ಬೆಳ್ವೊಲನಾಡಿನ ಶಾಸನೋಕ್ತವಾಗಿದ್ದು ನಶಿಸಿರುವ ಬಸದಿಗಳು.
Abstract
ಜೈನ ಪರಂಪರೆಯ ಗುಹಾಲಯ (ಲಯನ, ಕಲ್ಮನೆ), ಸ್ತೂಪ, ಬಸದಿ, ಮಾನಸ್ತಂಭ, ಬ್ರಹ್ಮಸ್ತಂಭ, ಧ್ವಜಸ್ತಂಭ, ಧರ್ಮಚಕ್ರಸ್ತಂಭ, ಬಲಿಪೀಠಗಳು ಇತ್ಯಾದಿ ವಾಸ್ತುಕಲೆಗೆ ಸಂಬಂಧಿಸಿದ ನಿರ್ಮಾಣಗಳು ಸಮಕಾಲೀನ ಜೈನ ಶಾಸ್ತç-ದರ್ಶನಗಳು, ತತ್ವ-ಸಿದ್ಧಾಂತಗಳು, ಆಚಾರ-ವಿಚಾರಗಳು, ನಂಬುಗೆ-ಸಂಪ್ರದಾಯಗಳನ್ನು ಮೈಗೂಡಿಸಿಕೊಂಡು ವಾಸ್ತುಶಾಸ್ತç ಮತ್ತು ಜೈನಾಗಮಗಳಲ್ಲಿ ನಿರೂಪಿತವಾದ ಸಲಹೆ-ಸೂಚನೆಗಳು, ನಿರ್ದೇಶನಗಳ ಹಿನ್ನೆಲೆಯಲ್ಲಿ ಮೂಡಿಬಂದಿವೆ. ಹೀಗಾಗಿ ಭಾರತೀಯ ವಾಸ್ತುಕಲೆಯ ಪ್ರಾರಂಭ, ಬೆಳವಣಿಗೆ, ವಿನ್ಯಾಸ, ಶೈಲಿ, ಲಕ್ಷಣ ಮೊದಲಾದವುಗಳ ಅಧ್ಯಯನದಲ್ಲಿ ಜೈನ ವಾಸ್ತುಕಲೆಗೆ ವಿಶೇಷವಾದ ಸ್ಥಾನವಿದೆ. ಜೈನ ಪರಂಪರೆಯಲ್ಲಿ ಅರಿಹಂತ, ಸಿದ್ಧ, ಆಚಾರ್ಯ, ಉಪಾಧ್ಯಾಯ, ಸಾಧು, ಜಿನಧರ್ಮ, ಜಿನಾಗಮ, ಜಿನಚೈತ್ಯ, ಜಿನಚೈತ್ಯಾಲಯ ಎಂಬ ಒಂಭತ್ತು ಪ್ರಕಾರದ ಪೂಜ್ಯದೇವತೆಗಳನ್ನು `ನವದೇವತೆಗಳು' ಎಂದು ಕರೆಯಲಾಗುತ್ತದೆ. ಈ ನವದೇವತೆಗಳಲ್ಲಿ `ಜಿನಚೈತ್ಯಾಲಯ'ವೇ ಸ್ತೂಪ, ಗುಹಾಲಯ, ಬಸದಿ, ಮಾನಸ್ತಂಭಗಳು ಇತ್ಯಾದಿ ವಾಸ್ತು ನಿರ್ಮಾಣಗಳಿಗೆ ಪ್ರೇರಣೆಯಾಗಿದೆ. ಇದು ತೀರ್ಥಂಕರರು ಕೇವಲಜ್ಞಾನದ(ಜ್ಞಾನೋದಯ) ತರುವಾಯ ಸಕಲ ಜೀವಿಗಳನ್ನುದ್ದೇಶಿಸಿ ಪ್ರಥಮೋಪದೇಶ ಕೈಗೊಳ್ಳುವ ಸರ್ವತೋಭದ್ರ ರೀತಿಯ(ನಾಲ್ಕೂ ದಿಕ್ಕುಗಳಿಗೂ ಅಭಿಮುಖ) `ಸಮವಸರಣ ಮಂಟಪ'ದ ಪ್ರತಿನಿಧಿಯಾಗಿದೆ.