ಪುರಾಣಗಳಲ್ಲಿ ಮಾದಿಗ ಸಮುದಾಯದ ಚಿಂತನೆ.
Abstract
ಒಂದು ಸಮುದಾಯದ ಚರಿತ್ರೆ, ಸಂಸ್ಕೃತಿಯನ್ನು ತಿಳಿಯಲು ಆ ಸಮುದಾಯದ ಸಂಕಥನಗಳ ಮೊರೆ ಹೋಗುವುದು ಸರಿಯಾದ ಕ್ರಮ. ಸಮುದಾಯವೊಂದರ ಸಂಕಥನವೆಂದರೆ ಈ ಹಿಂದೆ ಹೇಳಿದಂತೆ ಸಂಕಥನ ‘ಒಂದು ವಿಷಯ ಹಾಗೂ ವಿಷಯವನ್ನು ಮುಂಚೂಣಿಗೆ ತರುತ್ತಿರುವ ಲೋಕದ ಅನುಭವವನ್ನು ಕಟ್ಟಿಕೊಡುವ ಆಲೋಚನೆ, ಅಭಿಪ್ರಾಯ, ಕ್ರಿಯೆ, ನಂಬಿಕೆ ಮತ್ತು ಆಚರಣೆಗಳನ್ನು ಪ್ರಸ್ತುತಪಡಿಸುವುದಾಗಿದೆ’ ಇದನ್ನು ಪ್ರಸ್ತುತ ಚಿಂತನೆಯ ಕೇಂದ್ರವಾದ ಮಾದಿಗ ಸಮುದಾಯಕ್ಕೆ ಅನ್ವಯಿಸಿದರೆ ಮಾದಿಗ ಸಂಕಥನವು ಕೇವಲ ಸೈದ್ಧಾಂತಿಕವಾಗಿರದೆ ಸಾಂಸ್ಕೃತಿಕ ಭಿತ್ತಿಯಲ್ಲಿ ನೆಲೆಗೊಂಡು ಭಾಷೆಯ ಮೂಲಕ, ಆಚರಣೆಯ ಮೂಲಕ ಈಗಲೂ ಉಳಿದುಕೊಂಡು ಬಂದಿರುವ ಮೌಖಿಕ ಸಂವಾದವಾಗಿದೆ. ಈ ಸಮುದಾಯದ ಸಂವಾದವನ್ನು ಅನಾವರಣಗೊಳಿಸುವ ಆಕರವೆಂದರೆ ಸಾಹಿತ್ಯವೇ. ಈ ಸಾಹಿತ್ಯದಲ್ಲಿ ಪೌರಾಣಿಕ, ಐತಿಹ್ಯ, ಮೌಖಿಕ ಆಯಾಮದ ರೇಖೆಗಳನ್ನು ಒಟ್ಟಿಗಿಡುವ ಭಾಗವಾಗಿ ಈ ಸಂವಾದ ಅಥವಾ ಬರಹದ ನೆಲೆಯಿದೆ. ಈ ಸಂವಾದದ ಮೂಲಕ ಮಾದಿಗ ಸಮುದಾಯದ ಸಾಂಸ್ಕೃತಿಕ ನೆಲೆಯನ್ನು ಪ್ರಸ್ತುತಪಡಿಸುವಾಗ ಮಾದಿಗ ಸಮುದಾಯದ ಅರ್ಥ ನಿರೂಪಣೆ, ಆ ವಿಷಯದ ಕುರಿತು ಇರುವ ವಿವಿಧ ಆಲೋಚನಾ ಕ್ರಮ ಮತ್ತು ನಂಬಿಕೆಗಳನ್ನು ಸಾದ್ಯಂತ ವಿವರಿಸಬೇಕಿದೆ’. ಹೀಗಾಗಿ ಸಂಕಥನದ ಮೂಲಕ ಪೌರಾಣಿಕ, ಐತಿಹ್ಯ, ಮೌಖಿಕ ನೆಲೆಗಳ ಮೂಲಕ ಮಾದಿಗ ಸಮುದಾಯದ ಆಲೋಚನಾಕ್ರಮವನ್ನು, ಬೌದ್ಧಿಕ ಸಂವಾದವನ್ನು, ಸಾಂಸ್ಕೃತಿಕ ವಿಷಯನಿರೂಪಣೆಗಳನ್ನು ಅರ್ಥೈಸಿಕೊಳ್ಳಲಾಗುತ್ತಿದೆ.