ಆಧುನಿಕ ಭಾರತೀಯ ಜ್ಞಾನ ಪ್ರಸರಣ ವ್ಯವಸ್ಥೆಯಲ್ಲಿ ಶಿಕ್ಷಣ ಸಮಿತಿಗಳ ಪಾತ್ರ.
Keywords:
ಜ್ಞಾನ ಪ್ರಸರಣ, ಜ್ಞಾನದ ಹರಿವು ಪಟ್ಟಿ, ಉತ್ಕೃಷ್ಟತೆ, ವಿಜ್ಞಾನ ಮತ್ತು ತಂತ್ರಜ್ಞಾನ, ನಾಗರೀಕ ಸಮಾಜ, ಶಿಕ್ಷಣ ನೀತಿಗಳುAbstract
ಸಾಂಪ್ರದಾಯಿಕ ಭಾರತೀಯ ಜ್ಞಾನ ವಿಕಸನ ಸ್ಪಷ್ಟ ರೂಪರೇಷಗಳು ಇಂದು ವೈಜ್ಞಾನಿಕ ನೆಲೆಗಟ್ಟಿನಲ್ಲಿ ನಿರ್ಧರಿಸಲ್ಪಡುತ್ತಿರುವುದು ಆಧುನಿಕ ಜ್ಞಾನ ಪ್ರಸರಣದ ಒಂದು ಅವಿಚ್ಛಿನ್ನ ಹಂತವಾಗಿದೆ. ಐತಿಹಾಸಿಕ ಬೆಳವಣಿಗೆಯಿಂದ ರೂಪಿತವಾದ ಮಾನವಜೀವನದ ವೈಚಾರಿಕತೆಯ ಹಲವು ರೂಪಗಳ ಸಮ್ಮಿಳಿತದ ಕೇಂದ್ರಬಿಂದು ಶಿಕ್ಷಣ ಕ್ಷೇತ್ರ ಇಂದು ವ್ಯವಸ್ಥಿತ ಚೌಕಟ್ಟಿಗೆ ಒಳಪಟ್ಟಿರುವುದಾಗಿದೆ. ಭಾರತೀಯ ಸಮಾಜದ ಹಲವು ಜ್ಞಾನ ಪ್ರಕಾರಗಳ ಉಷಾಕಿರಣದ ಅವಿಭಾಜ್ಯ ಅಂಗವೇ ಆಧುನಿಕ ಶಿಕ್ಷಣ ಸಮಿತಿಗಳು. ಅನಾಗರೀಕ ಸಮಾಜದಿಂದ ನಾಗರಿಕತೆಯೆಡೆಗೆ ನಡೆದ ಈ ಜ್ಞಾನದ ಹರಿವು ಪಟ್ಟಿಯಲ್ಲಿ ಭಾರತ ಘನ ಸರ್ಕಾರ ಶಿಕ್ಷಣ ಸಮಿತಿಗಳ ನೇಮಕದ ಮೂಲಕ ಕೈಗೊಂಡ ಕೆಲವು ನಿರ್ಣಾಯಕ ವಿಚಾರಗಳು ಮತ್ತು ಅದರ ಪ್ರಾಯೋಗಿಕತೆ ಪ್ರಸ್ತುತ ಭಾರತೀಯ ಸಮಾಜದ ವ್ಯವಸ್ಥಿತ ಜ್ಞಾನ ಪ್ರಸರಣದ ಉತ್ಕೃಷ್ಟತೆಯನ್ನು ಸಾರುವುದಾಗಿದೆ. ಉದಾಹರಣೆಗೆ; ರಾಧಾಕೃಷ್ಣ ಸಮಿತಿ, ಕೊಠಾರಿ ಸಮಿತಿ, ಮೊದಲಿಯಾರ್ ಸಮಿತಿ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಗಳು.
ಮೌಖಿಕ ಜ್ಞಾನ ಪ್ರಸರಣದ ಪ್ರಾರಂಭಿಕ ಹಂತವು ಸೀಮಿತ ಸಮುದಾಯದ ಮುಖ್ಯವಾಹಿನಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಭಾರತೀಯ ಸಮುದಾಯದ ಬೆಳವಣಿಗೆಯೊಂದಿಗೆ ಸಂಪೂರ್ಣ ನಾಗರೀಕ ಸಮಾಜವನ್ನು “ಸಾಹಿತ್ಯ” ಪ್ರಕಾರದ ಮೂಲಕ ಆವರಿಸಿಕೊಳ್ಳಲು ಪ್ರಾರಂಭಿಸಿದವು. ಪ್ರಮುಖವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯು ಪ್ರತಿಯೊಬ್ಬ ನಾಗರಿಕನಿಗೂ ಸುಲಭವಾಗಿ ಮತ್ತು ಶೀಘ್ರವಾಗಿ ಜ್ಞಾನ ಪ್ರಸಾರವಾಗಲು ಕಾರಣವಾಯಿತು. ಇದು ಶಿಕ್ಷಣ ಕ್ಷೇತ್ರದ ಮೇಲೆ ಪ್ರಭಾವಿಸುವ ಮೂಲಕ ಜ್ಞಾನಪ್ರಸಾರದ ಅವಿಭಜಿತ ಅಂಗವಾಗಿ ಪ್ರಗತಿ ಹೊಂದಲು ಕಾರಣವಾಯಿತು. ಆದ್ದರಿಂದ ಆಧುನಿಕ ಭಾರತೀಯ ಜ್ಞಾನ ವ್ಯವಸ್ಥೆಯಲ್ಲಿ ಶಿಕ್ಷಣ ಸಮಿತಿಗಳು ನೀಡಿದ ವರದಿಗಳು ಮತ್ತು ಸುಧಾರಣೆಗಳು ನಾಗರೀಕ ಸಮಾಜವನ್ನು ಗರಿಷ್ಠಮಟ್ಟದಲ್ಲಿ ಜ್ಞಾನ ವ್ಯವಸ್ಥೆಯೊಳಗೆ ತರಲು ಸಾಧ್ಯವಾಯಿತು ಎಂಬುದನ್ನು ತಿಳಿಯೋಣ.