ಶಿವರಾಮ ಕಾರಂತರ ಪರಿಸರ ಪಜ್ಞೆ.
Abstract
ವಿಜ್ಞಾನ, ತಂತ್ರಜ್ಞಾನದಲ್ಲಿ ನಮ್ಮ ಸಾಧನೆ ಎಷ್ಟೇ ಇದ್ದರೂ ಅದಕ್ಕೆ ಸರಿಸಾಟಿಯಾಗಿ ನಮ್ಮ ವೈಫಲ್ಯಗಳು ಗುಡ್ಡದಷ್ಟಿವೆ. ಶಿವರಾಮ ಕಾರಂತರ ಕಾಲದಲ್ಲಿದ್ದಂತಹ ದಟ್ಟವಾದ, ವಿಶಾಲವಾದ ಅರಣ್ಯ ಇಂದು ಮಲೆನಾಡಿನಲ್ಲಿ ಹಾಗೂ ಕರಾವಳಿ ಭಾಗದಲ್ಲಿ ಇಲ್ಲ. ಪ್ರಕೃತಿಯನ್ನು ಪಳಗಿಸುವ ಮಾನವನ ಪ್ರಯತ್ನಗಳು ಪದೇ ಪದೇ ವಿಫಲವಾಗುತ್ತಿವೆ. ಕಳೆದ 8-10 ವರ್ಷಗಳಲ್ಲಿ ಕರಾವಳಿ, ಮಲೆನಾಡು ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಅತಿಯಾದ ರಸಾಯನಿಕಗಳ ಬಳಕೆಯಿಂದ ಮಣ್ಣು ವಿಷವಾಗುತ್ತಿದೆ. ಲೆಕ್ಕವಿಲ್ಲದಷ್ಟು ಪ್ಲಾಸ್ಟಿಕ್ ಕಡಲನ್ನು ಸೇರುತ್ತಿದೆ. ಪ್ರಕೃತಿ ಸಂರಕ್ಷಣೆಗಾಗಿ ಜನರು ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಪ್ರಕೃತಿಯ ನಡುವೆ ನಾವು ಬದುಕುತ್ತಿದ್ದೇವೆ. ಈ ಪ್ರಕೃತಿ ನಮಗೆ ಎಲ್ಲವನ್ನೂ ನೀಡುತ್ತಿದೆ. ಇದನ್ನು ಉಳಿಸಿಕೊಳ್ಳಬೇಕು ಎಂಬ ಅರಿವು ನಮಗಿರಬೇಕು. ಸಾರ್ವಜನಿಕರು, ಜನಪ್ರತಿನಿದಿಗಳು, ಸರ್ಕಾರದ ಅಧಿಕಾರಿಗಳು ಈ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡರೆ ಒಳಿತು. ಪ್ರಕೃತಿಗೆ ತೊಂದರೆ ಕೊಡಬಾರದು ಮತ್ತು ನಾಶಗೊಳಿಸಬಾರದು ಎಂಬ ತಿಳುವಳಿಕೆ ಬಹಳ ಮುಖ್ಯ. ಪ್ರಕೃತಿ ವಿಕೋಪಗೊಂಡರೆ ಅದನ್ನು ತಡೆಯಲು ಸಾಧ್ಯವಿಲ್ಲ.