ಕುವೆಂಪು ಅವರ ವೈಚಾರಿಕತೆ
Abstract
ಕನ್ನಡ ಸಾಹಿತ್ಯ ಸಂದರ್ಭದಲ್ಲಿ ‘ಕುವೆಂಪು’ ಎನ್ನುವ ಹೆಸರೇ ಒಂದು ವಿಶಿಷ್ಟವಾದ ಕಂಪನ್ನ, ಸೊಂಪನ್ನ ಒಳಗೊಂಡಿದೆ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಕೃಷಿ ಮಾಡಿರುವ ಇವರು ಸೀಮಾಪುರುಷರೆನಿಸಿಕೊಂಡಿದ್ದಾರೆ. ಮುಖ್ಯವಾಗಿ ಅವರ ವೈಚಾರಿಕ ನಿಲುವು ವೈಜ್ಞಾನಿಕ ದೃಷ್ಟಿಯಿಂದ ಪ್ರೇರಿತವಾದದ್ದು. ವೈಚಾರಿಕತೆ ಎಂಬುದು ಬುದ್ಧಿ ಮತ್ತು ಭಾವಗಳ ವಿದ್ಯುದಾಲಿಂಗನ. ಸೂಕ್ಷ್ಮವಾದ ವಿವೇಚನಾಶಕ್ತಿ, ಆಲೋಚನಾಶಕ್ತಿಗಳ ಅಭಿವ್ಯಕ್ತಿಯ ಸಂಗಮ. ವಿವೇಕಪೂರ್ಣವಾದ ವಿವೇಚನೆಯೇ ವೈಚಾರಿಕತೆಯ ತಳಹದಿಯಾಗಿದೆ. ವೈಚಾರಿಕತೆ ಎಂಬುದು ಮೂಲಭೂತ ಮೌಲ್ಯಗಳನ್ನು ನಿರಾಕರಿಸಬಾರದು. ಸತ್ಯವನ್ನು ಶೋಧಿಸುವಾಗ ಭೌತಿಕವಾಗಿ ಕಣ್ಣಿಗೆ ಕಾಣುವ ವಸ್ತುವಿನ ವೈಜ್ಞಾನಿಕ ದೃಷ್ಟಿಯೊಂದೆ ನಿಜವಾಗಲಾರದು. ಅದರ ಜೊತೆಗೆ ಆ ವಸ್ತುವಿನ ಅಂತರಾಳದ ಚೈತನ್ಯಾತ್ಮಕ ಭಾವಲಹರಿಯು ಕೂಡ ಮುಖ್ಯವಾಗುತ್ತದೆ. ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ಕುವೆಂಪು ವೈಚಾರಿಕ ಪ್ರಜ್ಞೆಯ ಆಶಯವನ್ನು ನಾಡು, ನುಡಿ, ಸಮಾಜ, ವೃತ್ತಿ, ದೇವರು, ಧರ್ಮ ಮೊದಲಾದ ಚಿಂತನೆಗಳ ಮೂಲಕ ತಿಳಿಯಬೇಕಾಗುತ್ತದೆ.