಸುತ್ತದೆ. ಸದುದ್ದೇಶರಹಿತವಾಗಿರುವ ಯಾವ ಪ್ರತಿರೋಧವೂ ಬಂಡಾಯವೆನಿಸದು. ವ್ಯಕ್ತಿ ತನ್ನ ಮಿತಿಗಳ ವಿರುದ್ಧ, ತನ್ನ ಕೊರತೆಗಳ ವಿರುದ್ಧ ತಾನೇ ಬಂಡೇಳುವುದರ ಹಿಂದೆ ತನ್ನೇಳಿಗೆಯಿದೆ ಎಂಬ ಅರಿವು ಇರುತ್ತದೆ. ಈ ಅರಿವು ಸಾಮಾಜಿಕ ಬದಲಾವಣೆಯ ಭಾಗವಾಗಿ ಅನಾವರಣಗೊಳ್ಳುವುದೂ ಬಂಡಾಯವೇ ಆಗಿರುತ್ತದೆ. ಸಾಮಾಜಿಕ ಅಪಸವ್ಯಗಳ ವಿರುದ್ಧ ಸೆಣೆಸುವ ಈ ಮನೋಭಾವನೆ ಅತ್ಯಂತ ಅಗತ್ಯ. ಈ ಹಿನ್ನೆಲೆಯಲ್ಲಿ ಬಂಡಾಯ ಎನ್ನುವುದು ಮೂಲತಃ ಒಂದು ಮನೋಧೋರಣೆ, ಮನೋಧರ್ಮ ಎಂಬುದು ಸ್ಪಷ್ಟವಾಗುತ್ತದೆ.